ಬೆಳಗಾವಿ: ಚೆನ್ನಮ್ಮನ ಕಿತ್ತೂರು ಉತ್ಸವವನ್ನು ಈ ಬಾರಿ ಕೋವಿಡ್ ಹಿನ್ನೆಲೆಯಲ್ಲಿ ಮೂರು ದಿನಗಳ ಬದಲಾಗಿ ಅ. 23 ರಿಂದ ಎರಡು ದಿನಗಳ ಕಾಲ ಅರ್ಥಪೂರ್ಣವಾಗಿ ಆಚರಿಸಲು ನಿರ್ಧರಿಸಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಹಾಗೂ ಜಲಸಂಪನ್ಮೂಲ ಇಲಾಖೆಯ ಸಚಿವರಾದ ಗೋವಿಂದ ಕಾರಜೋಳ ಅವರು ತಿಳಿಸಿದ್ದಾರೆ.
ಚೆನ್ನಮ್ಮನ ಕಿತ್ತೂರಿನಲ್ಲಿ ಬುಧವಾರ ನಡೆದ ಕಿತ್ತೂರು ಉತ್ಸವ-2021 ಕುರಿತ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಅಕ್ಟೋಬರ್ 23 ಹಾಗೂ 24 ರಂದು ಎರಡು ದಿನಗಳ ಉತ್ಸವ ಹಮ್ಮಿಕೊಂಡು ಕಿತ್ತೂರಿನ ಗತವೈಭವ ಅನಾವರಣಗೊಳಿಸುವಂತೆ ಅರ್ಥಪೂರ್ಣವಾಗಿ ಉತ್ಸವ ಆಚರಿಸಲಾಗುವುದು. ಕೋವಿಡ್ ಭೀತಿ ಇನ್ನೂ ಇದೆ. ಮೂರನೇ ಅಲೆಯ ಬಗ್ಗೆ ತಜ್ಞರು ಎಚ್ಚರಿಕೆ ನೀಡಿದ್ದಾರೆ. ಆದ್ದರಿಂದ ಇದನ್ನು ಗಮನದಲ್ಲಿಟ್ಟುಕೊಂಡು ಎಚ್ಚರಿಕೆಯಿಂದ ಉತ್ಸವ ಆಚರಿಸಬೇಕಿದೆ ಎಂದರು.
ಕಿತ್ತೂರು ಇತಿಹಾಸದ ಸ್ಮರಣೆ ಜತೆಗೆ ಮಕ್ಕಳಿಗೆ ಇತಿಹಾಸದ ಬಗ್ಗೆ ತಿಳಿಸಿಕೊಟ್ಟು ಸ್ವಾಭಿಮಾನ ಜಾಗೃತಿಗೊಳಿಸುವ ರೀತಿಯಲ್ಲಿ ಉತ್ಸವ ಹಮ್ಮಿಕೊಳ್ಳಲಾಗುವುದು. ಉತ್ಸವ ಉದ್ಘಾಟನೆಗೆ ಮುಖ್ಯಮಂತ್ರಿಗಳನ್ನು ಆಹ್ವಾನಿಸುವ ಮೂಲಕ ಅವರಿಂದಲೇ ಉತ್ಸವ ಉದ್ಘಾಟನೆಗೆ ಪ್ರಯತ್ನಿಸಲಾಗುವುದು. 25ನೇ ಕಿತ್ತೂರು ಉತ್ಸವವನ್ನು ಅರ್ಥಪೂರ್ಣವಾಗಿಸುವ ನಿಟ್ಟಿನಲ್ಲಿ ಕಲಾವಿದರನ್ನು ಆಹ್ವಾನಿಸಬೇಕು; ತಜ್ಞರಿಂದ ಪ್ರಧಾನ ವೇದಿಕೆಯಲ್ಲಿ ಕಿತ್ತೂರು ಇತಿಹಾಸ ಕುರಿತು ಉಪನ್ಯಾಸ ಏರ್ಪಡಿಸುವಂತೆ ತಿಳಿಸಿದರು.
ಉಸ್ತುವಾರಿ ಸಚಿವ ಗೋವಿಂದ ಕಾರಜೋಳ ಅಕ್ಟೋಬರ್ 23 ಹಾಗೂ 24 ರಂದು ಎರಡು ದಿನಗಳ ಉತ್ಸವವನ್ನು ಆಚರಿಸಲಾಗುವುದು. ಸಾರ್ವಜನಿಕರ ಸಲಹೆ - ಸೂಚನೆಗಳನ್ನು ಆಧರಿಸಿ ಅರ್ಥಪೂರ್ಣ ಉತ್ಸವ ಆಚರಿಸಲಾಗುವುದು. ಅತಿಥಿಗಳು, ಕಲಾವಿದರ ಆಹ್ವಾನ ಸೇರಿದಂತೆ ಪ್ರತಿಯೊಂದು ತೀರ್ಮಾನವನ್ನು ಸಂಬಂಧಿಸಿದ ಸಮಿತಿಗಳು ನಿರ್ಧರಿಸಲಿವೆ ಎಂದು ತಿಳಿಸಿದರು.
ಶ್ರಮದಾನದ ಮೂಲಕ ಕೋಟೆ ಆವರಣ ಸ್ವಚ್ಛಗೊಳಿಸಲು ಕರೆ
ನಮ್ಮೂರಿನ ಕೋಟೆ ಸ್ವಚ್ಛಗೊಳಿಸಲು ಸರ್ಕಾರದ ಕಡೆ ನೋಡುವ ಬದಲು ಇಡೀ ಊರಿನ ಜನರು ಸೇರಿ ಶ್ರಮದಾನದ ಮೂಲಕ ಸ್ವಚ್ಛಗೊಳಿಸಬೇಕು. ಶ್ರಮದಾನ ಹಮ್ಮಿಕೊಂಡರೆ ನಾನೂ ಬರುತ್ತೇನೆ. ಎಲ್ಲರೂ ಸೇರಿ ಕೋಟೆ ಆವರಣ ಸ್ವಚ್ಛಗೊಳಿಸೋಣ ಎಂದು ಕರೆ ನೀಡಿದರು.
25 ನೇ ಉತ್ಸವವನ್ನು ಅರ್ಥಪೂರ್ಣ ಹಾಗೂ ಅದ್ಧೂರಿಯಾಗಿ ಆಚರಿಸಬೇಕು ಎಂಬುದು ತಮ್ಮ ಆಶಯ ಕೂಡ ಆಗಿದೆ. ಆದರೆ, ಕೋವಿಡ್ ಪರಿಸ್ಥಿತಿ ಗಮನದಲ್ಲಿಟ್ಟುಕೊಂಡು ಉತ್ಸವ ಆಚರಿಸಬೇಕಿದೆ ಎಂದು ತಿಳಿಸಿದರು.
ಆರ್‌ಎಸ್‌ಎಸ್ ನವರು ದೇಶಭಕ್ತರು ಎಂಬುದನ್ನು ಅರಿಯಲಿ: ಸಿದ್ದರಾಮಯ್ಯ, ಹೆಚ್ಡಿಕೆಗೆ ಕಾರಜೋಳ ತಿರುಗೇಟು
ಆರ್‌ಎಸ್‌ಎಸ್ ಸಂಸ್ಕೃತಿ ಗೊತ್ತಿಲ್ಲದವರು ಏನೇನೋ ಹೇಳುತ್ತಿದ್ದಾರೆ. ಆರ್‌ಎಸ್‌ಎಸ್ ಕಾರ್ಯಕರ್ತರು ದೇಶಭಕ್ತರು ಎಂಬುದನ್ನು ಅರಿಯಬೇಕು ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಹಾಗೂ ಮಾಜಿ ಸಿಎಂ ಹೆಚ್ಡಿಕೆಗೆ ಸಚಿವ ಗೋವಿಂದ ಕಾರಜೋಳ ತಿರುಗೇಟು ನೀಡಿದರು.
ಉಸ್ತುವಾರಿ ಸಚಿವ ಗೋವಿಂದ ಕಾರಜೋಳ ಆರ್ಎಸ್ಎಸ್ನವರಿಗೆ ಬೇರೆ ರೀತಿ ಕಳಂಕ ಹಚ್ಚಲು ಪ್ರಯತ್ನ ಮಾಡಿದರೆ ಅದು ತಾಕುವುದಿಲ್ಲ. ದೇಶದ ಉದ್ದಗಲಕ್ಕೂ ರಾಷ್ಟ್ರ ಪ್ರೇಮ ಹುಟ್ಟಿಹಾಕುವ ಕೆಲಸ ಆರ್‌ಎಸ್‌ಎಸ್ ಮಾಡ್ತಿದೆ. ಅವರು ಇವತ್ತಿನವರೆಗೂ ಯಾವುದೇ ಕೆಟ್ಟ ಕೆಲಸ ಮಾಡಿಲ್ಲ. ದೇಶಕ್ಕಾಗಿ ಪ್ರಾಣ ತೆತ್ತ ಸಂಸ್ಥೆ ಆರ್‌ಎಸ್‌ಎಸ್. ಯಾರನ್ನೋ ಖುಷಿ ಪಡಿಸುವ ಸಲುವಾಗಿ ಏನೇನೋ ಹೇಳಿಕೆ ಕೊಟ್ರೆ ಅರ್ಥವಿರಲ್ಲ ಎಂದರು.
ಸಿದ್ದರಾಮಯ್ಯ, ಕುಮಾರಸ್ವಾಮಿ ಪ್ರಮುಖ ರಾಜಕಾರಣಿಗಳು. ಚೀಪ್ ಪಾಪ್ಯುಲಾರಿಟಿ ಸಲುವಾಗಿ ಏನೇನೋ ಹೇಳಬಾರದು. ಸಂಘ ಪರಿವಾರದವರು ಐಎಎಸ್, ಐಪಿಎಸ್ ಆಗಿದ್ದಾರೆ ಅಂತಾ ಹೇಳುವುದು ಸುಳ್ಳು. ಹತಾಶರಾಗಿ ಈ ರೀತಿ ಹೇಳಿಕೆ ಕೊಡಬಾರದು. ಅದು ಅವರ ಗೌರವಕ್ಕೆ ಧಕ್ಕೆ ಬರುತ್ತೆ. ವೋಟ್ ಬ್ಯಾಂಕ್ ರಾಜಕಾರಣಕ್ಕಾಗಿ ಈ ರೀತಿ ಹೇಳಿಕೆ ಕೊಡುವುದು ಗೌರವ ಅಲ್ಲ ಎಂದು ತಿಳಿಸಿದರು.
ಸಿದ್ದರಾಮಯ್ಯ ಹೇಳಿಕೆಗೆ ಖಂಡನೆ
ಉತ್ತರ ಪ್ರದೇಶದಲ್ಲಿ ರೈತರ ಮೇಲೆ ಸಚಿವರ ಬೆಂಗಾವಲು ವಾಹನ ಹರಿಸಿದ ಪ್ರಕರಣದ ವಿಚಾರವಾಗಿ ಅಸತ್ಯ, ಹಿಂಸೆ ಮೇಲೆ ನಂಬಿಕೆ ಇಟ್ಟ ಬಿಜೆಪಿಗೆ ಅಧಿಕಾರ ಸಿಕ್ಕಿದ್ದು, ದುರಾದೃಷ್ಟಕರ ಎಂಬ ಸಿದ್ದರಾಮಯ್ಯ ಹೇಳಿಕೆಯನ್ನು ಸಚಿವ ಗೋವಿಂದ ಕಾರಜೋಳ ಖಂಡಿಸಿದ್ದಾರೆ.
ಸಿದ್ದರಾಮಯ್ಯ, ಕಾಂಗ್ರೆಸ್ ಪಕ್ಷಕ್ಕೆ, ದೇಶದ ಜನರಿಗೆ ಕಂಬಾಳಪಲ್ಲಿ ಘಟನೆ ನೆನಪಿಸಲು ಬಯಸುವೆ. ಎಸ್. ಎಂ ಕೃಷ್ಣ ಸಿಎಂ ಹಾಗೂ ಮಲ್ಲಿಕಾರ್ಜುನ ಖರ್ಗೆ ಗೃಹಸಚಿವರಿದ್ದಾಗ ಕಂಬಾಳಪಲ್ಲಿಯಲ್ಲಿ ದಲಿತರನ್ನು ಸುಟ್ಟಿದಕ್ಕೆ ಸಿದ್ದರಾಮಯ್ಯ ಉತ್ತರಿಸಲಿ. ಹರಿಜನರಿಗೆ ಮಲ ತಿನ್ನಿಸಿದ್ದರಲ್ಲ ಅದರ ಬಗ್ಗೆ ಸಿದ್ದರಾಮಯ್ಯ ನಿಲುವು ಏನು?.
ಅಪಘಾತ ಆಕಸ್ಮಿಕವಾಗಿದೆಯೋ? ಉದ್ದೇಶಪೂರ್ವಕವಾಗಿದೆಯೋ ಗೊತ್ತಿಲ್ಲ. ಅಂತಹ ಘಟನೆ ಆಗಬಾರದಿತ್ತು. ಯಾರೇ ಇರಲಿ ನಾನು ಅದನ್ನು ಖಂಡಿಸುತ್ತೇನೆ. ಆದರೆ, ವಸ್ತುಸ್ಥಿತಿ ನಮಗೆ ಗೊತ್ತಿಲ್ಲ. ನಾವು ನೋಡಿಲ್ಲ. ಆದರೆ, ಸಾವನ್ನು ಖಂಡಿಸುತ್ತೇನೆ. ಸಾವು ನೋವು ಆಗಬಾರದಿತ್ತು. ಇಂತಹ ಘಟನೆ ದೇಶದಲ್ಲಿ ಅಲ್ಲ ಇಡೀ ಪ್ರಪಂಚದಲ್ಲಿ ಎಲ್ಲೂ ನಡೆಯಬಾರದು. ಆದರೆ, ಈ ವಿಚಾರದಲ್ಲಿ ರಾಜಕಾರಣ ಸರಿಯಲ್ಲ. ಅವರ ಹೇಳಿಕೆಯನ್ನು ಖಂಡಿಸುತ್ತೇನೆ ಎಂದರು.
ಓದಿ:RSS ಸಂಘದ ಶಾಖೆಗೆ ಸೇರಿಕೊಂಡರೆ ಇನ್ನೆಷ್ಟು ಸತ್ಯ ಸಂಗತಿಗಳು ಗೊತ್ತಾಗಬಹುದು: ಹೆಚ್ಡಿಕೆ ಟಾಂಗ್!