ಬೆಳಗಾವಿ: ನಗರದ ಕಂಗ್ರಾಳಿ ಬಳಿಯ ರಾಜ್ಯ ಮೀಸಲು ಪೊಲೀಸ್ ಪಡೆಯ ಆವರಣದಲ್ಲಿ ಮಹಿಳಾ ವಿಶೇಷ ಮೀಸಲು ಪೊಲೀಸ್ ಕಾನ್ಸಟೇಬಲ್ ಸೇರಿದಂತೆ ಪ್ರಸ್ತುತ 6ನೇ ಪಡೆಯ ಪ್ರಶಿಕ್ಷಣಾರ್ಥಿಗಳ ನಿರ್ಗಮನ ಪಥಸಂಚಲನ ಕಾರ್ಯಕ್ರಮಕ್ಕೆ ಸಚಿವ ಬಸವರಾಜ ಬೊಮ್ಮಾಯಿ ಚಾಲನೆ ನೀಡಿದರು. ಈ ವೇಳೆ ಪ್ರಶಿಕ್ಷಣಾರ್ಥಿಗಳಿಂದ ಗೃಹ ಸಚಿವರು ಗೌರವ ವಂದನೆ ಸ್ವೀಕರಿಸಿದರು.
ಬಳಿಕ ಮಾತನಾಡಿದ ಅವರು, ಕರ್ನಾಟಕದ ಪೊಲೀಸರು ರಾಷ್ಟ್ರದಲ್ಲಿಯೇ ಅತ್ಯಂತ ಶ್ರೇಷ್ಠ ಪೊಲೀಸರಾಗಿದ್ದಾರೆ. ಅಂತಹ ಒಂದು ಪೊಲೀಸ್ ತಂಡಕ್ಕೆ ನೀವು ಸೇರಿದ್ದಕ್ಕೆ ಅಭಿನಂದನೆಗಳನ್ನು ಸಲ್ಲಿಸುತ್ತೇನೆ. ನಿಮಗೆ ಕೊಟ್ಟಿರುವ ಈ ಖಾಕಿ, ಶಸ್ತ್ರಾಸ್ತ್ರಗಳ ಗೌರವವನ್ನು ಉಳಿಸುವ ಕೆಲಸವನ್ನು ನೀವು ಮಾಡಬೇಕು.
ಯಾವುದೇ ಒತ್ತಾಯ, ಒತ್ತಡಕ್ಕೂ ಮಣಿಯದೆ ದಕ್ಷತೆಯಿಂದ ಕಾರ್ಯ ನಿರ್ವಹಿಸಬೇಕು. ಯಾವುದೇ ಕಾರಣಕ್ಕೂ ನಿಮ್ಮಿಂದ ಸಮಾಜಕ್ಕೆ ಅನ್ಯಾಯವಾಗಬಾರದು ಎಂದು ಸಲಹೆ ನೀಡಿದರು.
187 ಪ್ರಶಿಕ್ಷಣಾರ್ಥಿಗಳು ನಿರ್ಗಮನ:
ಕೆಎಸ್ಆರ್‌ಪಿ 6ನೇ ಪಡೆಯ ಒಟ್ಟು 187 ಪ್ರಶಿಕ್ಷಣಾರ್ಥಿಗಳು ವೃತ್ತಿ ಬುನಾದಿ ತರಬೇತಿ ಪಡೆದು ನಿರ್ಗಮನವಾಗುವ ಮೂಲಕ ನಾಡ ಸೇವೆಗೆ ಅಣಿಯಾಗಿದ್ದಾರೆ. ಕೆಎಸ್ಆರ್‌ಪಿ ತರಬೇತಿ ಪಡೆದವರ ಪೈಕಿ 82 ಪದವೀಧರರು, 7 ಸ್ನಾತಕೋತ್ತರ ಪದವೀಧರರು ಹಾಗೂ 13 ಜನ ಪ್ರಶಿಕ್ಷಣಾರ್ಥಿಗಳು ಎಂಜಿನಿಯರಿಂಗ್ ಪದವಿಯನ್ನು ಪಡೆದಿರೋದು ವಿಶೇಷ.