ಚಿಕ್ಕೋಡಿ : ರಾಜ್ಯದಲ್ಲಿ ನೀರಿನ ಅಭಾವ ಹೆಚ್ಚಾಗಿದ್ದು, ಏತನ್ಮಧ್ಯೆ ಮಹಾರಾಷ್ಟ್ರ ವ್ಯಾಪ್ತಿಯ ಸಾರ್ವಜನಿಕರು ಹತ್ತಾರು ತಾಲೂಕಿನ ರೈತರ ದಾಹ ತೀರಿಸುವ ಕೃಷ್ಣಾ ನದಿಗೆ ಅಡ್ಡಲಾಗಿ ತಾತ್ಕಾಲಿಕ ಮಣ್ಣಿನ ತಡೆಗೋಡೆಯೊಂದನ್ನು ನಿರ್ಮಿಸುವ ಮೂಲಕ ಗಾಯದ ಮೇಲೆ ಬರೆ ಎಳೆದಿದ್ದಾರೆ. ಇದರಿಂದ ರಾಜ್ಯದ ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕೃಷ್ಣಾಗೆ ತಡೆಗೋಡೆ ನಿರ್ಮಿಸಿ ಗಾಯದ ಮೇಲೆ ಬರೆ ಎಳೆದ ಮಹಾರಾಷ್ಟ್ರ..!
ಮಹಾರಾಷ್ಟ್ರ ವ್ಯಾಪ್ತಿಯ ಕೃಷ್ಣಾ ನದಿ ತೀರದ ಗ್ರಾಮಸ್ಥರು ತಾತ್ಕಾಲಿಕ ತಡೆಗೋಡೆ ನಿರ್ಮಿಸಿ ರಾಜ್ಯದ ರೈತರ ಗಾಯದ ಮೇಲೆ ಬರೆ ಎಳೆದಿದ್ದಾರೆ.
ರಾಜಾಪುರ ಬ್ಯಾರೇಜ್ನಿಂದ ಕೃಷ್ಣಾ ನದಿಗೆ ಹರಿಸಿರುವ ನೀರನ್ನು ಮಹಾರಾಷ್ಟ್ರದ ಸೈನಿಕ ಟಾಕಳಿ ಗ್ರಾಮಸ್ಥರು ಚಂದೂರ ಟೇಕ್ ಬಳಿ ಕಲ್ಲು ಹಾಗೂ ಮಣ್ಣುಮಿಶ್ರಣ ಮಾಡಿ ಸುಮಾರು 4 ಅಡಿ ಎತ್ತರದ ತಾತ್ಕಾಲಿಕ ಗೋಡೆ ನಿರ್ಮಿಸಿ ನೀರು ತಡೆ ಹಿಡಿದಿದ್ದಾರೆ. ಕಳೆದ ಎರಡು ತಿಂಗಳ ಹಿಂದೆಯೇ ಕೃಷ್ಣಾ ನದಿ ಬತ್ತಿ ಹೋಗಿದ್ದು, ಕರ್ನಾಟಕ ಮತ್ತು ಮಹಾರಾಷ್ಟ್ರ ರಾಜ್ಯಗಳ ನದಿ ತೀರದ ಗ್ರಾಮಗಳಲ್ಲಿ ಕುಡಿಯುವ ನೀರಿಗಾಗಿ ಹಾಹಾಕಾರ ಮಿತಿ ಮೀರಿದೆ. ತಮ್ಮ ಕ್ಷೇತ್ರದ ಜನರಿಗೆ ನೀರು ಸಿಗಲಿ ಎಂದು ಮಹಾರಾಷ್ಟ್ರದ ಶಿರೋಳ ಶಾಸಕ ಉಲ್ಲಾಸ್ ಪಾಟೀಲ್ ಕಳೆದ ವಾರ ರಾಜಾಪುರ ಬ್ಯಾರೇಜ್ನಿಂದ ಕೃಷ್ಣಾ ನದಿಗೆ ನೀರು ಬಿಡುಗಡೆ ಮಾಡಿಸಿಕೊಂಡಿದ್ದರು. ಆ ನೀರು ಖಿದ್ರಾಪುರ, ಸೈನಿಕ ಟಾಕಳಿ ಹಾಗೂ ಸುತ್ತಮುತ್ತಲಿನ ಹಳ್ಳಿಗಳತ್ತ ಹರಿದಿತ್ತು.
ಚಂದೂರ ಟೇಕ್ ಬಳಿ ಗ್ರಾಮಸ್ಥರು ಇದೀಗ ತಾತ್ಕಾಲಿಕ ತಡೆಗೋಡೆ ನಿರ್ಮಿಸಿ, ಗಾಯದ ಮೇಲೆ ಬರೆ ಎಳೆದಿದ್ದಾರೆ.ಕಾರಣ ತಡೆಗೋಡೆ ಇಲ್ಲದಿದ್ದರೆ ಅಥಣಿ ತಾಲೂಕಿನ ಮಂಗಾವತಿ, ಜೂಗೂಳ, ಚಿಕ್ಕೋಡಿಯ ಚಂದೂರ ಹಾಗೂ ಕಲ್ಲೋಳದತ್ತ ನೀರು ಹರಿಯುತ್ತಿತ್ತು. ಆದರೆ, ತಡೆಗೋಡೆ ನಿರ್ಮಿಸಿದ್ದರಿಂದ ನೀರು ಕರ್ನಾಟಕ ರಾಜ್ಯದ ಕಡೆ ಹರಿದು ಬರುತ್ತಿಲ್ಲ. ಇದರಿಂದ ನೀರಿನ ಅಭಾವ ಹೆಚ್ಚಾಗಿದೆ. ಈ ಪರಿಸ್ಥಿತಿಯಲ್ಲಿ ಸೈನಿಕ ಟಾಕಳಿ ಗ್ರಾಮಸ್ಥರು ತಡೆಗೋಡೆ ನಿರ್ಮಿಸಿರುವುದು ಖಂಡನೀಯ. ಇದರ ಬಗ್ಗೆ ತಾಲೂಕು ಆಡಳಿತದ ಗಮನಕ್ಕೆ ತಂದಿದ್ದರೂ ಏನೂ ಪ್ರಯೋಜನವಾಗಿಲ್ಲ ಎಂದು ಇಲ್ಲಿನ ರೈತರು ತಮ್ಮ ಅಳಲು ತೋಡಿಕೊಂಡಿದ್ದಾರೆ.