ಬೆಳಗಾವಿ: ಚಿಕ್ಕೋಡಿ ತಾಲೂಕಿನ ಹಿರೇಕೋಡಿ ನಂದಿ ಪರ್ವತ ಆಶ್ರಮದ ಜೈನಮುನಿ ಹತ್ಯೆ ಪ್ರಕರಣದಲ್ಲಿ ನಿಷ್ಪಕ್ಷಪಾತ ಮತ್ತು ಪಾರದರ್ಶಕ ತನಿಖೆ ಆಗಬೇಕು. ಹತ್ಯೆ ಮಾಡಿದವರ ಜತೆಗೆ ಹತ್ಯೆಗೆ ಪ್ರಚೋದನೆ, ಸಾಧನ, ಸಲಕರಣೆ ಒದಗಿಸಿದವರನ್ನೂ ಶಿಕ್ಷೆಗೆ ಒಳಪಡಿಸಬೇಕು. ಅಪರಾಧಿಗಳಿಗೆ ಅತ್ಯಂತ ಕಠಿಣ ಮರಣದಂಡನೆ ಶಿಕ್ಷೆ ವಿಧಿಸುವಂತಾಗಬೇಕು ಎಂದು ಜಿಲ್ಲಾಧಿಕಾರಿ ಸೇರಿದಂತೆ ಪೊಲೀಸ್ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ ಎಂದು ಕರ್ನಾಟಕ ಅಲ್ಪಸಂಖ್ಯಾತರ ಆಯೋಗದ ಅಧ್ಯಕ್ಷ ಅಬ್ದುಲ್ ಅಜೀಮ್ ತಿಳಿಸಿದ್ದಾರೆ.
ಬೆಳಗಾವಿಯ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಶ್ರೀ ಜೈನ ಮುನಿ ಹತ್ಯೆ ಪ್ರಕರಣದಲ್ಲಿ ಮೃತ ದೇಹವನ್ನು ವೈಜ್ಞಾನಿಕವಾಗಿ ಗುರುತಿಸುವ ನಿಟ್ಟಿನಲ್ಲಿ ಡಿಎನ್ಎ ಪರೀಕ್ಷೆ ಅಗತ್ಯವಿದೆ. ಸದ್ಯ ಪ್ರಕರಣದ ತನಿಖಾ ಜವಾಬ್ದಾರಿಯನ್ನು ಸ್ವತಃ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಹಿಸಿಕೊಂಡಿದ್ದಾರೆ. ಇದು ಅತ್ಯಂತ ಹ್ಯೇಯ ಮತ್ತು ಖಂಡನೀಯ ಪ್ರಕರಣ ಆಗಿರುವುದರಿಂದ ಇದನ್ನು ವಿಶೇಷ ಪ್ರಕರಣ ಎಂದು ಪರಿಗಣಿಸಬೇಕು ಎಂದು ತಿಳಿಸಲಾಗಿದೆ.
ಸರ್ಕಾರಕ್ಕೆ ವಾರದೊಳಗೆ ವರದಿ:ಮೇಲ್ವಿಚಾರಣೆಯನ್ನು ಉತ್ತರ ವಲಯ ಐಜಿಪಿ ಅವರಿಗೆ ವಹಿಸಿಕೊಡುವಂತೆ ಸರ್ಕಾರಕ್ಕೆ ಒಂದು ವಾರದೊಳಗೆ ವರದಿ ಸಲ್ಲಿಸಲಾಗುವುದು. ಉತ್ತರ ವಲಯ ಐಜಿ ಅವರು ತನಿಖೆಯ ನೇತೃತ್ವ, ಮೇಲ್ವಿಚಾರಣೆ ವಹಿಸಿಕೊಳ್ಳಬೇಕು. ಆರು ತಿಂಗಳಲ್ಲಿ ತನಿಖೆ ಪೂರ್ಣಗೊಳಿಸಿ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಬೇಕು. ಪ್ರಕರಣ ನ್ಯಾಯಾಲಯದ ಮೆಟ್ಟಿಲೇರಿದ ನಂತರ ನಿರಂತರ ಫಾಲೋ ಅಪ್ ಮಾಡಿ ಅದನ್ನೂ ಮುಂದಿನ ಆರು ತಿಂಗಳಲ್ಲಿ ವಿಚಾರಣೆ ಪೂರ್ಣಗೊಳಿಸಿ ನ್ಯಾಯ ಕೊಡಿಸಬೇಕು. ಅಪರಾಧಿಗಳನ್ನು ಮರಣದಂಡನೆಗೆ ಗುರಿ ಮಾಡುವ ನಿಟ್ಟಿನಲ್ಲಿ ತನಿಖೆ ಆರಂಭಗೊಳ್ಳಬೇಕು ಎಂದು ಸರ್ಕಾರಕ್ಕೆ ಪತ್ರ ಬರೆದು ಒತ್ತಾಯಿಸುತ್ತೇನೆ ಎಂದು ಅಬ್ದುಲ್ ಅಜೀಮ್ ಹೇಳಿದ್ದಾರೆ.
ಹೀರೆಕೋಡಿ ನಂದಿ ಪರ್ವತ ಆಶ್ರಮದ ಶ್ರೀ ಕಾಮಕುಮಾರ ನಂದಿ ಮಹಾರಾಜ ಅವರ ಬರ್ಬರ ಹತ್ಯೆ ಪ್ರಕರಣವು ಅತ್ಯಂತ ಸೂಕ್ಷ್ಮ ಪ್ರಕರಣವಾಗಿದೆ. ಹಿರೇಕೋಡಿ ಜೈನ ಆಶ್ರಮಕ್ಕೆ ಭೇಟಿ ನೀಡಿ, ಪ್ರಕರಣ ಕುರಿತು ಪೊಲೀಸ್ ಅಧಿಕಾರಿಗಳ ಜತೆ ಚರ್ಚೆ ನಡೆಸಿರುತ್ತೇನೆ. ಅಲ್ಪಸಂಖ್ಯಾತರ ಹಕ್ಕುಗಳು, ಶಾಸನಬದ್ಧ ಹಕ್ಕುಗಳ ರಕ್ಷಣೆ ಹಾಗೂ ಹಿತರಕ್ಷಣೆಯು ಆಯೋಗದ ಕರ್ತವ್ಯವಾಗಿದೆ. ಈ ಹಿನ್ನೆಲೆಯಲ್ಲಿ ಆಶ್ರಮಕ್ಕೆ ಭೇಟಿ ನೀಡಿ ಸಂಪೂರ್ಣ ಮಾಹಿತಿ ಪಡೆದುಕೊಳ್ಳಲಾಗಿದೆ.