ಕರ್ನಾಟಕ

karnataka

ETV Bharat / state

ದೇಶ ಸ್ವತಂತ್ರವಾಗುವ ತನಕ ಮದುವೆಯಾಗಲ್ಲ ಎಂದು ಶಪಥ ಮಾಡಿದ್ದ ಹೋರಾಟಗಾರನ ಸ್ಮರಣೆ - ಮಾರಿಗುಡಿ

ಸ್ವಾತಂತ್ರ್ಯಕ್ಕೆ ಜೀವನ ಮುಡಿಪಿಟ್ಟ ಹೋರಾಟಗಾರ ಡಿಜಿ ಶಂಕರಪ್ಪ ಅವರು ಸ್ವಾತಂತ್ರ್ಯ ಸಿಗುವವರೆಗೂ ಮದುವೆಯಾಗಿರಲಿಲ್ಲ. ಮಹಾತ್ಮ ಗಾಂಧಿ ಅವರ ಭಾರತ ಬಿಟ್ಟು ತೊಲಗಿ ಅಭಿಯಾನದಲ್ಲಿ ಸಕ್ರಿಯವಾಗಿ ಪಾಲ್ಗೊಂಡು ಒಂದು ವರ್ಷ ಸೆರೆಮನೆ ವಾಸ ಅನುಭವಿಸಿ ಅಪ್ಪಟ ಗಾಂಧಿವಾದ ರೂಢಿಸಿಕೊಂಡಿದ್ದರು.

independence amrita mahotsava  Freedom fighter Shankarappa life detail
ಸ್ವಾತಂತ್ರ್ಯಕ್ಕೆ ಜೀವನ ಮುಡಿಪಿಟ್ಟ ಹೋರಾಟಗಾರ ಡಿಜಿ ಶಂಕರಪ್ಪ

By

Published : Aug 14, 2022, 5:34 PM IST

ಚಾಮರಾಜನಗರ: ದೇಶಕ್ಕೆ ಸ್ವಾತಂತ್ರ್ಯ ಸಿಗುವ ತನಕ ತಾನು ಮದುವೆಯಾಗಲ್ಲ ಎಂದು ಶಪಥಗೈದ ಯುವಕನೋರ್ವ ಅದೇ ರೀತಿ ನಡೆದು ಕೊನೆಗೆ ಸ್ವಾತಂತ್ರ್ಯ ಹೋರಾಟಗಾರರ ನೇತೃತ್ವದಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟ ಅಪರೂಪದ ಘಟನೆ ಅಂದಿನ ಅವಿಭಜಿತ ಮೈಸೂರಿಗೆ ಒಳಪಟ್ಟ ಚಾಮರಾಜನಗರದಲ್ಲಿ ನಡೆದಿತ್ತು.

ಹೌದು, ಚಾಮರಾಜನಗರ ತಾಲೂಕಿನ ದೊಡ್ದರಾಯಪೇಟೆ ಗ್ರಾಮದ ಶಂಕರಪ್ಪ ಎಂಬುವವರು ಮಹಾತ್ಮ ಗಾಂಧೀಜಿ ಅವರು ಕರೆ ನೀಡಿದ್ದ ಭಾರತ ಬಿಟ್ಟು ತೊಲಗಿ ಅಭಿಯಾನದಲ್ಲಿ ಸಕ್ರಿಯವಾಗಿ ಪಾಲ್ಗೊಂಡು ಒಂದು ವರ್ಷ ಸೆರೆಮನೆ ವಾಸ ಅನುಭವಿಸಿ ಅಪ್ಪಟ ಗಾಂಧಿವಾದ ರೂಢಿಸಿಕೊಂಡಿದ್ದರು.

ಸ್ವಾತಂತ್ರ್ಯ ಹೋರಾಟ:ಮಹಾತ್ಮ ಗಾಂಧೀಜಿ ಅವರ ಕ್ವಿಟ್ ಇಂಡಿಯಾ ಚಳವಳಿಯನ್ನು ಚಾಮರಾಜನಗರ ಗ್ರಾಮೀಣ ಭಾಗಕ್ಕೂ ಪಸರಿಸಿ ದೇಶದ ಕಿಚ್ಚನ್ನು ಹೆಚ್ಚಿಸಿದ ಕೀರ್ತಿ‌ ದೊಡ್ಡರಾಯಪೇಟೆ ಶಂಕರಪ್ಪ( ಡಿ ಜಿಶಂಕರಪ್ಪ), ರಂಗಸ್ವಾಮಿ, ವೆಂಕಟರಾವ್, ಸಿ.ಗೋಪಾಲರಾವ್, ಕೆ.ವಿ.ಕೃಷ್ಣಮೂರ್ತಿ, ನಾಗೇಶ್ ಎಂಬ ಹೋರಾಟಗಾರರ ಗುಂಪಿಗೆ ಸಲ್ಲಲಿದೆ.

ಶಂಕರಪ್ಪ ಅವರ ಮಗ ಪರಿಸರವಾದಿ ಪುಣಜನೂರು ದೊರೆಸ್ವಾಮಿ

ದೇಶ ಸ್ವಾತಂತ್ರ್ಯಗೊಂಡ ಬಳಿಕ ವಿವಾಹ: ಸ್ವಾತಂತ್ರ್ಯದ ಕಿಚ್ಚು ಹತ್ತಿಸಿಕೊಂಡು ಪ್ರಾಥಮಿಕ ಶಾಲಾ ಅವಧಿಯಲ್ಲೇ ಓದು ಬಿಟ್ಟು‌ ಹೋರಾಟಕ್ಕಿಳಿದ‌ ಶಂಕರಪ್ಪ ಅವರಿಗೆ ಮದುವೆ ಮಾಡಬೇಕೆಂದು ಮನೆಯವರು ಪಟ್ಟು ಹಿಡಿಯುತ್ತಾರೆ. ಸ್ನೇಹಿತರು ಸಹ ಒತ್ತಾಯಿಸುತ್ತಾರೆ. ಯಾರ ಮಾತಿಗೂ ಸೊಪ್ಪು ಹಾಕದ ಶಂಕರಪ್ಪ ದೇಶ ಸ್ವಾತಂತ್ರ್ಯ ಪಡೆಯುವ ತನಕ ತಾನು ವಿವಾಹ ಆಗಲ್ಲ ಎಂದು ಶಪಥಗೈದಿದ್ದರು. ಅದರಂತೆಯೇ ಕೊನೆಗೆ ದೇಶ ಸ್ವಾತಂತ್ರ್ಯಗೊಂಡ ಬಳಿಕವೇ ವೈವಾಹಿಕ ಜೀವನಕ್ಕೆ ಕಾಲಿಡುತ್ತಾರೆ.

ಸ್ವಾತಂತ್ರ್ಯ ಹೋರಾಟಗಾರರ ನೇತೃತ್ವ: ಶಂಕರಪ್ಪ ಅವರ ಶಪಥದ ಬಗ್ಗೆ ಮಾಹಿತಿ ಅರಿತಿದ್ದ ತಗಡೂರು ರಾಮಚಂದ್ರರಾಯರು, ದೊರೆಸ್ವಾಮಿ, ದಾಸಪ್ಪ, ಜೋಯಿಸ್ ಹಾಗೂ ಇನ್ನಿತರೆ ಹೋರಾಟಗಾರರು ಸೇರಿ ಮದುವೆ ಮಾಡಿ‌ ಶಪಥಕ್ಕೆ ಮಂಗಳ ಹಾಡುತ್ತಾರೆ. ಶಂಕರಪ್ಪ ಮದುವೆಯಲ್ಲಿ ಸ್ವಾತಂತ್ರ್ಯ ಹೋರಾಟಗಾರರೇ ಓಡಾಡಿ ಒಡನಾಡಿಯ ವಿವಾಹ ಸಂಭ್ರಮವನ್ನು ಹೆಚ್ಚಿಸುತ್ತಾರೆ.

ಮಗಳಿಗೆ ಸರ್ವೋದಯ ಎಂದು ಹೆಸರು: ಶಂಕರಪ್ಪ ಅಪ್ಪಟ ಗಾಂಧಿವಾದಿಯಾಗಿದ್ದು ಗಾಂಧೀಜಿ ತತ್ವಗಳು‌ ತಮ್ಮ ಮನೆಯಲ್ಲಿ ಹಾಸುಹೊಕ್ಕಾಗಿರಲು ಪ್ರಯತ್ನಿಸಿ ಸಫಲರೂ ಆಗುತ್ತಾರೆ. ಸ್ವಾತಂತ್ರ್ಯ ಸಿಕ್ಕ ಬಳಿಕ ಮದುವೆಯಾಗಿ ಹುಟ್ಟಿದ ಮೊದಲ ಮಗುವಿಗೆ "ಸರ್ವೋದಯ" ಎಂದು ನಾಮಕರಣ ಮಾಡುತ್ತಾರೆ.

ಶಂಕರಪ್ಪರ ಪುತ್ರ ಹೀಗಂದ್ರು.. ಶಂಕರಪ್ಪ ಅವರ ಮಗ ಪರಿಸರವಾದಿ ಪುಣಜನೂರು ದೊರೆಸ್ವಾಮಿ ಅವರು ಈಟಿವಿ ಭಾರತದೊಂದಿಗೆ ಮಾತನಾಡಿ, ನನ್ನ ತಂದೆ ಶಂಕರಪ್ಪ ಕ್ವಿಟ್ ಇಂಡಿಯಾ ಚಳವಳಿಯಲ್ಲಿ ಭಾಗಿಯಾಗಿ ಒಂದು ವರ್ಷ ಸೆರೆಮನೆ ವಾಸ ಅನುಭವಿಸಿದ್ದರು. ಸ್ವಾತಂತ್ರ್ಯ ಸಿಗುವ ತನಕ ಮದುವೆಯಾಗುವುದಿಲ್ಲ ಎಂದು ಶಪಥ ಮಾಡಿ ಅದರಂತೆ ನಡೆದುಕೊಂಡರು. ನನಗೂ ಕೂಡ ಚಿಕ್ಕಂದಿನಿಂದಲೇ ಖಾದಿ‌ ಬಟ್ಟೆ ತೊಡುವಂತೆ ಪ್ರೇರೇಪಿಸಿದರು. ಅದರಂತೆ ಇಂದಿಗೂ ನಾನು ಖಾದಿ ಬಟ್ಟೆಯನ್ನೇ ಧರಿಸುತ್ತಿದ್ದೇನೆ ಎಂದು ತಿಳಿಸಿದರು.

ಮಾರಿಗುಡಿಯಲ್ಲಿ ಗುಪ್ತಸಭೆ:ಮಹಾತ್ಮ ಗಾಂಧೀಜಿ ಆರಂಭಿಸಿದ ಭಾರತ ಬಿಟ್ಟು ತೊಲಗಿ ಹೋರಾಟಕ್ಕೆ ಕಿವಿಗೊಟ್ಟ ಚಾಮರಾಜನಗರ ಭಾಗದ ಯುವಕರು ಮನೆಮನೆಗೂ ಹೋರಾಟದ ಕಿಚ್ಚನ್ನು ಪಸರಿಸಿದರು. ಚಾಮರಾಜನಗರ ಹೃದಯಭಾಗವಾಗವಾದ ಮಾರಿಗುಡಿ ಸಮೀಪ ಹತ್ತಾರು ತರುಣರ ಗುಂಪು ಮಾರಿಗುಡಿ, ಗುರುನಂಜಶೆಟ್ಟರ ಛತ್ರ ಸಮೀಪ ಗುಪ್ತ ಸಭೆಗಳನ್ನು ಸೇರಿಸಿ ಹೋರಾಟದ ರೂಪುರೇಷೆ ರಚಿಸುತ್ತಿದ್ದರು. ಹೆಚ್.ಎಸ್. ದೊರೆಸ್ವಾಮಿ ಹೊರತರುತ್ತಿದ್ದ ಪೌರವಾಣಿ ಪತ್ರಿಕೆ, ಕರಪತ್ರಗಳನ್ನು ಮನೆ ಮನೆಗಳಿಗೂ ಹಂಚಿ ಸ್ವಾತಂತ್ರ್ಯದ ಕಿಚ್ಚನ್ನು ಪಸರಿಸಿ, ಬ್ರಿಟಿಷ್ ಅಧಿಕಾರಿಗಳಿಗೆ ತಲೆನೋವಾಗಿದ್ದರು.

ಇದನ್ನೂ ಓದಿ:ಸ್ವಾತಂತ್ರ್ಯ ಹೋರಾಟದಲ್ಲಿ ಮುದ್ದೇಬಿಹಾಳದ ಲದ್ದಿಮಠ ಕುಟುಂಬ.. ಸೋರುವ ಮನೆಯಲ್ಲಿ ಸಂಕಷ್ಟದ ಜೀವನ

ಮೈಸೂರಿ‌ನ ಸುಬ್ಬರಾಯನಕೆರೆಯಲ್ಲಿ ಆಗುತ್ತಿದ್ದ ಸ್ವಾತಂತ್ರ್ಯ ಹೋರಾಟದ ಸಭೆಗಳಿಗೆ ತಪ್ಪದೇ ಹೋಗುತ್ತಿದ್ದ ಚಾಮರಾಜನಗರದ ತರುಣರ ಗುಂಪು ಅಲ್ಲಿಂದ ಹೆಚ್.ಎಸ್.ದೊರೆಸ್ವಾಮಿ ಸೇರಿದಂತೆ ಇನ್ನಿತರ ಮುಖಂಡರನ್ನು ಚಾಮರಾಜನಗರಕ್ಕೆ ಕರೆತಂದು ಸಭೆಗಳನ್ನು ಮಾಡಿಸುತ್ತಿದ್ದರು. ತರುಣರ ಎಲ್ಲಾ ಮಾತುಕತೆಗಳಿಗೆ ಮಾರಿಗುಡಿ ವೇದಿಕೆಯಾಗಿತ್ತು. ಗುಪ್ತ ಸಭೆಗಳನ್ನು ಸೇರಿ ಹೋರಾಟವನ್ನು ಅನುಷ್ಠಾನಕ್ಕೆ ತರುತ್ತಿದ್ದರು ಎಂದು ಮಾಹಿತಿ ನೀಡಿದರು ಪುಣಜನೂರು ದೊರೆಸ್ವಾಮಿ.

ABOUT THE AUTHOR

...view details