ಬೆಳಗಾವಿ/ ಬೆಂಗಳೂರು: ವೃದ್ಧಾಪ್ಯ, ವಿಧವಾ, ವಿಕಲಚೇತನ, ಹಿರಿಯ ನಾಗರಿಕರ ಪಿಂಚಣಿಯನ್ನು ಪ್ರತಿ ತಿಂಗಳ 5ನೇ ತಾರೀಖಿನೊಳಗೆ ಫಲಾನುಭವಿಗಳ ಖಾತೆಗೆ ನೇರವಾಗಿ ಪಾವತಿ ಮಾಡಲಾಗುತ್ತಿದ್ದು, ಪಿಂಚಣಿ ನೀಡಿಕೆಯಲ್ಲಿ ಯಾವುದೇ ರೀತಿಯ ವಿಳಂಬ ನೀತಿ ಅನುಸರಿಸುತ್ತಿಲ್ಲ. ಯಾವುದೇ ರೀತಿಯ ಬಾಕಿಯನ್ನೂ ಉಳಿಸಿಕೊಂಡಿಲ್ಲ ಎಂದು ಕಂದಾಯ ಸಚಿವ ಆರ್.ಅಶೋಕ್ ಸ್ಪಷ್ಟಪಡಿಸಿದ್ದಾರೆ.
ವಿಧಾನ ಪರಿಷತ್ ಪ್ರಶ್ನೋತ್ತರ ಕಲಾಪದಲ್ಲಿ ಬಿಜೆಪಿ ಸದಸ್ಯ ಶಶಿಲ್ ನಮೋಶಿ ಕೇಳಿದ ಮಾಸಾಶನ ಕುರಿತ ಪ್ರಶ್ನೆಗೆ ಉತ್ತರಿಸಿದ ಸಚಿವರು, ಪಿಂಚಣಿ ಬಗ್ಗೆ ನಾವು ಅಧಿಕಾರಕ್ಕೆ ಬಂದ ನಂತರ ಹೊಸ ವ್ಯವಸ್ಥೆ ಜಾರಿಗೆ ತಂದಿದ್ದೇವೆ. ಮನೆ ಬಾಗಿಲಿಗೆ ಪಿಂಚಣಿ ಕೊಡುವ ಆದೇಶ ಕೊಡಲಾಗಿದೆ. ನಾನು ಗ್ರಾಮ ವಾಸ್ತವ್ಯ ಮಾಡಿದ್ದೇನೆ. 57,956 ಜನರಿಗೆ ಹೊಸದಾಗಿ ನಾವು ಪಿಂಚಣಿ ಕೊಟ್ಟಿದ್ದೇವೆ ಎಂದು ಸಚಿವ ಆರ್ ಅಶೋಕ್ ಸದನಕ್ಕೆ ಮಾಹಿತಿ ನೀಡಿದರು.
9,484 ಕೋಟಿ ಹಣವನ್ನು ಪಿಂಚಣಿಗೆ ರಾಜ್ಯ ಸರ್ಕಾರ ಕೊಡುತ್ತಿದೆ. ವೃದ್ಧಾಪ್ಯ, ವಿಧವಾ, ಅಂಗವಿಕಲರ ವೇತನ, ಮೈತ್ರಿ, ರೈತರ ಪತ್ನಿ ವಿಧವಾ ಪಿಂಚಣಿ ಕೊಡಲಾಗುತ್ತಿದೆ. ಅಂಚೆ ಕಚೇರಿ ಮೂಲಕ ಕೊಡುವ ವ್ಯವಸ್ಥೆ ರದ್ದುಮಾಡಿ ನೇರವಾಗಿ ಖಾತೆಗಳಿಗೆ ಹಣ ಸಂದಾಯವಾಗಲಿದೆ. ಪ್ರತಿ ತಿಂಗಳ 5ನೇ ತಾರೀಖಿನೊಳಗೆ ಖಾತೆಗೆ ಪಾವತಿಯಾಗಲಿದೆ ಎಂದು ಸಚಿವರು ಭರವಸೆ ನೀಡಿದರು.
ಈವರೆಗೆ ಬೋಗಸ್ ಪಿಂಚಣಿಯೂ ಇತ್ತು. ಮಧ್ಯವರ್ತಿಗಳು ದುರುಪಯೋಗ ಮಾಡಿಕೊಳ್ಳುತ್ತಿದ್ದರು. ಅದೆಲ್ಲವನ್ನೂ ರದ್ದು ಮಾಡಲಾಗಿದೆ. 5 ಲಕ್ಷ ಅನರ್ಹರನ್ನು 2 ವರ್ಷದಲ್ಲಿ ಗುರುತಿಸಲಾಗಿದೆ. ಆಧಾರ್ ಲಿಂಕ್ ಮಾಡಿದ್ದೇವೆ. ಇದರಿಂದಾಗಿ 500 ಕೋಟಿ ಹಣ ಸರ್ಕಾರಕ್ಕೂ ಉಳಿತಾಯವಾಗಿದೆ. ಕಾಲ ಕಾಲಕ್ಕೆ ಸರಿಯಾಗಿ ಪಿಂಚಣಿ ನೀಡಲಾಗುತ್ತಿದೆ, ಯಾವುದೇ ಬಾಕಿ ಇರಿಸಿಕೊಂಡಿಲ್ಲ. ಗ್ರಾಮ ಅದಾಲತ್ ವ್ಯವಸ್ಥೆ ಇದೆ. ಅಲ್ಲಿ ಪಿಂಚಣಿಗೆ ಅರ್ಜಿ ಕೊಡಬಹುದು, ಟೋಲ್ ಫ್ರೀ ನಂಬರ್ ಇದೆ. ಕರೆ ಮಾಡಿದರೆ ನಮ್ಮ ಅಧಿಕಾರಿಗಳೇ ಮನೆ ಬಾಗಿಲಿಗೆ ಹೋಗಿ ಪಿಂಚಣಿ ಕೊಡುವ ವ್ಯವಸ್ಥೆ ಮಾಡಲಾಗಿದೆ ಎಂದರು.
ಇದನ್ನೂ ಓದಿ:ಒಂದೇ ವರ್ಷದಲ್ಲಿ ನೂರಕ್ಕೂ ಹೆಚ್ಚು ಪೊಲೀಸ್ ಠಾಣೆಗಳ ನಿರ್ಮಾಣ: ಸಿಎಂ ಬಸವರಾಜ ಬೊಮ್ಮಾಯಿ
ಸರ್ವೇ ಪ್ರಕ್ರಿಯೆ ಇನ್ನಷ್ಟು ಆಧುನೀಕರಣಕ್ಕೆ ಕ್ರಮ: ದೂರುಗಳು ಬಾರದಂತೆ ಸರಳೀಕರಣಗೊಳಿಸುವ ಭಾಗವಾಗಿ ಸರ್ವೇ ಪ್ರಕ್ರಿಯೆ ಇನ್ನಷ್ಟು ಆಧುನೀಕರಣಗೊಳಿಸಲಾಗುವುದು ಎಂದು ಪರಿಷತ್ತಿನಲ್ಲಿ ಸದಸ್ಯರಾದ ಗೋವಿಂದರಾಜು ಅವರ ಪ್ರಶ್ನೆಗೆ ಉತ್ತರ ನೀಡಿದರು.
ನಾವು ಈಗಾಗಲೇ ಸ್ವಾವಲಂಬಿ ಆಪ್ ಮಾಡಿದ್ದೇವೆ. ಭೂ - ಪರಿವರ್ತನೆ ಬಯಸುವವರು ಸ್ಕೆಚ್ ಮಾಡಿಕೊಂಡು ಆಧಾರ್ ನಂಬರ್ ಸಹಿತ ಈ ಸ್ವಾವಲಂಬಿ ಆಪ್ಗೆ ಹಾಕಿದಲ್ಲಿ ಅದನ್ನು ಸಬ್ ರಿಜಿಸ್ಟ್ರಾರ್ ಕಚೇರಿಗೆ ಕಳುಹಿಸುತ್ತೇವೆ. ಇಲ್ಲಿ ತಿದ್ದುಪಡಿಗೆ ಅವಕಾಶವಿಲ್ಲ. ಈ ಪ್ರಕ್ರಿಯೆಯನ್ನು ಪ್ರಾಯೋಗಿಕವಾಗಿ ಬಳ್ಳಾರಿ ಜಿಲ್ಲೆಯಲ್ಲಿ ಆರಂಭಿಸಲು ತಿಳಿಸಿದ್ದೇವೆ. ಬಳಿಕ ರಾಜ್ಯಾದ್ಯಂತ ವಿಸ್ತರಿಸಲಾಗುವುದು ಎಂದು ಸಚಿವರು ತಿಳಿಸಿದರು.
ಪಿ ಸರ್ವೇ ತೊಂದರೆ ಇತ್ಯರ್ಥಕ್ಕೆ ಕ್ರಮ: ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿನ ಪಿ ಸರ್ವೇ ನಂಬರ್ ತೊಂದರೆ ಬೇಗ ಸರಿಪಡಿಸಲಾಗುವುದು ಎಂದು ಸದಸ್ಯರಾದ ಎಂ.ಎಲ್.ಅನೀಲ್ ಕುಮಾರ ಅವರ ಪ್ರಶ್ನೆಗೆ ಸಚಿವ ಆರ್.ಅಶೋಕ ಪ್ರತಿಕ್ರಿಯಿಸಿದರು.
ಇದನ್ನೂ ಓದಿ:8001.12 ಕೋಟಿ ರೂ. ಮೊತ್ತದ ಎರಡನೇ ಕಂತಿನ ಪೂರಕ ಅಂದಾಜು ವಿಧಾನಸಭೆಯಲ್ಲಿ ಮಂಡನೆ,
ಕಾನೂನು ತೊಡಕು ಸರಿಪಡಿಸ್ತೇವೆ:ಕರಾವಳಿ ಭಾಗದ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಅನಾದಿಕಾಲದಿಂದ ಅನುಭವಿಸಿಕೊಂಡು ಬರುತ್ತಿರುವ ಕಾನೆ, ಬಾನೆ, ಕುಮ್ಕಿ ಜಮೀನುಗಳನ್ನು ಮಂಜೂರು ಮಾಡುವ ಬಗ್ಗೆ ನೀತಿಯೊಂದನ್ನು ರೂಪಿಸಲು ಸಕಾರಾತ್ಮಕ ಧೋರಣೆ ಹೊಂದಿದೆ. ಸದ್ಯದಲ್ಲೇ ಚುನಾಯಿತ ಪ್ರತಿನಿಧಿಗಳ ಸಭೆ ಕರೆದು ಸುಧೀರ್ಘವಾಗಿ ಚರ್ಚಿಸಿ ಇರುವ ಕಾನೂನು ತೊಡಕುಗಳನ್ನು ಸರಿಪಡಿಸಲಾಗುವುದು ಎಂದು ಸಚಿವರಾದ ಆರ್. ಅಶೋಕ್, ಸದಸ್ಯರಾದ ಪ್ರತಾಪ್ ಸಿಂಹ್ ನಾಯಕ ಕೆ ಅವರ ಪ್ರಶ್ನೆಗೆ ಉತ್ತರಿಸಿದರು.
ರೈತರ ಮನೆ ಬಾಗಿಲಿಗೆ ಅಗತ್ಯ ತುರ್ತು ಪಶು ವೈದ್ಯಕೀಯ ಸೇವೆ: ಚಾಲ್ತಿಯಲ್ಲಿರುವ ಟೆಂಡರ್ ಪ್ರಕ್ರಿಯೆಯನ್ನು ಬೇಗ ಪೂರ್ಣಗೊಳಿಸಿ ಸಂಚಾರಿ ಪಶು ಚಿಕಿತ್ಸಾ ವಾಹನಗಳ ಮೂಲಕ ರೈತರ ಮನೆ ಬಾಗಿಲಿಗೆ ಅಗತ್ಯ ತುರ್ತು ಪಶುವೈದ್ಯಕೀಯ ಸೇವೆಗಳನ್ನು ಪ್ರಾರಂಭಿಸಕಲಾಗುವುದು ಎಂದು ಪಶು ಸಂಗೋಪನಾ ಸಚಿವ ಪ್ರಭು ಚವ್ಹಾಣ್ ಹೇಳಿದ್ದಾರೆ. ತುರ್ತುಸೇವೆಗಾಗಿ, ಪಶು ವಾಹನಕ್ಕೆ ಒಬ್ಬ ಪಶು ವೈದ್ಯರು, ಒಬ್ಬ ಅರೆ ತಾಂತ್ರಿಕ ಸಿಬ್ಬಂದಿ ಮತ್ತು ವಾಹನ ಚಾಲಕ ಕಮ್ ಗ್ರೂಪ್ ಡಿ ಸಿಬ್ಬಂದಿಯನ್ನು ಸೇವಾ ಪೂರೈಕೆದಾರರ ಮುಖಾಂತರ ಹೊರಗುತ್ತಿಗೆ ಆಧಾರದ ಮೇಲೆ ನೇಮಿಸಿಕೊಳ್ಳಲಾಗುವುದು ಎಂದು ಹೇಳಿದರು.
ಪರಿಷತ್ತಿನಲ್ಲಿ ಇಂದು ಎಸ್.ರವಿ ಅವರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಚಿವರು, ಪಶು ಸಂಜೀವಿನಿ ಯೋಜನೆ ಜಾರಿಯಲ್ಲಿದ್ದು, ಈ ಯೋಜನೆಯಡಿ 15 ಆಂಬ್ಯುಲೆನ್ಸ್ಗಳನ್ನು ಖರೀದಿಸಲಾಗಿದೆ. ಜಾನುವಾರು ಆರೋಗ್ಯ ಮತ್ತು ರೋಗ ನಿಯಂತ್ರಣ ಕಾರ್ಯಕ್ರಮದಡಿ 275 ಸಂಚಾರಿ ಪಶು ಚಿಕಿತ್ಸಾ ವಾಹನಗಳನ್ನು ಖರೀದಿಸಲಾಗಿದೆ. ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡ ನಂತರ ಪಶುವೈದ್ಯರು ಮತ್ತು ಸಿಬ್ಬಂದಿ ನೇಮಿಸಿಕೊಂಡು ರೈತರ ಮನೆ ಬಾಗಿಲಿಗೆ ಅಗತ್ಯ ತುರ್ತು ಸಂಚಾರಿ ಪಶು ಚಿಕಿತ್ಸಾ ಸೇವೆಗಳನ್ನು ಪ್ರಾರಂಭಿಸಲಾಗುತ್ತದೆ ಎಂದು ತಿಳಿಸಿದರು.
ಇದನ್ನೂ ಓದಿ:ಹುಬ್ಬಳ್ಳಿ ಕುಡಿಯುವ ನೀರು ಯೋಜನೆ ಕಾಮಗಾರಿ ಮಂದಗತಿ: ಮಾಜಿ ಸಿಎಂ ಶೆಟ್ಟರ್ ಸಿಡಿಮಿಡಿ.. ಸರಿಪಡಿಸುವ ಭರವಸೆ ನೀಡಿದ ಸಚಿವರು!
ಪ್ರಸ್ತುತ 400 ಪಶುವೈದ್ಯಾಧಿಕಾರಿಗಳ ಹುದ್ದೆಗಳನ್ನು ವಿಶೇಷ ನೇರ ನೇಮಕಾತಿ ನಿಯಮದಡಿ ಭರ್ತಿ ಮಾಡುವ ಪ್ರಕ್ರಿಯೆ ಸಹ ಚಾಲ್ತಿಯಲ್ಲಿರುತ್ತದೆ. ಅದರಂತೆ, 08-03-2022 ರಂದು ಅಧಿಸೂಚನೆ ಹೊರಡಿಸಲಾಗಿದೆ. ಅಭ್ಯರ್ಥಿಗಳು ಅರ್ಜಿಯೊಂದಿಗೆ ಸಲ್ಲಿಸಿದ ಮೂಲ ದಾಖಲಾತಿಗಳನ್ನು ಪರಿಶೀಲನೆ ಮಾಡಲಾಗಿದ್ದು, ಕನ್ನಡ ಭಾಷೆ ಅಭ್ಯಾಸ ಮಾಡದ ಅಭ್ಯರ್ಥಿಗಳಿಗೆ ಕೆ.ಇ.ಎ. ಮುಖಾಂತರ ಕನ್ನಡ ಭಾಷೆ ಪರೀಕ್ಷೆ ನಡೆಸಲಾಗಿದೆ. ಅದರನ್ವಯ ಅರ್ಹತಾ ಪಟ್ಟಿ ತಯಾರಿಸಲಾಗುತ್ತಿದೆ ಎಂದು ಸಚಿವ ಪ್ರಭು ಚವ್ಹಾಣ್ ತಿಳಿಸಿದರು.