ಬೆಳಗಾವಿ: ಭಾರತವು ಸ್ವಾತಂತ್ರ್ಯ ಅಮೃತ ಮಹೋತ್ಸವದ ಸಂಭ್ರಮದಲ್ಲಿದೆ. ದೇಶದ ಮನೆ ಮನೆಗಳ ಮೇಲೂ ತಿರಂಗಾ ಧ್ವಜ ಹಾರಾಡುತ್ತಿದೆ. ಸ್ವಾತಂತ್ರ್ಯ ಸಂಗ್ರಾಮ, ಹೋರಾಟಗಾರರ ಸ್ಮರಣೆ ಆಗುತ್ತಿದೆ. ಈ ಹೊತ್ತಿನಲ್ಲಿ ಬೆಳಗಾವಿಯನ್ನು ಮರೆಯುವಂತಿಲ್ಲ.
ಖಾದಿ ಗ್ರಾಮೋದ್ಯೋಗ ಸಂಸ್ಥೆ: ಜಿಲ್ಲೆಯ ಗೋಕಾಕ್ ತಾಲೂಕಿನ ಹುದಲಿ ಗ್ರಾಮ ಸ್ವಾತಂತ್ರ್ಯ ಹೋರಾಟಕ್ಕೆ ಸ್ಫೂರ್ತಿ ಆಗಿತ್ತು. ಮಹಾತ್ಮ ಗಾಂಧಿ ಅವರ ಸ್ಫೂರ್ತಿಯೊಂದಿಗೆ ಇಲ್ಲಿ ಆರಂಭವಾದ ಖಾದಿ ಗ್ರಾಮೋದ್ಯೋಗ ಸಂಸ್ಥೆ ಇಂದಿಗೂ ಕಾರ್ಯನಿರ್ವಹಿಸುತ್ತಿದೆ. ದೇಶದ ವಿವಿಧ ನಗರಗಳಿಗೆ ಇಲ್ಲಿಂದ ಖಾದಿ ಬಟ್ಟೆ ರಫ್ತಾಗುತ್ತಿದೆ. ಈ ಮೂಲಕ ಸುತ್ತಲಿನ ಸಾವಿರಾರು ಜನರಿಗೆ ಇಲ್ಲಿ ಉದ್ಯೋಗ ದೊರೆತಿದೆ.
ಕಾಂಗ್ರೆಸ್ ಮಹಾ ಅಧಿವೇಶನ:ಅದು 1924ರ ಸಮಯ. ದೇಶಾದ್ಯಂತ ಸ್ವಾತಂತ್ರ್ಯದ ಕಿಚ್ಚು ಪಸರಿಸುತ್ತಿತ್ತು. ಅದೇ ಸಮಯಕ್ಕೆ ಬೆಳಗಾವಿ ಅಖಿಲ ಭಾರತ 39ನೇ ಕಾಂಗ್ರೆಸ್ ಮಹಾ ಅಧಿವೇಶನಕ್ಕೆ ಸಜ್ಜಾಗಿತ್ತು. ಮಹಾತ್ಮ ಗಾಂಧೀಜಿ ಈ ಅಧಿವೇಶನದ ಅಧ್ಯಕ್ಷರಾಗಿ ಆಯ್ಕೆಯಾಗಿದ್ದರು. ಮಹಾತ್ಮ ಗಾಂಧಿ ಅಧ್ಯಕ್ಷರಾಗಿದ್ದ ಮೊದಲ ಹಾಗೂ ಕೊನೆಯ ಅಧಿವೇಶನ ಅದು. ಬೆಳಗಾವಿಯ ಒಂದನೇ ರೈಲ್ವೆ ಗೇಟ್ ಬಳಿ ನಡೆದಿದ್ದ ಈ ಅಧಿವೇಶನ ಐತಿಹಾಸಿಕವಾಗಿತ್ತು. ಅದರ ಸವಿನೆನಪಿಗಾಗಿ ಅಧಿವೇಶನ ನಡೆದ ರಸ್ತೆಗೆ ಇಂದೂ ಕೂಡ ಕಾಂಗ್ರೆಸ್ ರಸ್ತೆ(ವೀರಸೌಧ) ಎಂದು ಕರೆಯಲಾಗುತ್ತದೆ.
ಸ್ವಾತಂತ್ರ್ಯ ಕಹಳೆ:ಅಲ್ಲದೇ ಅಧಿವೇಶನಕ್ಕೆ ಬರುವ ಜನರ ಸ್ನಾನಕ್ಕೆ ಅಂದೇ ಬಾವಿ ತೆರೆಯಲಾಗಿತ್ತು. ಅದು ಇಂದಿಗೂ ಕಾಂಗ್ರೆಸ್ ಬಾವಿ ಎಂದೇ ಫೇಮಸ್ ಆಗಿದೆ. ಜವಾಹರ್ ಲಾಲ್ ನೆಹರು, ಸುಭಾಷ್ ಚಂದ್ರ ಬೋಸ್ ಸೇರಿ ಹಲವು ಮಹಾನಾಯಕರು ಅಧಿವೇಶನದಲ್ಲಿ ಭಾಗಿಯಾಗಿದ್ದರು. ಮಹಾ ಅಧಿವೇಶನದಲ್ಲಿ ನೆರೆದಿದ್ದ ಲಕ್ಷಾಂತರ ಜನರನ್ನು ಉದ್ದೇಶಿಸಿ ಮಾತನಾಡಿದ್ದ ಗಾಂಧಿ ಅವರು ಸ್ವಾತಂತ್ರ್ಯ ಕಹಳೆ ಮೊಳಗಿಸಿದ್ದರು.
ಕುಮರಿ ಆಶ್ರಮದಲ್ಲಿ ಗಾಂಧೀಜಿ ವಾಸ್ತವ್ಯ: ಹಿರಿಯ ಸ್ವಾತಂತ್ರ್ಯ ಹೋರಾಟಗಾರರ ಪೈಕಿ ಹುದಲಿಯ ಗಂಗಾಧರರಾವ್ ದೇಶಪಾಂಡೆ ಕೂಡ ಒಬ್ಬರು. ಇವರು ಕರ್ನಾಟಕದ ಸಿಂಹ ಎಂದೇ ಪ್ರಖ್ಯಾತಿ ಪಡೆದವರು. ಬೆಳಗಾವಿಯಲ್ಲಿ ನಡೆದಿದ್ದ ಕಾಂಗ್ರೆಸ್ ಮಹಾ ಅಧಿವೇಶನದಲ್ಲಿ ಗಂಗಾಧರರಾವ್ ದೇಶಪಾಂಡೆ ಕೂಡ ಭಾಗವಹಿಸಿದ್ದರು. ಕಾಂಗ್ರೆಸ್ ಸಮಾವೇಶದಲ್ಲೇ ಗಂಗಾಧರರಾವ್ ದೇಶಪಾಂಡೆ ಅವರು ಮಹಾತ್ಮ ಗಾಂಧಿಗೆ ಹತ್ತಿರವಾಗಿದ್ದರು. ಗಂಗಾಧರರಾವ್ ದೇಶಪಾಂಡೆ ಮನವಿ ಮೇರೆಗೆ ಮಹಾತ್ಮ ಗಾಂಧಿ 1937ರಲ್ಲಿ ಹುದಲಿಗೆ ಭೇಟಿ ನೀಡಿದ್ದರು. ಒಂದು ವಾರ ಕಾಲ ಹುದಲಿ ಪಕ್ಕದ ಕುಮರಿ ಆಶ್ರಮದಲ್ಲಿ ಗಾಂಧೀಜಿ ತಂಗಿದ್ದರು.
ಹುದಲಿ ಪರಿವರ್ತನೆ:ಕೆಸರು ಗದ್ದೆಯಂತಿದ್ದ ಹುದಲಿಯನ್ನು ಸುತ್ತಮುತ್ತಲಿನ ಜನರ ಜೊತೆಗೂಡಿ ಗಾಂಧೀಜಿ ಶ್ರಮದಾನ ಮಾಡಿದರು. ಅದರ ಜೊತೆಗೆ ಸ್ವಾತಂತ್ರ್ಯ ಹೋರಾಟದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಿದರು. ಗಾಂಧೀಜಿ ಭೇಟಿ ಬಳಿಕವೇ ಕೆಸರಿನಂತಿದ್ದ ಈ ಊರು ಗ್ರಾಮವಾಗಿ ಪರಿವರ್ತನೆ ಆಯಿತು. ಬಳಿಕ ಇಲ್ಲಿ ಜನರು ಬಂದು ನೆಲೆಸಲು ಪ್ರಾರಂಭಿಸಿದರು.
ಖಾದಿ ಗ್ರಾಮೋದ್ಯೋಗ ಕಾರ್ಯಾರಂಭ:ಸ್ವಾತಂತ್ರ್ಯ ಹೋರಾಟದ ಜೊತೆಗೆ ಮಹಾತ್ಮ ಗಾಂಧಿ ಖಾದಿ ಬಳಕೆ ಬಗ್ಗೆಯೂ ಜನರಲ್ಲಿ ಜಾಗೃತಿ ಮೂಡಿಸುತ್ತಿದ್ದರು. ಸ್ವತಃ ಗಾಂಧೀಜಿ ತಾವೇ ನೇಯ್ದ ಖಾದಿ ಬಟ್ಟೆ ಧರಿಸುತ್ತಿದ್ದರು. ಗಾಂಧೀಜಿಯಿಂದ ಪ್ರಭಾವಿತರಾಗಿದ್ದ ಗಂಗಾಧರರಾವ್ ದೇಶಪಾಂಡೆ ಅವರ ಮಾರ್ಗದರ್ಶನದಲ್ಲಿ 1954ರಲ್ಲಿ ಹುದಲಿಯಲ್ಲಿ 500ರೂ. ಬಂಡವಾಳದಲ್ಲಿ ಖಾದಿ ಗ್ರಾಮೋದ್ಯೋಗ ಸಂಸ್ಥೆ ತೆರೆಯಲಾಯಿತು.
ಸುತ್ತಮುತ್ತಲಿನ ಜನರಿಗೆ ಉದ್ಯೋಗ: ಆ ಮೂಲಕ ಹುದಲಿ ಸುತ್ತಮುತ್ತಲಿನ ಸಾವಿರಾರು ಜನರಿಗೆ ಇಲ್ಲಿಗೆ ಉದ್ಯೋಗ ನೀಡಲಾಗಿದೆ. ಅಂದಿನಿಂದ ಈ ಖಾದಿ ಸಂಸ್ಥೆ ಕಾರ್ಯನಿರ್ವಹಿಸುತ್ತಿದೆ. ದೇಶದ ರೈಲ್ವೆ ಇಲಾಖೆಗೆ ಪ್ರತಿ ವರ್ಷ 50ಲಕ್ಷ ರೂ.,ಮೌಲ್ಯದ ಖಾದಿ ಬಟ್ಟೆಯನ್ನು ಇಲ್ಲಿಂದಲೇ ರಫ್ತು ಮಾಡಲಾಗುತ್ತಿದೆ. ಅಲ್ಲದೇ ಹೊರರಾಜ್ಯಗಳಲ್ಲೂ ಇಲ್ಲಿನ ಖಾದಿ ಬಟ್ಟೆಗೆ ಬೇಡಿಕೆ ಇದೆ. ಕೈಮಗ್ಗಗಳಿಂದಲೇ ನೇಯ್ದು ಖಾದಿ ಬಟ್ಟೆ ತಯಾರಿಸಲಾಗುತ್ತದೆ.
ಗಾಂಧೀಜಿ ಫೋಟೋ ಸಂಗ್ರಹ:ಮಹಾತ್ಮ ಗಾಂಧೀಜಿ ಹುದಲಿಗೆ ಭೇಟಿ ನೀಡಿದ ಹಿನ್ನೆಲೆಯಲ್ಲಿ ಗಾಂಧೀಜಿ ಗಂಗಾಧರರಾವ್ ದೇಶಪಾಂಡೆ ಹೆಸರಿನಲ್ಲಿ ಸ್ಮಾರಕ ಭವನ ಸ್ಥಾಪನೆ ಮಾಡಲಾಗಿದೆ. ಇಲ್ಲಿ ಮಹಾತ್ಮ ಗಾಂಧೀಜಿ ಅವರ ವಿದೇಶ ಪ್ರವಾಸ, ದೇಶದಲ್ಲಿ ಸ್ವಾತಂತ್ರ್ಯ ಹೋರಾಟದ ಸಭೆಗಳಲ್ಲಿ ಭಾಗವಹಿಸಿದ್ದ ಅಪರೂಪದ ಫೋಟೋಗಳು, ಗಾಂಧೀಜಿ ಹುದಲಿಗೆ ಭೇಟಿ ನೀಡಿದ್ದ, ಬೆಳಗಾವಿಯಲ್ಲಿ ನಡೆದಿದ್ದ ಅಖಿಲ ಭಾರತ ಕಾಂಗ್ರೆಸ್ ಮಹಾ ಅಧಿವೇಶನದ, ಸ್ವಾತಂತ್ರ್ಯ ಸಿಕ್ಕಾಗ ನಡೆದ ಸಂಭ್ರಮಾಚರಣೆ, ಗಾಂಧೀಜಿ ಅಂತಿಮನಮನದ ಅಪರೂಪದ ಫೋಟೋಗಳನ್ನು ಸಂಗ್ರಹಿಸಿ ಈ ಸ್ಮಾರಕದಲ್ಲಿ ಪ್ರದರ್ಶನಕ್ಕೆ ಇಡಲಾಗಿದೆ.
ಇದನ್ನೂ ಓದಿ:75 ವರ್ಷಗಳಲ್ಲಿ ಜಾಗತಿಕ ಶಕ್ತಿಯಾಗಿ ಬದಲಾದ ಭವ್ಯ ಭಾರತದ ಸಾಧನೆಯ ಹೆಜ್ಜೆಗಳು
ಅಲ್ಲದೇ ಇದೇ ಸ್ಮಾರಕದಲ್ಲಿ ಮಹಾತ್ಮ ಗಾಂಧೀಜಿ ಹಾಗೂ ಗಂಗಾಧರರಾವ್ ದೇಶಪಾಂಡೆ ಅವರ ಪುತ್ಥಳಿ ಇಡಲಾಗಿದೆ. ಗಾಂಧೀಜಿ ಹೆಚ್ಚಾಗಿ ಬಳಸುತ್ತಿದ್ದ ಚರಕವನ್ನೂ ಸ್ಮಾರಕದಲ್ಲಿ ಇರಿಸಲಾಗಿದೆ. ಗಾಂಧೀಜಿ ಭೇಟಿ ನೀಡಿದ್ದ ಹುದಲಿ ಈಗ ಐತಿಹಾಸಿಕ ಸ್ಥಳವಾಗಿದೆ. ಗಾಂಧೀಜಿ-ಗಂಗಾಧರರಾವ್ ದೇಶಪಾಂಡೆ ಸ್ಮಾರಕದ ಅಭಿವೃದ್ಧಿಗೆ ಬೇಡಿಕೆಗಳಿವೆ. ಇಲ್ಲಿ ಉದ್ಯಾನವನ ನಿರ್ಮಾಣಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಸರ್ಕಾರ ಶೀಘ್ರವೇ ಇತ್ತ ಗಮನ ಹರಿಸಬೇಕು ಎಂಬುದು ಸ್ಥಳೀಯರ ಒತ್ತಾಯವಾಗಿದೆ.