ಅಥಣಿ(ಬೆಳಗಾವಿ):ಇಲ್ಲಿನ ಸಮುದಾಯ ಆಸ್ಪತ್ರೆಯಲ್ಲಿ ನವಜಾತ ಶಿಶು ಕಳ್ಳತನವಾಗಿರುವ ಪ್ರಕರಣ ನಡೆದಿದೆ. ಬೆಳಗಾವಿ ಜಿಲ್ಲೆಯ ಅಥಣಿ ಪಟ್ಟಣದ ಸಮುದಾಯ ಆಸ್ಪತ್ರೆಯಲ್ಲಿ ಬೆಳಗ್ಗೆ 10 ಗಂಟೆ ಸುಮಾರಿಗೆ ನರ್ಸ್ ವೇಷದಲ್ಲಿ ಬಂದ ಓರ್ವ ಯುವತಿ ಮಗುವನ್ನು ಹೊತ್ತೊಯ್ದಿದ್ದಾಳೆ. ಮಗುವಿನ ತೂಕ ಮಾಡಿಕೊಂಡು ಬರುವುದಾಗಿ ಹೇಳಿ, ನವಜಾತ ಶಿಶುವನ್ನು ತೆಗೆದುಕೊಂಡು ಹೋಗಿದ್ದಾಳಂತೆ.
ಕಾಗವಾಡ ತಾಲೂಕಿನ ಐನಾಪುರ ಗ್ರಾಮದ ಅಂಬಿಕಾ ಅಮೀತ ಭೋವಿ ದಂಪತಿಯ ಗಂಡು ಮಗು ಕಳ್ಳತನವಾಗಿದೆ. ಕಳೆದ ರಾತ್ರಿ 11 ಗಂಟೆಗೆ ಅಥಣಿ ಸಮುದಾಯ ಆಸ್ಪತ್ರೆಯಲ್ಲಿ ಹೆರಿಗೆಯಾಗಿ ಅಲ್ಲೇ ದಾಖಲಾಗಿದ್ದರು. ಆದರೆ ಇಂದು ಬೆಳಗ್ಗೆ ಈ ಘಟನೆ ನಡೆದಿದೆ. ಅಥಣಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಆಸ್ಪತ್ರೆಯ ಸಿಸಿ ಕ್ಯಾಮರಾದಲ್ಲಿ ಕಳ್ಳತನ ಮಾಡಿರುವ ನರ್ಸ್ ವೇಷಧಾರಿಯ ದೃಶ್ಯ ಸೆರೆಯಾಗಿದೆ. ಅಥಣಿ ಪೊಲೀಸರು ತನಿಖೆ ಕೈಗೊಂಡಿದ್ದಾರೆ.