ಬೆಳಗಾವಿ :ರಾಜ್ಯದಲ್ಲಿ ಅಮುಲ್ ಹಾಲು, ಮೊಸರು ಮಾರಾಟವನ್ನು ವಿರೋಧಿಸಿ ಕರ್ನಾಟಕ ರಕ್ಷಣಾ ವೇದಿಕೆ (ಟಿ.ಎ.ನಾರಾಯಣಗೌಡ ಬಣ) ಕಾರ್ಯಕರ್ತರು ನಗರದ ಕೆಎಂಎಫ್ ಕಚೇರಿ ಎದುರು ಪ್ರತಿಭಟನೆ ನಡೆಸಿದರು. ಅಮುಲ್ ಬ್ರ್ಯಾಂಡ್ನ ಹಾಲು, ಮೊಸರು, ತುಪ್ಪ, ಬೆಣ್ಣೆ ಮೊದಲಾದ ಉತ್ಪನ್ನಗಳನ್ನು ಸುಟ್ಟು ಹಾಕಿದರು. ಯಾವುದೇ ಕಾರಣಕ್ಕೂ ಅಮುಲ್ ಹಾಲು ಮತ್ತು ಮೊಸರು ವ್ಯಾಪಾರಕ್ಕೆ ರಾಜ್ಯದಲ್ಲಿ ಅವಕಾಶ ನೀಡುವುದಿಲ್ಲ ಎಂದು ಎಚ್ಚರಿಕೆ ನೀಡಿದರು. ಇದೇ ವೇಳೆ ನಂದಿನಿ ಉತ್ಪನ್ನಗಳಾದ ಪೇಡಾ, ಮಜ್ಜಿಗೆ, ಲಸ್ಸಿ ವಿತರಿಸಿದರು. ನಂದಿನಿ ಪರ ಘೋಷಣೆ ಮೊಳಗಿಸಿದ ಕಾರ್ಯಕರ್ತರು, ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಕರವೇ ಜಿಲ್ಲಾಧ್ಯಕ್ಷ ದೀಪಕ ಗುಡಗನಟ್ಟಿ ಮಾತನಾಡಿ, ಇಡೀ ದೇಶದ ಹಾಲು ಉತ್ಪಾದಕರ ಒಕ್ಕೂಟದಲ್ಲಿ ರಾಜ್ಯದ ಕೆಎಂಎಫ್ ಎರಡನೇ ಸ್ಥಾನದಲ್ಲಿದೆ. ಅನ್ಯ ರಾಜ್ಯದ ಅಮುಲ್ ಪದಾರ್ಥಗಳನ್ನು ನಮ್ಮ ಮೇಲೆ ಒತ್ತಾಯ ಪೂರ್ವಕವಾಗಿ ಹೇರುತ್ತಿದ್ದಾರೆ. ಇದನ್ನು ಖಂಡಿಸಿ ರಾಜ್ಯವ್ಯಾಪಿ ಕರವೇ ಪ್ರತಿಭಟನೆ ನಡೆಸುತ್ತಿದೆ. ಸಾಮಾಜಿಕ ಜಾಲತಾಣಗಳಲ್ಲೂ ಕೂಡ ಸಾಕಷ್ಟು ವಿರೋಧ ವ್ಯಕ್ತವಾಗುತ್ತಿದ್ದು, ಇಡೀ ರಾಜ್ಯದ ಜನಸಾಮಾನ್ಯರು ನಂದಿನಿ ಮೆಚ್ಚಿಕೊಂಡಿದ್ದಾರೆ. ಹೀಗಾಗಿ ನಾವು ಇದನ್ನು ಬಿಟ್ಟುಕೊಡುವ ಪ್ರಶ್ನೆಯೇ ಇಲ್ಲ ಎಂದು ಹೇಳಿದರು.
ಬ್ಯಾಂಕ್ ಸೇರಿ ಬೇರೆ ಬೇರೆ ಸಂಸ್ಥೆಗಳನ್ನು ಯಾವ ರೀತಿ ಕೇಂದ್ರ ಸರಕಾರ ವಿಲೀನ ಮಾಡುತ್ತಿದೆಯೋ ಅದೇ ರೀತಿ ನಂದಿನಿಯನ್ನೂ ವಿಲೀನ ಮಾಡಲು ವ್ಯವಸ್ಥಿತ ಷಡ್ಯಂತ್ರ ಮಾಡುತ್ತಿದೆ. ಈ ಬಗ್ಗೆ ರಾಜ್ಯ ಸರಕಾರ ಮತ್ತು ಇಲ್ಲಿನ ಸಂಸದರು ಕೇಂದ್ರದ ಗಮನಕ್ಕೆ ತರುವ ಕೆಲಸ ಮಾಡಬೇಕು ಎಂದು ದೀಪಕ ಗುಡಗನಟ್ಟಿ ಒತ್ತಾಯಿಸಿದರು. ಕರವೇ ಮುಖಂಡರಾದ ಸುರೇಶ ಗವನ್ನವರ, ಗಣೇಶ ರೋಕಡೆ, ಬಾಳು ಜಡಗಿ, ರಮೇಶ ಯರಗನ್ನವರ ಸೇರಿ ಮತ್ತಿತರರು ಉಪಸ್ಥಿತರಿದ್ದರು.