ಬೆಳಗಾವಿ: ಆರ್‌ಆರ್ ನಗರ, ಶಿರಾ ಉಪಚುನಾವಣೆ ಪ್ರತಿಷ್ಠೆಯ ಕಣವಲ್ಲ, ಟ್ರಯಲ್ ಅಷ್ಟೇ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಅಭಿಪ್ರಾಯಪಟ್ಟಿದ್ದಾರೆ. ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ರಾಜ್ಯದಲ್ಲಿ ಈಗ ನಡೆಯಲಿರುವ ಉಪಚುನಾವಣೆ ಪ್ರತಿಷ್ಠಿತ ಚುನಾವಣೆ ಅಲ್ಲ ಎಂದಿದ್ದಾರೆ.
ಆರ್‌ಆರ್ ನಗರ, ಶಿರಾ ಉಪಚುನಾವಣೆ ಕುರಿತು ಶಾಸಕ ಸತೀಶ್ ಜಾರಕಿಹೊಳಿ ಪ್ರತಿಕ್ರಿಯೆ ಆರ್‌ಆರ್ ನಗರದಲ್ಲಿ ಕಳೆದ ಚುನಾವಣೆಯಲ್ಲಿ ಕಾಂಗ್ರೆಸ್ ಗೆದ್ದಿತ್ತು. ಕ್ಷೇತ್ರ ಉಳಿಸಿಕೊಳ್ಳಲು ಪ್ರಯತ್ನಿಸಲಾಗುವುದು. ಶಿರಾದಲ್ಲಿ ನಮ್ಮ ಆಂತರಿಕ ಸಮಸ್ಯೆಯಿಂದ ಕಳೆದ ಚುನಾವಣೆಯಲ್ಲಿ ಸೋತಿದ್ದೇವೆ. ಈಗ ಎಲ್ಲರೂ ಒಂದಾಗಿದ್ದು, ಶಿರಾದಲ್ಲಿ ಗೆಲ್ಲಲು ಬಹಳಷ್ಟು ಅವಕಾಶಗಳಿವೆ. ಶಿರಾಕ್ಕೆ ತೆರಳಿ ನಾನು ಕೂಡ ಪ್ರಚಾರ ನಡೆಸುತ್ತೇನೆ ಎಂದರು.
ಬೆಳಗಾವಿ ಲೋಕಸಭೆ ಉಪಚುನಾವಣೆ ದಿನಾಂಕ ಇನ್ನೂ ಘೋಷಣೆಯಾಗಿಲ್ಲ. ಚುನಾವಣೆ ದಿನಾಂಕ ಘೋಷಣೆಯಾದ ಬಳಿಕವೇ ಅಭ್ಯರ್ಥಿ ಆಯ್ಕೆ ಘೋಷಣೆ ಆಗಲಿದೆ. ದಿನಾಂಕ ಘೋಷಣೆ ಆದ ಬಳಿಕವೇ ಸಭೆ ಕರೆದು ಚರ್ಚೆ ಮಾಡುತ್ತೇವೆ ಎಂದರು.
ಯಾರಾದರೂ ಆಕಾಂಕ್ಷಿಗಳಿದ್ದರೆ ಅವರ ಜತೆ ಚರ್ಚಿಸುತ್ತೇವೆ. ಈ ಸಂಬಂಧ 15 ದಿನ ಬಿಟ್ಟು ಸಭೆ ನಡೆಸುತ್ತೇವೆ. ಅಧಿವೇಶನದಲ್ಲಿ ಕೊರೊನಾ ಬಗ್ಗೆ ಚರ್ಚೆ ಮಾಡಲು ಅವಕಾಶ ಕೊಡದೇ ಸರ್ಕಾರವೇ ಎಸ್ಕೇಪ್ ಆಗಿ ಹೋಗಿದೆ. ಸರ್ಕಾರದ್ದು ಮೊದಲೇ ಪ್ಲಾನ್ ಇತ್ತು ಅನಿಸುತ್ತೆ. ಹೀಗಾಗಿ ಯಾವುದಕ್ಕೂ ಸಮರ್ಪಕ ಉತ್ತರ ಕೊಟ್ಟಿಲ್ಲ. ಪಕ್ಷ ತೀರ್ಮಾನ ತೆಗೆದುಕೊಂಡಂತೆ ಹೋರಾಟ ಮಾಡುತ್ತೇವೆ. ಪ್ರವಾಹದ ಪರಿಹಾರಕ್ಕಾಗಿ ಮುಂದಿನ ದಿನಗಳಲ್ಲಿ ಪಕ್ಷದಿಂದ ಪ್ರತಿಭಟನೆ ನಡೆಸುತ್ತೇವೆ ಎಂದು ಪ್ರತಿಕ್ರಿಯಿಸಿದರು.
ಇದಲ್ಲದೆ ನಾಳೆ ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್ ಬೆಳಗಾವಿಗೆ ಆಗಮಿಸಲಿದ್ದಾರೆ. ಜಿಲ್ಲೆಯ ಗೋಕಾಕ್ ತಾಲೂಕಿನ ಘಟಪ್ರಭಾದಲ್ಲಿ ನಿರ್ಮಿಸಲಾದ ಸೇವಾದಳ ಕೇಂದ್ರ ಹಾಗೂ ಬೆಳಗಾವಿಯಲ್ಲಿರುವ ಕಾಂಗ್ರೆಸ್ ಭವನ ಉದ್ಘಾಟಿಸಲಿದ್ದಾರೆ ಎಂದರು.