ಬೆಳಗಾವಿ: ಪಂಚಮಸಾಲಿ ಹೋರಾಟ ಅಂತಿಮ ಹಂತ ತಲುಪಿದೆ. 2 ಎ ಮೀಸಲಾತಿ ನೀಡುವಲ್ಲಿ ಸರ್ಕಾರ ವಿಳಂಬ ನೀತಿ ತೋರುತ್ತಿರುವುದನ್ನು ಖಂಡಿಸಿ ಬರುವ ಡಿಸೆಂಬರ್ 12 ರಂದು 25 ಲಕ್ಷ ಜನರಿಂದ ವಿಧಾನಸೌಧಕ್ಕೆ ಮುತ್ತಿಗೆ ಹಾಕುತ್ತೇವೆ ಎಂದು ಪಂಚಮಸಾಲಿ ಸಮುದಾಯದ ಕೂಡಲಸಂಗಮ ಪೀಠಾಧ್ಯಕ್ಷ ಬಸವಜಯ ಮೃತ್ಯುಂಜಯ ಸ್ವಾಮೀಜಿ ಹೇಳಿದರು.
ಹುಕ್ಕೇರಿಯಲ್ಲಿ ಹಮ್ಮಿಕೊಂಡ ಪಂಚಮಸಾಲಿ ಲಿಂಗಾಯತ ಸಮಾವೇಶದಲ್ಲಿ ಮಾತನಾಡಿದ ಅವರು, ನಮ್ಮ ಸಮಾಜದ 2ಎ ಮೀಸಲಾತಿ ಹೋರಾಟ ಕೆಲವೇ ದಿನಗಳಲ್ಲಿ ತಾರ್ಕಿಕ ಅಂತ್ಯ ಕಾಣಲಿದೆ. ಸರ್ಕಾರದ ವಿಳಂಬ ನೀತಿ ಖಂಡಿಸಿ ಪಂಚಮಸಾಲಿ ಸಮುದಾಯದಿಂದ ಸಮಾವೇಶ ನಡೆಸಲಾಗುತ್ತಿದೆ. ಶೇ 82ರಷ್ಟು ಬಹುಸಂಖ್ಯಾತ ಪಂಚಮಸಾಲಿ ಸಮಾಜದವರು ಅಧಿಕಾರದಿಂದ ವಂಚಿತರಾಗಿದ್ದಾರೆ. ಪಂಚಮಸಾಲಿ ಹೃದಯವಂತ ಸಮಾಜ, ನಾನು ಪೀಠಾಧ್ಯಕ್ಷನಾದ ಬಳಿಕ ಎಂದೆಂದಿಗೂ ಯಾರೂ ಏನನ್ನೂ ಕೇಳಿಲ್ಲ. ಮೀಸಲಾತಿ ಸಿಗೋವರೆಗೂ ಏನೂ ಬೇಡ, ಹೋರಾಟಕ್ಕೆ ಬನ್ನಿ ಎಂದು ಕರೆ ಕೊಟ್ಟಿದ್ದೇನೆ ಎಂದು ತಿಳಿಸಿದರು.
ಇದನ್ನೂ ಓದಿ:ಹುಲಿ ಯಾವತ್ತಿದ್ದರೂ ಹುಲಿಯೇ ಹೊರತು ಇಲಿಯಾಗಲು ಸಾಧ್ಯವಿಲ್ಲ: ಬಸವ ಜಯಮೃತ್ಯುಂಜಯ ಸ್ವಾಮೀಜಿ
ಬಿಜೆಪಿ ಹಿರಿಯ ನಾಯಕರು ಪಂಚಮಸಾಲಿಗಳಿಗೆ ಅಗೌರವ ಕೊಡುವ ಹೇಳಿಕೆ ಕೊಟ್ಟಿದ್ದರಿಂದ ಸಮಾಜದಲ್ಲಿ ಆಕ್ರೋಶ ವ್ಯಕ್ತವಾಗಿದೆ. ಮೀಸಲಾತಿ ಹೋರಾಟದಲ್ಲಿ ಭಾಗಿಯಾದ ನಾಯಕರ ವಿಚಾರದಲ್ಲಿ ತಪ್ಪಾಗಿ ನಡೆಸುಕೊಳ್ಳುವ, ಅಗೌರವ ಮಾಡಿದ್ದೆ ಆದರೆ ನಾವು ಸುಮ್ಮನೆ ಇರಲಿಕ್ಕೆ ಸಾಧ್ಯವಿಲ್ಲ ಎನ್ನುವುದನ್ನು ಈ ಸಮಾವೇಶ ತೋರಿಸಿಕೊಟ್ಟಿದೆ ಎಂದರು.