ಕರ್ನಾಟಕ

karnataka

ETV Bharat / state

ಬೆಳಗಾವಿ ಜೈನ ಮುನಿ ಹತ್ಯೆ ಪ್ರಕರಣ.. ಆರೋಪಿಗಳ ನ್ಯಾಯಾಂಗ ಬಂಧನ ಮತ್ತೆ ವಿಸ್ತರಣೆ - ಕಾಮಕುಮಾರ ನಂದಿ ಮಹಾರಾಜರ ಹತ್ಯೆ

Jain Monk Murder case: ಜೈನ ಮುನಿ ಹತ್ಯೆ ಪ್ರಕರಣದ ಆರೋಪಿಗಳ ನ್ಯಾಯಾಂಗ ಬಂಧನ ಮತ್ತೆ 5 ದಿನಗಳವರಿಗೆ ವಿಸ್ತರಣೆ ಮಾಡಿ ಚಿಕ್ಕೋಡಿ ಪ್ರಧಾನ ದಿವಾಣಿ ನ್ಯಾಯಾಲಯ ಆದೇಶ ನೀಡಿದೆ.

Belagavi
ಬೆಳಗಾವಿ

By

Published : Jul 17, 2023, 8:02 PM IST

ಚಿಕ್ಕೋಡಿ(ಬೆಳಗಾವಿ): ಹಿರೇಕೋಡಿ ಜೈನ ಮುನಿ ಜಿನೈಕ್ಯ ಕಾಮಕುಮಾರ ನಂದಿ ಮಹಾರಾಜರ ಹತ್ಯೆಯ ಪ್ರಮುಖ ಆರೋಪಿಗಳನ್ನು ಮತ್ತೆ ಚಿಕ್ಕೋಡಿ ನ್ಯಾಯಾಲಯ ಐದು ದಿನಗಳವರಿಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.

ಕಳೆದ ವಾರದ ಹಿಂದೆ ಚಿಕ್ಕೋಡಿ ಪೊಲೀಸರು ಹೆಚ್ಚಿನ ತನಿಖೆಗಾಗಿ ಏಳು ದಿನಗಳವರಿಗೆ ಪೊಲೀಸ್ ಕಸ್ಟಡಿಗೆ ಪಡೆದಿದ್ದರು. ಆ ಕಾಲಾವಕಾಶ ಮುಗಿಯುತ್ತಿದ್ದಂತೆ ಇಂದು ಚಿಕ್ಕೋಡಿ ಪ್ರಧಾನ ದಿವಾಣಿ ನ್ಯಾಯಾಲಯದ ಮುಂದೆ ಹಾಜರುಪಡಿಸಿದರು. ನ್ಯಾಯಾಧೀಶ ಚಿದಾನಂದ ಬಡಿಗೇರ ಅವರು ವಿಚಾರಣೆ ನಡೆಸಿ ಮತ್ತೆ 5 ದಿನಗಳವರೆಗೆ ನ್ಯಾಯಾಂಗ ಬಂಧನ ವಿಸ್ತರಿಸಿ ಆದೇಶಿಸಿದರು.

ಆರೋಪಿತರಾದ ನಾರಾಯಣ ಮಾಳಿ ಹಾಗೂ ಹಸನಸಾಬ್​ ದಲಾಯತ ಇಬ್ಬರು ಆರೋಪಿತರನ್ನು ಭಾರಿ ಭದ್ರತೆಯೊಂದಿಗೆ ಬೆಳಗಾವಿಯ ಹಿಂಡಲಗಾ ಜೈಲಿಗೆ ರವಾನಿಸಲಾಯಿತು. ಇಬ್ಬರು ಆರೋಪಿತರನ್ನು ಜು.21ರವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಚಿಕ್ಕೋಡಿ ಸಿಪಿಐ ಆರ್.ಆರ್ ಪಾಟೀಲ ನೇತೃತ್ವದಲ್ಲಿ ಆರೋಪಿಗಳನ್ನು ಬೆಳಗಾವಿಯ ಕೇಂದ್ರ ಕಾರಾಗೃಹಕ್ಕೆ ಕಳುಹಿಸಲಾಯಿತು‌.

ಇದನ್ನೂ ಓದಿ:ಬೆಳಗಾವಿಯಲ್ಲಿ ಯುವಕನ ಬರ್ಬರ ಹತ್ಯೆ: ಬೆಚ್ಚಿ ಬಿದ್ದ ಜನ, ಆರೋಪಿಗಳ ಪತ್ತೆಗೆ ಜಾಲ ಬೀಸಿದ ಪೊಲೀಸರು

ಪ್ರಕರಣ 2ನೇ ಆರೋಪಿಯನ್ನು ಭೇಟಿ ಮಾಡಿದ ತಂದೆ:ಪ್ರಕರಣದಲ್ಲಿ A2 ಆರೋಪಿ ಹಸನಸಾಬ್ ಭೇಟಿಗೆ ತಂದೆ ಮಕ್ಬೂಲ್ ಸಾಬ್ ದಲಾಯತ್​ ಚಿಕ್ಕೋಡಿ ಡಿವೈಎಸ್‌ಪಿ ಕಚೇರಿಗೆ ಆಗಮಿಸಿದ್ದರು. ಈ ವೇಳೆ, ಮಾಧ್ಯಮಗಳೊಂದಿಗೆ ಮಾತನಾಡಿದ ಅವರು "ಇಂದು ನನ್ನ ಮಗನನ್ನು ಮತ್ತೆ ಬೆಳಗಾವಿಗೆ ಕರೆದುಕೊಂಡು ಹೋಗುತ್ತಾರೆ. ಅದಕ್ಕಾಗಿ ಅವನ ಭೇಟಿಗಾಗಿ ಬಂದೆ" ಎಂದು ಹೇಳಿದರು.

"ನಾನು ಬೇರೆಯವರ ಗದ್ದೆಯಲ್ಲಿ ಕೆಲಸ ಮಾಡಿ ಜೀವನ ಮಾಡುತ್ತೇನೆ. ಮಗ ಹೀಗೆ ಮಾಡಿದರೆ ಏನ್ ಮಾಡೋದು ಹೇಳಿ?. ದುಡಿದು ತಿನ್ನೋ ಮನುಷ್ಯ. ನಾನು ಇವನ ಸಹವಾಸ ಬೇಡ ಅಂತಾ ಬೇರೆ ಮನೆ ಮಾಡಿಕೊಂಡು ವಾಸವಿದ್ದೆ. ನಾರಾಯಣ ಮಾಳಿ ಜತೆ ಮೂರ್ನಾಲ್ಕು ವರ್ಷದ ಗೆಳೆತನವಿತ್ತು. ಹೊಲಕ್ಕೆ ಕೀಟ ನಾಶಕ ಸಿಂಪಡನೆ ಮಾಡಲು ಹೋಗುತ್ತಿದ್ದೇನೆ ಎಂದು ಅಂದು ರಾತ್ರಿ ಹೋಗಿದ್ದ. ಅವರು ಪಗಾರ್(ವೇತನ) ಕೊಡಲ್ಲ, ಹೋಗಬೇಡ ಅಂತಾ ಆತನ ಪತ್ನಿ ಹೇಳಿದ್ದಳು. ಆದರೆ ಹಸನ್ ಪತ್ನಿ ಕೇಳದೇ ಹೋಗಿದ್ದ. ಮನೆಗೆ ವಾಪಸ್​ ಬಂದಾಗಲೂ ನಮಗೆ ಏನೂ ಹೇಳಿರಲಿಲ್ಲ. ರಾತ್ರಿ 10 ಗಂಟೆಗೆ ಪೊಲೀಸರು ಬಂದಾಗ ವಿಚಾರ ಗೊತ್ತಾಯಿತು" ಎಂದು ಮಗ ಹಸನ್ ಮಾಡಿದ ಕೃತ್ಯ ನೆನೆದು ತಂದೆ ದಲಾಯತ್ ಭಾವುಕರಾಗಿ ಕಣ್ಣೀರು ಹಾಕಿದರು.

ಕೊಳವೆ ಬಾವಿಯಲ್ಲಿ ಪತ್ತೆಯಾಗಿದ್ದ ಜೈನಮುನಿ ದೇಹ:ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಹಿರೇಕೋಡಿ ನಂದಿ ಪರ್ವತ ಜೈನ ಆಶ್ರಮದ ಶ್ರೀ ಆಚಾರ್ಯ ಕಾಮಕುಮಾರ ನಂದಿ ಮಹಾರಾಜರು ಜು.6 ರಂದು ನಾಪತ್ತೆಯಾಗಿದ್ದರು. ಎರಡು ದಿನದ ಬಳಿಕ ಅವರ ದೇಹ ಕೊಳವೆ ಬಾವಿಯಲ್ಲಿ ತುಂಡು ತುಂಡಾಗಿ ಶವವಾಗಿ ಪತ್ತೆಯಾಗಿತ್ತು. ರಾಯಬಾಗ ತಾಲೂಕಿನ ಕಡಕಬಾವಿ ಗ್ರಾಮದಲ್ಲಿ ಕೊಳವೆ ಬಾವಿಯಲ್ಲಿ ದೇಹ ಪತ್ತೆಯಾಗಿದ್ದು, ಹಂತಕರು ದೇಹವನ್ನು ಹಲವು ಭಾಗಗಳಾಗಿ ಕತ್ತರಿಸಿ ಕೊಳವೆ ಬಾವಿಯಲ್ಲಿ ಎಸೆದಿದ್ದರು.

ಇದನ್ನೂ ಓದಿ:ಜೈನಮುನಿ ದೇಹ ಕೊಳವೆ ಬಾವಿಯಲ್ಲಿ ಪತ್ತೆ: 9 ಭಾಗಗಳಾಗಿ ತುಂಡರಿಸಿ ಎಸೆದ ಹಂತಕರು!

ABOUT THE AUTHOR

...view details