ಬೆಳಗಾವಿ: ಹೊಸಪೇಟೆಯಲ್ಲಿ ನಡೆಯಲಿರುವ ಬಿಜೆಪಿ ಕಾರ್ಯಕಾರಿಣಿ ಸಭೆ ಬಳಿಕ ರಾಜ್ಯ ಸಚಿವ ಸಂಪುಟ ವಿಸ್ತರಣೆ ಇಲ್ಲವೇ ಪುನಾರಚನೆ ನಡೆಯುವ ಸಾಧ್ಯತೆ ಇದೆ. ಈ ವೇಳೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಂಪುಟದಲ್ಲಿ ಗೋಕಾಕ್ ಶಾಸಕ ರಮೇಶ್ ಜಾರಕಿಹೊಳಿ ಸ್ಥಾನ ಗಿಟ್ಟಿಸುತ್ತಾರಾ? ಎಂಬುದು ಕುತೂಹಲಕ್ಕೆ ಕಾರಣವಾಗಿದೆ.
ಮತ್ತೆ ಸಚಿವರಾಗಲು ರಮೇಶ್ ಜಾರಕಿಹೊಳಿ ಶತಾಯಗತಾಯ ಪ್ರಯತ್ನ ನಡೆಸುತ್ತಿದ್ದಾರೆ. ಆರ್‌ಎಸ್‌ಎಸ್ ನಾಯಕರ ಭೇಟಿ ಜತೆಗೆ ರಮೇಶ್ ಜಾರಕಿಹೊಳಿ ದೆಹಲಿ ಬಿಜೆಪಿ ಮತ್ತು ಮಹಾರಾಷ್ಟ್ರ ಮಾಜಿ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಜತೆಗೆ ನಿರಂತರ ಸಂಪರ್ಕದಲ್ಲಿದ್ದಾರೆ. ಮತ್ತೊಂದೆಡೆ ಅಭಿಮಾನಿಗಳು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡುತ್ತಿದ್ದಾರೆ.
'ಅತಿ ಶೀಘ್ರದಲ್ಲೇ ಮತ್ತೆ ರಮೇಶ್ ಅಣ್ಣಾ ಜಾರಕಿಹೊಳಿ ಮಂತ್ರಿ ಆಗಲಿದ್ದಾರೆ. ನಮ್ಮ ಸಾಹುಕಾರ್ ನಮ್ಮ ಹೆಮ್ಮೆ ಎಂದು ವಾಟ್ಸ್ ಆ್ಯಪ್ ಗ್ರೂಪ್‌ಗಳಲ್ಲಿ ಪೋಸ್ಟ್ ಮಾಡಲಾಗುತ್ತಿದೆ. ಸಹೋದರ ಲಖನ್ ಜಾರಕಿಹೊಳಿ ಅಭಿಮಾನಿಗಳ ವಾಟ್ಸ್ ಆ್ಯಪ್ ಗ್ರೂಪ್‌ನಲ್ಲಿ ರಮೇಶ್ ಜಾರಕಿಹೊಳಿ ಮತ್ತೆ ಮಂತ್ರಿಯಾಗುತ್ತಾರೆ' ಎಂದು ಅಭಿಮಾನಿಗಳು ಪೋಸ್ಟ್ ಮಾಡುತ್ತಿದ್ದಾರೆ.
ಮತ್ತೊಂದೆಡೆ ಹೊಸಪೇಟೆ ಬಿಜೆಪಿ ಕಾರ್ಯಕಾರಿಣಿ ಮೇಲೆ ಸಾಹುಕಾರ್ ಕಣ್ಣಿಟ್ಟಿದ್ದಾರೆ. ಕೆಲ ದಿನಗಳ ಹಿಂದೆ ದೆಹಲಿಗೆ ತೆರಳಿ ಅಮಿತ್ ಶಾ ಭೇಟಿಗೆ ರಮೇಶ್ ಜಾರಕಿಹೊಳಿ ಪ್ರಯತ್ನಿಸಿದ್ದರು. ಆದರೆ ಉಭಯ ನಾಯಕರ ಭೇಟಿ ಸಾಧ್ಯವಾಗಿರಲಿಲ್ಲ. ಏ.16 ಹಾಗೂ 17ರಂದು ಹೊಸಪೇಟೆಯಲ್ಲಿ ರಾಜ್ಯ ಬಿಜೆಪಿ ಕಾರ್ಯಕಾರಿಣಿ ಇದೆ. ರಾಜ್ಯ ಬಿಜೆಪಿ ಕಾರ್ಯಕಾರಿಣಿಗೆ ಅಮಿತ್ ಶಾ ಆಗಮಿಸುವ ಸಾಧ್ಯತೆ ಇದೆ. ಈ ವೇಳೆ ಅಮಿತ್ ಶಾ ಭೇಟಿಯಾಗಿ ಸಚಿವ ಸ್ಥಾನಕ್ಕೆ ಮನವಿ ಮಾಡಲು ರಮೇಶ್ ನಿರ್ಧರಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಇದನ್ನೂ ಓದಿ:ಕಾರ್ಯಕಾರಿಣಿ ನಂತರ ಸಂಪುಟ ವಿಸ್ತರಣೆ: ಸಿಎಂ ಬೊಮ್ಮಾಯಿ