ಕರ್ನಾಟಕ

karnataka

ETV Bharat / state

ಕರ್ನಾಟಕ ಬಂದ್​ ಮಾಡಿದರೆ ತಮಿಳುನಾಡಿಗೆ ಹರಿಸುತ್ತಿರುವ ನೀರು ನಿಲ್ಲಲ್ಲ: ಶಾಸಕ ಲಕ್ಷ್ಮಣ ಸವದಿ - etv bharat karnataka

ಕಾವೇರಿ ವಿಚಾರವಾಗಿ ಪ್ರತಿಭಟನೆ ಮಾಡಲಿ, ಆದರೆ ಇಡೀ ರಾಜ್ಯ ಬಂದ್​ ಮಾಡುವುದರಿಂದ ಸಾರ್ವಜನಿಕರಿಗೆ ತೊಂದರೆಯಾಗುತ್ತದೆ ಎಂದು ಶಾಸಕ ಲಕ್ಷ್ಮಣ ಸವದಿ ಹೇಳಿದರು.

mla-lakshman-savadi-reaction-on-karnataka-bandh
ಕರ್ನಾಟಕ ಬಂದ್​ ಮಾಡಿದರೆ ತಮಿಳುನಾಡಿಗೆ ಹರಿಸುತ್ತಿರುವ ನೀರು ನಿಲ್ಲಲ್ಲ: ಶಾಸಕ ಲಕ್ಷ್ಮಣ ಸವದಿ

By ETV Bharat Karnataka Team

Published : Sep 29, 2023, 7:04 PM IST

Updated : Sep 29, 2023, 8:05 PM IST

ಶಾಸಕ ಲಕ್ಷ್ಮಣ ಸವದಿ

ಚಿಕ್ಕೋಡಿ(ಬೆಳಗಾವಿ): ಕಾವೇರಿ ವಿಚಾರವಾಗಿ ಪ್ರತಿಭಟನೆ ಮಾಡುವುದಕ್ಕೆ ನಾನು ತುಂಬು ಹೃದಯದಿಂದ ಸ್ವಾಗತ ಮಾಡುತ್ತೇನೆ. ಆದರೆ, ಅದನ್ನೇ ನೆಪ ಮಾಡಿಕೊಂಡು ಇಡೀ ರಾಜ್ಯ ಬಂದ್​ ಮಾಡುವುದು ಸರಿಯಲ್ಲ ಎಂದು ಶಾಸಕ ಲಕ್ಷ್ಮಣ ಸವದಿ ಹೇಳಿದರು. ಜಿಲ್ಲೆಯ ಅಥಣಿ ತಾಲೂಕಿನ ನಂದಗಾವ ಗ್ರಾಮದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸಾರ್ವಜನಿಕರಿಗೆ ತೊಂದರೆಯಾಗುವ ದೃಷ್ಟಿಯಿಂದ ಬಂದ್​ ಮಾಡಬಾರದು, ಬಂದ್​ ಮಾಡುವುದರಿಂದ ತಮಿಳುನಾಡಿಗೆ ಹರಿಸುತ್ತಿರುವ ನೀರು ನಿಲ್ಲಲ್ಲ ಎಂದು ಹೇಳಿದರು.

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರತಿಭಟನೆ ಮಾಡಲು ಹಕ್ಕಿದೆ, ಸಂವಿಧಾನದ ಬದ್ಧವಾಗಿ ಸರ್ಕಾರದ ಗಮನ ಸೆಳೆಯುವುದಕ್ಕೆ ಪ್ರತಿಭಟನೆ ಮಾಡಲಿ. ಕಾವೇರಿ ವಿಚಾರವಾಗಿ ತಮಿಳುನಾಡಿಗೆ ಮನವರಿಕೆ ಮಾಡಲು ಪ್ರತಿಭಟನೆ ಮಾಡಲಿ, ಆದರೆ ಇಡೀ ರಾಜ್ಯ ಬಂದ್​ ಮಾಡುವುದರಿಂದ ಸಾರ್ವಜನಿಕರಿಗೆ ತೊಂದರೆಯಾಗುತ್ತದೆ ಇದನ್ನು ನಾನು ಒಪ್ಪಲ್ಲ ಎಂದರು.

ಬಿಜೆಪಿ - ಜೆಡಿಎಸ್‌ ಮೈತ್ರಿ ವಿರೋಧಿಸಿ ಆ ಪಕ್ಷಗಳ ಮುಖಂಡರು ಪಕ್ಷ ತೊರೆಯಲು ನಿರ್ಧರಿಸಿದ್ದಾರೆ ಎಂಬ ಡಿಸಿಎಂ ಡಿ ಕೆ ಶಿವಕುಮಾರ್​ ಅವರ ಹೇಳಿಕೆ ಬಗ್ಗೆ ಮಾತನಾಡಿ, ಕಾಲ ಕೂಡಿಬರಬೇಕು, ಲೋಕಸಭೆ ಚುನಾವಣೆ ಸಮೀಪ ಬಂದಾಗ ಬಹಳಷ್ಟು ಜನ ಹಾಲಿ ಮತ್ತು ಮಾಜಿ ಶಾಸಕರು ಬಿಜೆಪಿ ಮತ್ತು ಜೆಡಿಎಸ್​ ತೊರೆದು ಕಾಂಗ್ರೆಸ್​ ಸೇರುವುದಕ್ಕೆ ಆಸಕ್ತಿಯನ್ನು ಹೊಂದಿದ್ದಾರೆ. ರಮೇಶ್ ಕತ್ತಿ ಅವರು ಕಾಂಗ್ರೆಸ್ ಸೇರುವ ಬಗ್ಗೆ ಚರ್ಚೆಯಾಗಿಲ್ಲ, ಕಾಲ ಕೂಡಿಬಂದಾಗ ಅದರ ನಾವು ಅಲೋಚನೆಯನ್ನು ಮಾಡುತ್ತೇವೆ ಎಂದರು.

ಕರವೇ ಚಿಕ್ಕೋಡಿ ತಾಲೂಕು ಅಧ್ಯಕ್ಷ ಕೃಷ್ಣ ಕೆಂಚ್ನವರ್

ಕರವೇ ಕಾರ್ಯಕರ್ತರಿಂದ ಪ್ರತಿಭಟನೆ:ತಮಿಳುನಾಡಿಗೆ ಕಾವೇರಿ ನೀರನ್ನು ಹರಿಸುತ್ತಿರುವುದನ್ನು ಖಂಡಿಸಿ ವಿವಿಧ ಸಂಘಟನೆಗಳು ಕರೆ ನೀಡಿದ್ದ ಕರ್ನಾಟಕ ಬಂದ್​ಗೆ ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯಲ್ಲಿ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ. ಇಲ್ಲಿ​ ಪ್ರತಿಭಟನೆಗೆ ಮಾತ್ರ ಸೀಮಿತವಾಗಿದ್ದು, ಎಂದಿನಂತೆ ವ್ಯಾಪಾರ ವಹಿವಾಟು, ವಾಹನ ಸಂಚಾರ, ಶಾಲಾ ಕಾಲೇಜುಗಳು ನಡೆದವು.

ಕರ್ನಾಟಕ ರಕ್ಷಣಾ ವೇದಿಕೆಯ ಕಾರ್ಯಕರ್ತರು, ಚಿಕ್ಕೋಡಿ ಪ್ರವಾಸ ಮಂದಿರದಿಂದ ಬಸವೇಶ್ವರ ರಥದವರಿಗೆ ಸರ್ಕಾರದ ಅಣಕು ಶವಯಾತ್ರೆ ನಡೆಸಿ ಬೊಬ್ಬೆ ಹಾಕಿ ಸರ್ಕಾರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಚಿಕ್ಕೋಡಿ ಬಸವೇಶ್ವರ ವೃತ್ತದಲ್ಲಿ ಪ್ರತಿಭಟನಾಕಾರರು ಕೆಲವು ವಾಹನಗಳನ್ನು ತಡೆದು ಸರ್ಕಾರಗಳ ವಿರುದ್ಧ ಕಿಡಿಕಾರಿದರು. ಅಥಣಿ ಪಟ್ಟಣದಲ್ಲಿ ಕರವೇ ತಾಲೂಕು ಅಧ್ಯಕ್ಷ ಉದಯ್ ಮಕಾಣಿ ನೇತೃತ್ವದಲ್ಲಿ ಮಾನವ ಸರಪಳಿ ನಿರ್ಮಿಸಿ ಸರ್ಕಾರ ವಿರುದ್ಧ ಘೋಷಣೆಯನ್ನು ಕೂಗಿ ಕೆಲವು ಕಾಲ ಪ್ರತಿಭಟನೆ ನಡೆಸಿ, ತಹಶೀಲ್ದಾರ್ ರಾಜೇಶ್ ಬುರ್ಲಿ ಮುಖಾಂತರ ಮನವಿ ಪತ್ರವನ್ನು ಸಲ್ಲಿಸಿದರು.

ಕರವೇ ಚಿಕ್ಕೋಡಿ ತಾಲೂಕು ಅಧ್ಯಕ್ಷ ಕೃಷ್ಣ ಕೆಂಚ್ನವರ್ ಮಾತನಾಡಿ, ಕಾವೇರಿ ವಿಚಾರದಲ್ಲಿ ಸರ್ಕಾರ ಮಲತಾಯಿ ಧೋರಣೆಯನ್ನು ಕೈಬಿಡಬೇಕು. ರಾಜ್ಯದಲ್ಲಿ ಬರಗಾಲ ತಾಂಡವಾಡುತ್ತಿದೆ ಇಂಥ ಸಂದರ್ಭದಲ್ಲಿ ಬೇರೆಯವರಿಗೆ ನೀರು ಹರಿಸುವುದು ಎಷ್ಟು ಸೂಕ್ತ. ನಮಗೆ ಕುಡಿಯುವುದಕ್ಕೂ ನೀರಿಲ್ಲ ಇಂತಹ ಸಂದರ್ಭದಲ್ಲಿ ತಮಿಳುನಾಡಿನ ಬೆಳೆಗಳಿಗೆ ಸರ್ಕಾರ ನೀರು ಹರಿಸುತ್ತಿದೆ, ಸರ್ಕಾರ ಕೂಡಲೇ ನೀರು ಹರಿಸುವುದನ್ನು ನಿಲ್ಲಿಸಬೇಕು. ನಾವು ಇವತ್ತು ಸರ್ಕಾರದ ಅಣಕು ಶವ ಯಾತ್ರೆಯನ್ನು ಮಾಡಿದ್ದೇವೆ, ಮುಂದೆ ಇದೇ ರೀತಿ ಮುಂದುವರೆದರೆ ಉಗ್ರ ಹೋರಾಟ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು.

ಇದನ್ನೂ ಓದಿ:ಕರ್ನಾಟಕ ಬಂದ್ ಯಶಸ್ವಿ.. ಹೋರಾಟ ಹತ್ತಿಕ್ಕಿದ ಸರ್ಕಾರದ ವಿರುದ್ಧ ವಾಟಾಳ್ ಆಕ್ರೋಶ : ಅ 5ಕ್ಕೆ ಕೆಆರ್​ಎಸ್ ವರೆಗೆ ಪ್ರತಿಭಟನಾ ಜಾಥಾ

Last Updated : Sep 29, 2023, 8:05 PM IST

ABOUT THE AUTHOR

...view details