ಚಿಕ್ಕೋಡಿ: ಕರ್ನಾಟಕ ಉಸ್ಕಾ ಬಾಪ್ ಕಾ ನಹೀ ಹಮಾರಾ ಹೈ ಎಂದು ಸಚಿವ ಪ್ರಭು ಚವ್ಹಾಣ್ ಮಹಾರಾಷ್ಟ್ರಕ್ಕೆ ಭರ್ಜರಿ ಟಾಂಗ್ ಕೊಟ್ಟಿದ್ದಾರೆ.
ಮಹಾರಾಷ್ಟ್ರ ಡಿಸಿಎಂಗೆ ಟಾಂಗ್ ಕೊಟ್ಟ ಪ್ರಭು ಚವ್ಹಾಣ್ ನಿಪ್ಪಾಣಿಯಲ್ಲಿ 2019-20ನೇ ಸಾಲಿನ ಆರ್‌ಐಡಿಎಫ್ ಟ್ರ್ಯಾಂಚ್ - 25 ಅಡಿ ಮಂಜೂರಾದ ಪಶು ಆಸ್ಪತ್ರೆ ಕಟ್ಟಡದ ಶಂಕು ಸ್ಥಾಪನೆ ಸಮಾರಂಭ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದರು. 'ಕರ್ನಾಟಕ ಉಸ್ಕಾ ಬಾಪ್ ಕಾ ನಹೀ.. ಹೇ ಹಮಾರಾ ಹೈ' ಎಂದರು. ಈ ಮೂಲಕ ನಿಪ್ಪಾಣಿ, ಕಾರವಾರ ಮಹಾರಾಷ್ಟ್ರಕ್ಕೆ ಸೇರಿದ್ದು ಎಂದಿದ್ದ ಮಹಾರಾಷ್ಟ್ರ ಡಿಸಿಎಂ ಅಜೀತ್ ಪವಾರ್ ಹೇಳಿಕೆಗೆ ಸಚಿವ ಪ್ರಭು ಚವ್ಹಾಣ್ ಖಡಕ್ಕಾಗಿ ತಿರುಗೇಟು ನೀಡಿದ್ದಾರೆ.
ಅವರು ಏನ್ ಹೇಳಿದ್ದಾರೆ ಅನ್ನೋದು ನನಗೆ ಗೊತ್ತಿಲ್ಲ. ಕರ್ನಾಟಕ ಮಾತೇ ನಮ್ಮ ತಾಯಿ. ಅವರಿಗೆ ಏನು ಸಂಬಂಧವಿಲ್ಲ. ಅವರ ಮಾತಿಗೆ ಯಾವುದೇ ಬೆಲೆ ಕೊಡುವ ಅವಶ್ಯಕತೆ ಇಲ್ಲ ಎಂದು ಪಶುಸಂಗೋಪನ ಸಚಿವ ಪ್ರಭು ಚವ್ಹಾಣ ಹೇಳಿದರು.
ಮರಾಠ ಮತ್ತು ವೀರಶೈವ ಲಿಂಗಾಯತ ಅಭಿವೃದ್ಧಿ ಪ್ರಾಧಿಕಾರ ರಚನೆ ವಿಚಾರವಾಗಿ ಪ್ರತಿಕ್ರಿಯಿಸಿದ ಸಚಿವರು, ಅವರ ಬೇಡಿಕೆಯಂತೆ ಸಿಎಂ ಯಡಿಯೂರಪ್ಪನವರು ನಿರ್ಣಯ ತೆಗೆದುಕೊಳ್ಳುತ್ತಾರೆ. ಎಲ್ಲರಿಗೂ ನ್ಯಾಯ ಸಿಗಬೇಕು. ಎಲ್ಲರ ಅಭಿವೃದ್ಧಿ, ವಿಕಾಸ ಕಾರಣಕ್ಕಾಗಿ ಪ್ರಾಧಿಕಾರ ರಚನೆ ಮಾಡಲೇಬೇಕು ಎಂದು ಹೇಳಿದರು.