ಬೆಳಗಾವಿ: ಬಿಹಾರ ಸರ್ಕಾರ ಜಾತಿ ಗಣತಿ ವರದಿ ಜಾರಿ ಮಾಡಿದ್ದನ್ನು ಸ್ವಾಗತಿಸುತ್ತೇವೆ. ಅದೇ ರೀತಿ ರಾಜ್ಯದಲ್ಲೂ ಜಾತಿ ಗಣತಿ ವರದಿ ಬಿಡುಗಡೆ ಮಾಡಿದರೆ ಒಳ್ಳೆಯದು ಎಂದು ಲೋಕೋಪಯೋಗಿ ಇಲಾಖೆ ಸಚಿವ ಸತೀಶ ಜಾರಕಿಹೊಳಿ ಹೇಳಿದರು.
ಬೆಳಗಾವಿಯ ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ನಮ್ಮದು ಸುಮಾರು ವರ್ಷಗಳ ಹಿಂದೆ ತಯಾರಾಗಿದೆ. ಸರ್ಕಾರ ಮತ್ತು ಸಿಎಂ ನಿರ್ಧಾರ ಮಾಡಬೇಕು. ಜಾತಿ ಗಣತಿ ವರದಿ ಜಾರಿ ಮಾಡುವುದು ಒಳ್ಳೆಯದು. ಯಾವ ಸಮುದಾಯಕ್ಕೆ ಏನೇನು ಕಾರ್ಯಕ್ರಮ ಮಾಡಬೇಕು. ಹೆಚ್ಚಿನ ಅನುದಾನ ಕೊಡಬೇಕು ಅನ್ನೋದು ಗೊತ್ತಾಗುತ್ತದೆ. ಸಾಮಾಜಿಕವಾಗಿ, ಶೈಕ್ಷಣಿಕ ಲೆಕ್ಕಾಚಾರದಲ್ಲಿ ಬಹಳ ಒಳ್ಳೆಯ ಬೆಳವಣಿಗೆ ನಮ್ಮಲ್ಲಿಯೂ ಆಗಬೇಕು ಅನ್ನೋದು ನಮ್ಮ ಆಸೆ ಇದೆ. ಕಳೆದ ಬಾರಿ ಚುನಾವಣೆ ವೇಳೆಗೆ ಮಾಡೋಕೆ ಆಗಲಿಲ್ಲ. ನಮ್ಮ ಸರ್ಕಾರದ ಹಂತದಲ್ಲಿ ಚರ್ಚೆ ಆಗುತ್ತಿದ್ದು, ಆದಷ್ಟು ಬೇಗ ಸರ್ಕಾರ ಗಮನ ಹರಿಸಬೇಕು. ಜನಗಣತಿ ವರದಿಗೆ 200 ಕೋಟಿ ರೂ. ಖರ್ಚು ಮಾಡಿರಬೇಕು. ಆದಷ್ಟು ಬೇಗ ವರದಿ ಜಾರಿ ಆಗಬೇಕು ಎಂದು ಒತ್ತಾಯಿಸಿದರು.
ಶಿವಮೊಗ್ಗದ ರಾಗಿಗುಡ್ಡದಲ್ಲಿ ಈದ್ ಮಿಲಾದ್ ಮೆರವಣಿಗೆ ವೇಳೆ ಗಲಾಟೆ ಪ್ರಕರಣದಲ್ಲಿ ಕಾಂಗ್ರೆಸ್ ಸರ್ಕಾರದ ವಿರುದ್ಧ ವಿಪಕ್ಷಗಳ ಟೀಕೆ ವಿಚಾರಕ್ಕೆ ಯಾವುದೇ ಒಂದು ಮೂಲೆಯಲ್ಲಿ ಆಗಿದ್ದು, ಎಲ್ಲರೂ ಹೇಳಿದ್ದಾರೆಂದರೆ ಹೇಗೆ? ಯಾವುದೇ ಒಂದು ಮೂಲೆಯಲ್ಲಿ ನಡೆದಿದ್ದು, ಇಡೀ ಶಿವಮೊಗ್ಗಕ್ಕೆ ತೋರಿಸಿದರೆ ಹೇಗೆ ಎಂದು ಉದ್ಯಮಿಯೊಬ್ಬರು ಪ್ರಶ್ನೆ ಮಾಡಿದ್ದಾರೆ. ಎಲ್ಲೋ ಘಟನೆ ಆಗುತ್ತೆ, ಆಗಬಾರದು ಅಂತೇನಿಲ್ಲ. ಬೇರೆ ಬೇರೆ ಘಟನೆ ಬೇರೆ ಬೇರೆ ಕಾರಣಗಳಿಗೆ ಆಗುತ್ತೆ. ಎಲ್ಲಾ ಹಿಂದೂ ಮುಸ್ಲಿಂ ಅಂತಾ ಹೇಳಲಿಕ್ಕಾಗಲ್ಲ, ವೈಯಕ್ತಿಕವಾಗಿ ಬಹಳಷ್ಟು ಸಮಸ್ಯೆ ಇರುತ್ತೆ. ಪೊಲೀಸ್ ತನಿಖೆ ಬಳಿಕ ಸತ್ಯಾಂಶ ಹೊರ ಬಂದೇ ಬರುತ್ತೆ ಎಂದು ಸತೀಶ್ ಜಾರಕಿಹೊಳಿ ಹೇಳಿದರು.
ಶಿವಮೊಗ್ಗದಲ್ಲಿ ನಿಷೇಧಾಜ್ಞೆ ಜಾರಿ ಮಾಡದಂತೆ ಆಗ್ರಹ ಕುರಿತು, ಅದು ನಿಜ, ವ್ಯಾಪಾರಕ್ಕೆ ಸಮಸ್ಯೆ ಆಗುತ್ತದೆ ಎಂದ ಸತೀಶ್ ಜಾರಕಿಹೊಳಿ, ಕಾಂಗ್ರೆಸ್ ಸರ್ಕಾರ ಬಂದ ಬಳಿಕ ಈ ರೀತಿ ಘಟನೆ ಎಂಬ ಬಿಜೆಪಿ ನಾಯಕರ ಹೇಳಿಕೆ ಕುರಿತು ಪ್ರತಿಕ್ರಿಯಿಸಿ, ಹೇಳುವವರು ಹೇಳುತ್ತಾರೆ? ಅವರ ಕಾಲದಲ್ಲಿ ನೂರಕ್ಕೆ ನೂರರಷ್ಟು ಶಾಂತವಿತ್ತಾ? ಅವರ ಕಾಲದಲ್ಲಿ ಏನೂ ಆಗಿಲ್ವಾ? ಪೊಲೀಸ್ ಠಾಣೆಯಲ್ಲಿ ಕೇಸ್ ಆಗಿಲ್ವಾ? ನ್ಯಾಯಾಲಯದಲ್ಲಿ ಯಾವ ಪ್ರಕರಣಗಳೂ ದಾಖಲಾಗಿಲ್ವಾ ಎಂದು ಪ್ರಶ್ನಿಸಿದರು.