ಬೆಳಗಾವಿ: ಮಹದಾಯಿ ಯೋಜನೆ ವಿಚಾರದಲ್ಲಿ ಯಾರೂ ಆತಂಕಪಡುವ ಅಗತ್ಯವಿಲ್ಲ. ಈಗಾಗಲೇ ಕೇಂದ್ರ ಸರ್ಕಾರ ಡಿಪಿಆರ್ ಅನುಮೋದನೆ ನೀಡಿದೆ. ಅಂತರ್‌ರಾಜ್ಯ ನೀರು ಹಂಚಿಕೆ ಸಮಿತಿ ನೀರು ಹಂಚಿಕೆಯನ್ನು ಈಗಾಗಲೇ ಮಾಡಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರು ಮಹದಾಯಿ ಪ್ರಾಧಿಕಾರ ರಚನೆಗೆ ಅನುಮೋದನೆ ಕೊಟ್ಟಿದ್ದಾರೆ. ಈ ಪ್ರಾಧಿಕಾರದಲ್ಲಿ ಗೋವಾ, ಕರ್ನಾಟಕ, ಮಹಾರಾಷ್ಟ್ರ ಸರ್ಕಾರಗಳ ಪ್ರತಿನಿಧಿಗಳು ಇರುತ್ತಾರೆ. ಜೊತೆಗೆ, ನೀರು ಯಾವ ರೀತಿ ನಿರ್ವಹಣೆ ಮಾಡ್ಬೇಕೆಂಬ ಕಾರ್ಯಗಳನ್ನು ಮಾಡುತ್ತಾರೆ ಎಂದು ಜಲಸಂಪನ್ಮೂಲ ಸಚಿವ ಹಾಗೂ ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವ ಗೋವಿಂದ ಕಾರಜೋಳ ತಿಳಿಸಿದರು.
ಬೆಳಗಾವಿ ನಗರದಲ್ಲಿ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿ, ಕಳಸಾದಲ್ಲಿ 1.72 ಟಿಎಂಸಿ ನೀರು ವಂಡೋರಾದಲ್ಲಿ 2.80 ಟಿಎಂಸಿ ನೀರು ಸೇರಿ ಒಟ್ಟು ಕರ್ನಾಟಕಕ್ಕೆ ನ್ಯಾಯಾಲಯದಿಂದ 3.9 ಟಿಎಂಸಿ ನೀರು ಹಂಚಿಕೆ ಮಾಡಲಾಗಿದೆ. ಎಲ್ಲಾ ಆಯಾಮಗಳಲ್ಲಿ ಅಭಿಪ್ರಾಯ ಪಡೆಯಲು ವ್ಯವಸ್ಥೆ ಮಾಡಲಾಗಿದೆ. ಯೋಜನೆಗೆ ಕೆಲವು ಕಾಡು ಪ್ರದೇಶ ಮುಳುಗಡೆ ಆಗುವುದರಿಂದ ಅರಣ್ಯ ಇಲಾಖೆಗೆ ಪರ್ಯಾಯವಾಗಿ ಅಥಣಿ ತಾಲೂಕಿನ ಕೆಲವು ಭೂ ಪ್ರದೇಶ ಗುರುತಿಸಿ ಅವರಿಗೆ ಭೂಮಿ ನೀಡಲಾಗಿದೆ. ಆದಷ್ಟು ಬೇಗ ಈ ಕಾಮಗಾರಿ ಚಾಲನೆ ನೀಡಲಾಗುವುದು ಎಂದು ಭರವಸೆ ನೀಡಿದರು.
ಪ್ರಧಾನಿ ಮೋದಿ ಅವರು ಇದೇ 27ಕ್ಕೆ ಬೆಳಗಾವಿ ನಗರಕ್ಕೆ ಆಗಮಿಸುತ್ತಿದ್ದಾರೆ. ಒಟ್ಟು 2250 ಕೋಟಿ ರೂಪಾಯಿ ವೆಚ್ಚದಲ್ಲಿ ಕಾಮಗಾರಿಗೆ ಉದ್ಘಾಟನೆ ಹಾಗೂ ಶಂಕು ಸ್ಥಾಪನೆ ಮಾಡಲಿದ್ದಾರೆ. 190 ಕೋಟಿ ರೂಪಾಯಿ ವೆಚ್ಚದಲ್ಲಿ ಬೆಳಗಾವಿ ರೈಲು ನಿಲ್ದಾಣ ಮೂರು ನಿರ್ಮಾಣವಾಗಿರುವ ಕಾಮಗಾರಿ ಉದ್ಘಾಟನೆ. ಬೆಳಗಾವಿ- ಲೋಂಡಾ ದ್ವಿಪಂಥ ಮಾರ್ಗ 932 ಕೋಟಿ ರೂಪಾಯಿ ವೆಚ್ಚದಲ್ಲಿ ಕಾಮಗಾರಿಗೆ ಚಾಲನೆ ಮಾಡಲಿದ್ದಾರೆ. ರೈಲ್ವೆ ಇಲಾಖೆಯಿಂದ ಒಟ್ಟು 1122 ಕೋಟಿ ರೂಪಾಯಿ ವೆಚ್ಚದಲ್ಲಿ ಪ್ರಧಾನಿ ಅವರು ಚಾಲನೆ ನೀಡಲಿದ್ದಾರೆ. ಜೊತೆಗೆ ಜಲ ಜೀವನ ಮಿಷನ್ ಯೋಜನೆ 1030 ಕೋಟಿ ರೂಪಾಯಿ ವೆಚ್ಚದಲ್ಲಿ ಕಾಮಗಾರಿಗೆ ಚಾಲನೆ ನೀಡಲಿದ್ದಾರೆ ಎಂದು ಸಚಿವರು ತಿಳಿಸಿದರು.