ಬೆಳಗಾವಿ:ಬಡ ವರ್ಗದ ಜನರಿಗೆ ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ಸಚಿವ ಸುರೇಶ್ ಅಂಗಡಿ ದಿನಸಿ ಕಿಟ್ ವಿತರಿಸಲಿದ್ದಾರೆ ಎಂಬ ವದಂತಿ ಹಬ್ಬಿ ಸಾವಿರಾರು ಜನರು ಸಚಿವರ ಕಚೇರಿ ಮುಂಭಾಗ ಜಮಾಯಿಸಿದ ಘಟನೆ ಬೆಳಗಾವಿಯಲ್ಲಿ ನಡೆದಿದೆ.
ಸಚಿವರು ದಿನಸಿ ಕಿಟ್ ಕೊಡ್ತಾರೆಂಬ ಸುದ್ದಿ ನಂಬಿ 'ಅಂಗಡಿ' ಮುಂದೆ ಸಾಲುಗಟ್ಟಿ ನಿಂತ ಸಾವಿರಾರು ಮಂದಿ! - ಸಚಿವ ಸುರೇಶ ಅಂಗಡಿ
ಸಚಿವ ಸುರೇಶ್ ಅಂಗಡಿಯವರು ದಿನಸಿ ಕಿಟ್ ವಿತರಣೆ ಮಾಡುತ್ತಾರೆಂಬ ಸುಳ್ಳು ಸುದ್ದಿ ನಂಬಿ ಬಂದ ಜನರು ಸಚಿವರ ಕಚೇರಿ ಮುಂಭಾಗ ಜಮಾಯಿಸಿದ್ದರು. ಬಳಿಕ ಜಿಲ್ಲಾಧಿಕಾರಿಗಳ ಮೂಲಕ ಜನರ ಸಮಸ್ಯೆ ಬಗೆಹರಿಸುವಂತೆ ಸೂಚಿಸಲಾಗಿದೆ.
ಸಚಿವರು ದಿನಸಿ ಕಿಟ್ ವಿತರಿಸಲಿದ್ದಾರೆ ಎಂದು ಕೆಲವರು ವದಂತಿ ಹಬ್ಬಿಸಿದ ಹಿನ್ನೆಲೆಯಲ್ಲಿ ಸಾವಿರಾರು ಮಹಿಳೆಯರು ಸಾಮಾಜಿಕ ಅಂತರ ಮರೆತು ಸಚಿವರ ಕಚೇರಿ ಮುಂಭಾಗ ಸೇರಿದ್ದರು. ಬೆಳಗಾವಿಯ ಚೆನ್ನಮ್ಮ ವೃತ್ತದಲ್ಲಿರುವ ಸಚಿವ ಸುರೇಶ್ ಅಂಗಡಿಯವರ ಕಚೇರಿ ಮುಂಭಾಗ ಬೆಳಗ್ಗೆ 6 ಗಂಟೆಯಿಂದಲೇ ಜನರು ಸಾಲುಗಟ್ಟಿ ನಿಂತಿದ್ದರು. ಬೆಳಗ್ಗೆ 11 ಗಂಟೆಗೆ ತಮ್ಮ ಕಚೇರಿಗೆ ಆಗಮಿಸಿದ ಸಚಿವರು, ಜನರನ್ನು ಕಂಡು ತಬ್ಬಿಬ್ಬಾದರು. ಇಷ್ಟು ಜನರು ಯಾಕೆ ಜಮಾಯಿಸಿದ್ದಾರೆ, ಸಮಸ್ಯೆ ಏನು ಎಂದು ಕೇಳಿದ್ದಾರೆ. ಈ ವೇಳೆ ಜನರು, ನೀವು ದಿನಸಿ ಕಿಟ್ ವಿತರಣೆ ಮಾಡ್ತೀರಿ ಎಂದು ಸೇರಿದ್ದೇವೆ ಎಂದಿದ್ದಾರೆ.
ಜನರ ಮಾತು ಕೇಳಿದ ಸಚಿವರು ಗೊಂದಲ್ಲಕ್ಕೀಡಾಗಿದ್ದಾರೆ. 'ನಾನೇಲ್ಲಿ ಆ ಥರ ಹೇಳಿದ್ದೇನೆ. ಯಾರೋ ನಿಮಗೆ ತಪ್ಪು ಮಾಹಿತಿ ನೀಡಿದ್ದಾರೆ. ಇಲ್ಲಿ ಯಾರಿಗೂ ದಿನಸಿ ಕಿಟ್ ವಿತರಿಸುತ್ತಿಲ್ಲ. ನೀವು ಮನೆಗಳಿಗೆ ತೆರಳಿ' ಎಂದಿದ್ದಾರೆ. ಸಚಿವರ ಈ ಹೇಳಿಕೆಯಿಂದ ಆತಂಕಕ್ಕೆ ಒಳಗಾದ ಜನರು, 'ನಾವು ಕಷ್ಟದಲ್ಲಿದ್ದೇವೆ. ಒಂದೊತ್ತಿನ ಊಟಕ್ಕೂ ಪರದಾಡುತ್ತಿದ್ದೇವೆ. ಸಹಾಯ ಮಾಡಿ' ಎಂದು ಕೋರಿದರು. ಬಳಿಕ ಜಿಲ್ಲಾಧಿಕಾರಿ ಡಾ. ಎಸ್.ಬಿ.ಬೊಮ್ಮನಹಳ್ಳಿ ಅವರನ್ನು ಸ್ಥಳಕ್ಕೆ ಕರೆಸಿದ ಸಚಿವರು, ಜನರ ಸಮಸ್ಯೆ ಆಲಿಸುವಂತೆ ಸೂಚಿಸಿದರು.