ಜೈನ ಸಂಪ್ರದಾಯದಂತೆ ನೆರವೇರಿದ ಕಾಮಕುಮಾರ ನಂದಿ ಮಹಾರಾಜ ಅವರ ಅಂತ್ಯಕ್ರಿಯೆ ಚಿಕ್ಕೋಡಿ(ಬೆಳಗಾವಿ): ಕಳೆದ 15 ವರ್ಷಗಳಿಂದ 'ಅಹಿಂಸೆ ಪರಮೋಧರ್ಮ' ಎಂದು ಶಾಂತಿ ಮಂತ್ರ ಸಾರುತ್ತ ಧರ್ಮ ಪ್ರಚಾರ ಮಾಡಿದ ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಹಿರೇಕೋಡಿ ಜೈನ ಆಶ್ರಮದ ಕಾಮಕುಮಾರ ನಂದಿ ಮಹಾರಾಜ (51) ಅವರು ಕಳೆದ ಎರೆಡು ದಿನಗಳ ಹಿಂದೆ ಭೀಕರವಾಗಿ ಹತ್ಯೆಗೀಡಾಗಿದ್ದರು. ನಂದಿ ಪರ್ವತ ಆಶ್ರಮದಲ್ಲಿ ಜೈನ ಸಂಪ್ರದಾಯದಂತೆ ಅವರ ಅಂತ್ಯಕ್ರಿಯೆಯನ್ನು ಇಂದು ಶಾಸ್ತ್ರೋಕ್ತವಾಗಿ ನೆರವೇರಿಸಲಾಯಿತು.
ಜೈನ ಮಠಗಳ ಮಹಾಸ್ವಾಮಿಗಳಾದ ನಾಂದಣಿ ಮಠದ ಜಿನಸೇನ ಭಟ್ಟಾರಕ ಪಟ್ಟಾಚಾರ್ಯ ಮಹಾಸ್ವಾಮಿ ಹಾಗೂ ವರೂರ್ ಮಠದ ಧರ್ಮಸೇನ ಭಟ್ಟಾರಕ ಪಟ್ಟಾಚಾರ್ಯ ಮಹಾಸ್ವಾಮೀಜಿ ನೇತೃತ್ವದಲ್ಲಿ ಜೈನ ಧರ್ಮದ ಧಾರ್ಮಿಕ ವಿಧಿವಿಧಾನಗಳಂತೆ ಕಾಮಕುಮಾರ ನಂದಿ ಮಹಾರಾಜರ ಅಂತ್ಯಕ್ರಿಯೆ ನೆರವೇರಿತು. ಅಂತ್ಯಕ್ರಿಯೆ ಸ್ಥಳವನ್ನು ಭಟ್ಟಾರಕ ಶ್ರೀಗಳಿಂದ ಮೊದಲಿಗೆ ಗುರುತಿಸಿ ಶುದ್ಧೀಕರಣ ಮಾಡಿ, ಯಜ್ಞ ಪೂಜೆ ನಂತರ ಸಾಮೂಹಿಕವಾಗಿ ಪ್ರಾರ್ಥನೆ ಸಲ್ಲಿಸಲಾಯಿತು. ಬಳಿಕ ಜಿನೈಕ್ಯರಾದ ಕಾಮಕುಮಾರ ನಂದಿ ಮಹಾರಾಜರು ಉಪಯೋಗಿಸುತ್ತಿದ್ದ ಪಿಂಚಿ, ಕಮಂಡಲು ತೆಂಗಿನ ಮರಕ್ಕೆ ಕಟ್ಟಿ ಅಂತಿಮ ವಿಧಿ ವಿಧಾನಗಳನ್ನು ಮುಂದುವರಿಸಲಾಯಿತು. ಪೂರ್ವಾಶ್ರಮದ ಮೃತ ಶ್ರೀಗಳ ಅಣ್ಣನ ಮಗ ಭೀಮಗೊಂಡ ಉಗಾರೆ ಅಂತಿಮ ವಿಧಿವಿಧಾನ ನೆರವೇರಿಸಿದರು.
ಇದನ್ನೂ ಓದಿ:Jain monk murder: ನಾಪತ್ತೆಯಾಗಿದ್ದ ಚಿಕ್ಕೋಡಿಯ ಜೈನಮುನಿ ಹತ್ಯೆ.. ವೈಯಕ್ತಿಕ ಕಾರಣಕ್ಕೆ ಕೊಲೆ - ಎಸ್ಪಿ ಮಾಹಿತಿ
ಹಿರೇಕೋಡಿಯ ನಂದಿ ಪರ್ವತ ಆಶ್ರಮದ ಪಕ್ಕದ ಜಮೀನಿನಲ್ಲಿ ಸ್ವಾಮೀಜಿಗಳ ಪಾರ್ಥಿವ ಶರೀರಕ್ಕೆ ಅಗ್ನಿ ಸ್ಪರ್ಶ ಮಾಡಲಾಯಿತು. ಅಂತ್ಯಕ್ರಿಯೆಯಲ್ಲಿ ಸಾವಿರಾರು ಜೈನ ಧರ್ಮ ಮತ್ತು ಅನ್ಯ ಧರ್ಮದ ಭಕ್ತರು ಸೇರಿ, ಅಂತಿಮ ನಮನ ಸಲ್ಲಿಸಿದರು. ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡ ಭಕ್ತರು ಸ್ವಾಮೀಜಿಯವರನ್ನು ಭೀಕರ ಹತ್ಯೆ ಮಾಡಿರುವ ಆರೋಪಿಗಳಿಗೆ ಗಲ್ಲು ಶಿಕ್ಷೆ ಆಗಬೇಕು ಎಂದು ದೇವರಲ್ಲಿ ಪ್ರಾರ್ಥನೆ ಸಲ್ಲಿಸಿದರು.
ಇದನ್ನೂ ಓದಿ:ಜೈನ ಮುನಿಗಳಿಗೆ ರಕ್ಷಣೆ ಭರವಸೆ ಸರ್ಕಾರ ನೀಡುವರೆಗೂ ಸಲ್ಲೇಖನ ವೃತ ಕೈಗೊಳ್ಳುವೆ: ಕಣ್ಣೀರು ಹಾಕಿದ ಶ್ರೀ ಆಚಾರ್ಯ ಗುಣಧರನಂದಿ
ನಾಳೆ ಶಾಂತಿಯುತ ಪ್ರತಿಭಟನೆ:ಅಂತ್ಯಕ್ರಿಯೆ ಬಳಿಕ ಮಾತನಾಡಿದ ನಾಂದಣಿ ಮಠದ ಜಿನಸೇನ ಭಟ್ಟಾರಕ ಪಟ್ಟಾಚಾರ್ಯ ಸ್ವಾಮೀಜಿ "ಜೈನ ಧರ್ಮದ ಅದ್ಭುತ ಸೂರ್ಯವೊಂದು ಅಸ್ತಂಗತವಾಗಿದೆ. ಕಾಮಕುಮಾರ ನಂದಿ ಸ್ವಾಮೀಜಿ ಅವರ ಅಂತ್ಯಕ್ರಿಯೆ ಸಂಪನ್ನವಾಗಿದೆ. ಈ ಹತ್ಯೆಯನ್ನು ಖಂಡಿಸಿ ನಾವು ನಾಳೆ ಚಿಕ್ಕೋಡಿ ಆರ್ಡಿಪಿ ಕಾಲೇಜಿನಿಂದ 10 ಗಂಟೆಗೆ ಶಾಂತಿಯುತವಾಗಿ ಪ್ರತಿಭಟನೆ ಹಮ್ಮಿಕೊಂಡಿದ್ದೇವೆ. ಸಮುದಾಯದ ಎಲ್ಲ ಶ್ರಾವಕ, ಶ್ರಾವಕಿಯರು ಪ್ರಿಭಟನೆಯಲ್ಲಿ ಪಾಲ್ಗೊಳ್ಳಬೇಕು" ಎಂದು ಕರೆ ನೀಡಿದರು. ಯಾವುದೇ ತರಹದ ಗದ್ದಲಗಳಿಗೆ ಆಸ್ಪದ ನೀಡದೆ ನಾವು ಶಾಂತಿಯುತವಾಗಿ ಸರ್ಕಾರಕ್ಕೆ ಮನವಿ ಪತ್ರ ಸಲ್ಲಿಸೋಣ. ಇನ್ನು ಮುಂದೆ ಯಾವುದೇ ಸ್ವಾಮೀಜಿಗಳಿಗೆ ಈ ರೀತಿ ಆಗದಂತೆ ರಕ್ಷಣೆ ಕೊಡುವಂತೆ ಸರ್ಕಾರಕ್ಕೆ ಆಗ್ರಹಿಸೋಣ'' ಎಂದು ಹೇಳಿದರು.
ಇದನ್ನೂ ಓದಿ:ಜೈನಮುನಿ ಹತ್ಯೆ ಪ್ರಕರಣ: ಹೆಚ್ಚಿನ ಮುತುವರ್ಜಿ ವಹಿಸಿ ತನಿಖೆ ನಡೆಸುತ್ತಿದ್ದೇವೆ- ಬೆಳಗಾವಿ ಎಸ್ಪಿ