ಬೆಳಗಾವಿ: ನಿನ್ನೆ ಮಧ್ಯಾಹ್ನವಷ್ಟೇ ಕಾಣೆಯಾಗಿದ್ದ ಎರಡು ವರ್ಷದ ಬಾಲಕ ಶವವಾಗಿ ಪತ್ತೆಯಾಗಿರುವ ಘಟನೆ ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲೂಕಿನ ಖಾನಪೀಠ ಗ್ರಾಮದಲ್ಲಿ ನಡೆದಿದೆ.
ನಿನ್ನೆ ನಾಪತ್ತೆಯಾಗಿದ್ದ ಎರಡು ವರ್ಷದ ಬಾಲಕ ಇಂದು ಶವವಾಗಿ ಪತ್ತೆ ವಿಕ್ರಾಂತ್ ಸೋಮಪ್ಪ ಪೂಜಾರ (2) ಎಂಬ ಬಾಲಕನ ಶವ ಬಾವಿಯೊಳಗೆ ಪತ್ತೆಯಾಗಿದೆ. ಬಾಲಕ ಆಟ ಆಡುತ್ತ ಹೋಗಿ ಬಾವಿಯಲ್ಲಿ ಬಿದ್ದಿರುವ ಬಗ್ಗೆ ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.
ನಿನ್ನೆ ಮಧ್ಯಾಹ್ನ ತಂದೆಯ ಜೊತೆಗೆ ಬಾಲಕ ಊಟ ಮಾಡಿದ್ದ. ತಂದೆ ಕೆಲಸಕ್ಕೆ ಹೋದ ನಂತರ ಬಾಲಕ ಆಟ ಆಡುತ್ತ ಹೊರಗೆ ಹೋಗಿದ್ದಾನೆ. ಬಾಲಕ ಕಾಣದಿದ್ದಾಗ ಕುಟುಂಬಸ್ಥರು ಎಲ್ಲಾ ಕಡೆ ಹುಡುಕಾಡಿದ್ದಾರೆ. ಸುಳಿವು ಸಿಗದ ಕಾರಣ ಪೋಷಕರು ನಿನ್ನೆ ಕಡಕೋಳ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಿಸಿದ್ದರು.
ಇಂದು ಬಾವಿಯಲ್ಲಿ ಶವ ಕಂಡ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ತಕ್ಷಣವೇ ಸ್ಥಳಕ್ಕೆ ಬಂದ ಪೊಲೀಸರು ಶವ ಹೊರತೆಗೆದಿದ್ದಾರೆ. ಶವ ಸೋಮಪ್ಪ ಪೂಜಾರ ಎಂಬ ಮಗುವಿನದ್ದು ಎಂದು ಗುರುತಿಸಲಾಗಿದೆ. ಸ್ಥಳಕ್ಕೆ ಧಾವಿಸಿದ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.