ಬೆಳಗಾವಿ: ಸೌರವ್ ಚೋಪ್ರಾ ಅವರನ್ನು ಗೆಲ್ಲಿಸಿದರೆ ಮಂತ್ರಿ ಮಾಡುತ್ತೇನೆ. ಅಲ್ಲದೇ ಸವದತ್ತಿ ಕ್ಷೇತ್ರವನ್ನು ದತ್ತು ಪಡೆದುಕೊಂಡು ಸಮಗ್ರ ಅಭಿವೃದ್ಧಿ ಮಾಡುತ್ತೇನೆ ಎಂದು ಮಾಜಿ ಸಿಎಂ ಕುಮಾರಸ್ವಾಮಿ ಭರವಸೆ ನೀಡಿದರು. ಸವದತ್ತಿ ಪಟ್ಟಣದಲ್ಲಿ ಜೆಡಿಎಸ್ ಪಂಚರತ್ನ ರಥಯಾತ್ರೆ ಸಮಾವೇಶದಲ್ಲಿ ಭಾಗಿಯಾಗಿ ಮಾತನಾಡಿದ ಅವರು, ಸೌರವ ಚೋಪ್ರಾ ಅವರನ್ನು ಗೆಲ್ಲಿಸಿದರೆ ಸವದತ್ತಿ ಕ್ಷೇತ್ರದ ಬಡ ಜನರ ಬದುಕು ಬದಲಾಗಲಿದೆ. ಬೆಳಗಾವಿ ನಗರದಲ್ಲಿ ನೇಕಾರರು, ಕೂಲಿ ಕಾರ್ಮಿಕರ ಪರಿಸ್ಥಿತಿ ಚಿಂತಾಜನಕವಾಗಿದೆ. ಗ್ರಾಮೀಣ ಜನರ ಪರಿಸ್ಥಿತಿ ಕೂಡ ಅದೇ ರೀತಿಯಿದೆ. ಸ್ವಾತಂತ್ರ್ಯ ಬಂದು 75 ವರ್ಷ ಆದರೂ ರಾಷ್ಟ್ರೀಯ ಪಕ್ಷಗಳು ಜನರ ಜೀವನದ ಜೊತೆ ಚೆಲ್ಲಾಟ ಆಡುತ್ತಿವೆ. ಹೀಗಾಗಿ ಈ ಬಾರಿ ನಮಗೆ ಸಂಪೂರ್ಣ ಬಹುಮತದೊಂದಿಗೆ ಆಶೀರ್ವಾದ ಮಾಡುವಂತೆ ಕೇಳಿಕೊಂಡರು.
ಬೆಳಗಾವಿ 5 - 6 ಕ್ಷೇತ್ರ ನಿಶ್ಚಿತ: ಬೆಳಗಾವಿ ಜಿಲ್ಲೆಯಲ್ಲಿ ಈ ಬಾರಿ ಕನಿಷ್ಠ 5 - 6ಸ್ಥಾನಗಳನ್ನು ಗೆಲ್ಲುವುದು ನಿಶ್ಚಿತ. ಸವದತ್ತಿ ಯಲ್ಲಮ್ಮನ ಮುಂಭಾಗದಲ್ಲಿ ನಿಂತು ಹೇಳುತ್ತಿದ್ದೇನೆ. ನನಗೆ ಸ್ಪಷ್ಟ ಬಹುಮತ ಕೊಟ್ಟರೆ ಪ್ರತಿ ಕುಟುಂಬಗಳ ಬದುಕು ಮತ್ತು ಭವಿಷ್ಯ ಬದಲಾಯಿಸದಿದ್ದರೆ ಜೆಡಿಎಸ್ ಪಕ್ಷವನ್ನೆ ವಿಸರ್ಜಿಸುತ್ತೇನೆ ಎಂದು ಕುಮಾರಸ್ವಾಮಿ ಸ್ಪಷ್ಟಪಡಿಸಿದರು. ಬೆಳಗಾವಿ ಕರ್ನಾಟಕದ ಅವಿಭಾಜ್ಯ ಅಂಗ ಎಂದು ವರ್ಷದಲ್ಲಿ ಒಂದು ತಿಂಗಳು ಅಧಿವೇಶನ ನಡೆಸುವಂತೆ ತೀರ್ಮಾನ ಕೈಗೊಂಡು ಸುವರ್ಣ ವಿಧಾನಸೌಧ ನಿರ್ಮಾಣ ಮಾಡಿದ್ದೆವು. ಆದರೆ, ಈಗಿನ ಸರ್ಕಾರಗಳು ಸುವರ್ಣ ವಿಧಾನಸೌಧವನ್ನು ನಿಷ್ಕ್ರೀಯಗೊಳಿಸಿವೆ ಎಂದು ಕುಮಾರಸ್ವಾಮಿ ಕಿಡಿಕಾರಿದರು.
ವರ್ಷಕ್ಕೆ ಐದು ಸಿಲಿಂಡರ್ ಉಚಿತ: ದೇವೇಗೌಡರು ಪ್ರಧಾನಮಂತ್ರಿ ಆಗಿದ್ದ ವೇಳೆ ಸಕ್ಕರೆ ಕಾರ್ಖಾನೆಗಳ ಸ್ಥಾಪನೆಗೆ ನಿಯಮಗಳನ್ನು ಸರಳೀಕರಿಸಿದ್ದರಿಂದ ಬೆಳಗಾವಿ ಜಿಲ್ಲೆಯಲ್ಲಿ 22 ಸಕ್ಕರೆ ಕಾರ್ಖಾನೆಗಳಿಗೆ ಅನುಮತಿ ಕೊಟ್ಟಿದ್ದರು. ಇದರಿಂದ ಜಿಲ್ಲೆಯ ಕಬ್ಬು ಬೆಳೆಗಾರರಿಗೆ ಅನುಕೂಲ ಆಗಿತ್ತು ಎಂದು ನೆನಪಿಸಿಕೊಂಡರು. ನಾನು ಸಿಎಂ ಆಗಿದ್ದಾಗ ಸಾಲ ಮನ್ನಾ ಮಾಡಿದ್ದರಿಂದ ಸವದತ್ತಿ ಕ್ಷೇತ್ರದಲ್ಲಿಯೇ 108 ಕೋಟಿ ರೂ. ಸಾಲ ಮನ್ನಾ ಆಗಿತ್ತು.
ಹೆಣ್ಣು ಮಕ್ಕಳು ಸ್ವಾಭಿಮಾನದಿಂದ ಬದುಕುವಂತ ಯೋಜನೆ ಹಾಕಿಕೊಂಡಿದ್ದೇನೆ. ರಾಜ್ಯದಲ್ಲಿ ಮನೆ ಇಲ್ಲದ ಕುಟುಂಬಗಳಿಗೆ ಮನೆ ಕಟ್ಟಿ ಕೊಡುತ್ತೇವೆ. ಗ್ಯಾಸ್ ಬೆಲೆ ಗಗನಕ್ಕೇರಿದೆ, ಹೀಗಾಗಿ ಪ್ರತಿ ಮನೆಗೆ ವರ್ಷಕ್ಕೆ ಐದು ಸಿಲಿಂಡರ್ ಉಚಿತವಾಗಿ ನೀಡುತ್ತೇನೆ. ರೈತರಿಗೆ ಆರ್ಥಿಕ ಶಕ್ತಿ ತುಂಬುವ ಉದ್ದೇಶದಿಂದ ರೈತರ ಜೀವಿತಾವಧಿವರೆಗೆ ತಿಂಗಳಿಗೆ ಐದು ಸಾವಿರ ರೂ. ನೀಡುವುದು ಸೇರಿ ಪಂಚರತ್ನ ಯೋಜನೆ ಜಾರಿಗೆ ತರಲು ನಮಗೆ ಶಕ್ತಿ ನೀಡುವಂತೆ ಕುಮಾರಸ್ವಾಮಿ ಕೋರಿದರು.