ಬೆಳಗಾವಿಯಲ್ಲಿ ಆಂಗ್ಲ ಭಾಷೆಯ ಬ್ಯಾನರ್ ಕಿತ್ತು ಹಾಕಿ ಆಕ್ರೋಶ ಬೆಳಗಾವಿ: ನಗರದಲ್ಲಿ ಆಂಗ್ಲ ಭಾಷೆಯಲ್ಲಿ ಬ್ಯಾನರ್ಗಳನ್ನು ಅಳವಡಿಸಿದ್ದರಿಂದ ರೊಚ್ಚಿಗೆದ್ದ ಕರವೇ ಕಾರ್ಯಕರ್ತರು ಬ್ಯಾನರ್ಗಳನ್ನು ಹರಿದು ಹಾಕಿ ಆಕ್ರೋಶ ವ್ಯಕ್ತಪಡಿಸಿದರು. ರಾಣಿ ಚನ್ನಮ್ಮ ವೃತ್ತದ ಬಳಿಯಿದ್ದ ಬ್ಯಾನರ್ಗಳನ್ನು ತೆರವುಗೊಳಿಸುವಂತೆ ಆಗ್ರಹಿಸಿ ನಾರಾಯಣಗೌಡ ಬಣದ ಕಾರ್ಯಕರ್ತರು ಮೊದಲು ಧರಣಿ ನಡೆಸಿದರು.
ಬಳಿಕ ಒಂದೊಂದೇ ಬ್ಯಾನರ್ಗಳನ್ನು ಹರಿದು ಹಾಕಲು ಮುಂದಾದ ಕಾರ್ಯಕರ್ತರನ್ನು ಪೊಲೀಸರು ತಡೆಯಲು ಮುಂದಾದರು. ಪೊಲೀಸರ ಕೈಯಿಂದ ತಪ್ಪಿಸಿಕೊಂಡು ಹೋದ ಕೆಲ ಕಾರ್ಯಕರ್ತರು, ಬ್ಯಾನರ್ಗಳನ್ನು ಹರಿದು ಹಾಕಿದರು. ಕಪ್ಪು ಮಸಿ ಬಳಿಯಲು ತಂದಿದ್ದ ಬಾಟಲಿಗಳನ್ನು ಕಿತ್ತುಕೊಳ್ಳಲು ಪೊಲೀಸರು ಹರಸಾಹಸಪಟ್ಟರು. ಘಟನೆಯಿಂದ ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿ ಪೊಲೀಸರು ಮತ್ತು ಕರವೇ ಕಾರ್ಯಕರ್ತರ ನಡುವೆ ಮಾತಿನ ಚಕಮಕಿ ನಡೆಯಿತು. ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸುತ್ತಿದ್ದಂತೆ ಕಾರ್ಯಕರ್ತರನ್ನು ಪೊಲೀಸರು ತಮ್ಮ ವಾಹನದಲ್ಲಿ ಕರೆದೊಯ್ದರು.
ಇದಕ್ಕೂ ಮೊದಲು ಮಾತನಾಡಿದ ಕರವೇ ರಾಜ್ಯ ಸಂಚಾಲಕ ಮಹಾದೇವ ತಳವಾರ, ಕರ್ನಾಟಕ ರಾಜ್ಯದ ಸುವರ್ಣ ಸಂಭ್ರಮ ಸಂದರ್ಭದಲ್ಲಿ ಸರ್ಕಾರ ವರ್ಷಪೂರ್ತಿ ಕನ್ನಡ ಹಬ್ಬವನ್ನು ಆಚರಿಸಬೇಕು, ಈ ಬಗ್ಗೆ ಜಾಗೃತಿ ಮಾಡುವಂತೆ ಹೇಳಿದೆ. ಅಲ್ಲದೇ ಎಲ್ಲಾ ಜಾಹೀರಾತು ಫಲಕಗಳಲ್ಲಿ ಶೇ.60ರಷ್ಟು ಕನ್ನಡ ಭಾಷೆ ಬಳಸುವಂತೆ ನಿಯಮವಿದ್ದರೂ ಕೂಡ ಪಾಲಿಕೆ ಅಧಿಕಾರಿಗಳು ಅಮಿಷಗಳಿಗೆ ಬಲಿಯಾಗಿ ಕನ್ನಡ ಕಗ್ಗೊಲೆ ಮಾಡುವ ಕೆಲಸ ಮಾಡುತ್ತಿದ್ದಾರೆ. ಹಾಗಾಗಿ, ಇಂದು ನಾವೇ ಆಂಗ್ಲ ಭಾಷೆಯಲ್ಲಿರುವ ಜಾಹೀರಾತು ಫಲಕಗಳನ್ನು ಕಿತ್ತು ಹಾಕುತ್ತಿದ್ದೇವೆ. ಮುಂದೆ ಎಂತಹ ಹೋರಾಟಕ್ಕೂ ನಾವು ಸಿದ್ಧರಿದ್ದೇವೆ. ರಾಜ್ಯ ಸರ್ಕಾರ ಕರ್ನಾಟಕ ರಕ್ಷಣಾ ವೇದಿಕೆಯ ಕಾರ್ಯಕರ್ತರನ್ನು ಬಂಧಿಸುವುದಾದರೆ ಬಂಧಸಲಿ ಎಂದು ಎಚ್ಚರಿಕೆ ನೀಡಿದರು.
ಕರವೇ ಜಿಲ್ಲಾಧ್ಯಕ್ಷ ದೀಪದ ಗುಡಗನಟ್ಟಿ ಮಾತನಾಡಿ, ಜಿಲ್ಲಾಡಳಿತ ಮತ್ತು ಮಹಾನಗರ ಪಾಲಿಕೆ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರೂ ಯಾವುದೇ ಕ್ರಮಕ್ಕೆ ಅವರು ಮುಂದಾಗಿಲ್ಲ. ಇದು ಹೋರಾಟದ ಪ್ರಾರಂಭವಾಗಿದ್ದು, ಮುಂದೆ ನಮ್ಮ ಕಾರ್ಯಕರ್ತರು ಎಲ್ಲೆಲ್ಲಿ ಆಂಗ್ಲ ಭಾಷೆಯ ಜಾಹೀರಾತು ಫಲಕಗಳು ಇರುತ್ತವೋ ಅವುಗಳನ್ನು ತೆರವುಗೊಳಿಸುವ ಕೆಲಸ ಮಾಡಲಿದ್ದಾರೆ. ಈ ವೇಳೆ ಏನಾದರೂ ಕಾನೂನು ಸುವ್ಯವಸ್ಥೆ ಹದಗೆಟ್ಟರೆ ಅದಕ್ಕೆ ಜಿಲ್ಲಾಡಳಿತ ಮತ್ತು ಪೊಲೀಸರೇ ಹೊಣೆ ಎಂದು ಎಂದರು.
ಇದನ್ನೂ ಓದಿ:ತುಳುಗೆ ಕರ್ನಾಟಕದಲ್ಲಿ ಹೆಚ್ಚುವರಿ ಭಾಷೆ ಸ್ಥಾನಮಾನಕ್ಕೆ ಚರ್ಚಿಸಿ ತೀರ್ಮಾನ: ಸಿಎಂ