ಪಕ್ಷ ಸೇರ್ಪಡೆ ಕುರಿತು ಮಾಜಿ ಸಚಿವ ಗೋವಿಂದ ಕಾರಜೋಳ ಹೇಳಿಕೆ ಬೆಳಗಾವಿ:ಯಾವ ಬಿಜೆಪಿ ಶಾಸಕರು ಪಕ್ಷ ಬಿಟ್ಟು ಹೋಗುತ್ತಾರೆ ಎಂಬ ಬಗ್ಗೆ ನಿಖರವಾಗಿ ಹೇಳಿಲ್ಲ. ಕೇವಲ ಮಾಧ್ಯಮಗಳಲ್ಲಿ ಊಹಾಪೋಹಗಳು ಸೃಷ್ಟಿ ಆಗುತ್ತಿವೆ ಎಂದು ಮಾಜಿ ಸಚಿವ ಗೋವಿಂದ ಕಾರಜೋಳ ಹೇಳಿಕೆ ನೀಡಿದ್ದಾರೆ. ಬೆಳಗಾವಿಯ ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಮಾಧ್ಯಮಗಳ ಜತೆಗೆ ಮಾತನಾಡಿದ ಅವರು, ನನ್ನ ಮಾಹಿತಿ ಪ್ರಕಾರ ಯಾರು ಪಕ್ಷ ಬಿಟ್ಟು ಹೋಗುವವರಿಲ್ಲ. ಕಾಂಗ್ರೆಸ್ ಸರ್ಕಾರದಿಂದ ರಾಜ್ಯದಲ್ಲಿ ಯಾವುದೇ ಅಭಿವೃದ್ಧಿ ಕೆಲಸ ಆಗುತ್ತಿಲ್ಲ. ಹಾಗಾಗಿ ಬಿಜೆಪಿ ಬಿಟ್ಟು ಯಾಕೆ ಹೋಗುತ್ತಾರೆ ಎಂದು ಮಾಜಿ ಸಚಿವರು ಪ್ರಶ್ನಿಸಿದರು.
ಈ ಮೂರು ತಿಂಗಳಲ್ಲಿ ಕಾಂಗ್ರೆಸ್ ಪಕ್ಷದ ಅಭಿವೃದ್ಧಿ ಕಾರ್ಯ ಶೂನ್ಯವಾಗಿದೆ. ನೌಕರರ ವರ್ಗಾವಣೆ ದಂಧೆ ಮಾಡಿಕೊಂಡು ಕುಳಿತಿರುವ ಕಾಂಗ್ರೆಸ್ ಪಕ್ಷಕ್ಕೆ ಯಾರೂ ಹೋಗುವುದಿಲ್ಲ. ರಾತ್ರಿ ಕಂಡ ಬಾವಿಗೆ ಹಗಲು ಯಾರು ಬೀಳುವುದಿಲ್ಲ ಎನ್ನುವುದು ನನ್ನ ಅಭಿಪ್ರಾಯ ಎಂದು ಗೋವಿಂದ ಕಾರಜೋಳ ಲೇವಡಿ ಮಾಡಿದರು.
ಮುಂದುವರೆದು ಮಾತನಾಡಿದ ಅವರು, ಬಾಗಲಕೋಟೆಯಲ್ಲಿ ಶಿವಾಜಿ ಮೂರ್ತಿ ತೆರವು ಮಾಡಿರುವ ವಿಚಾರಕ್ಕೆ, ಸಂಜೆ ಬಾಗಲಕೋಟೆಗೆ ಹೋಗಿ ಈ ಬಗ್ಗೆ ವಿಚಾರ ಮಾಡುತ್ತೇನೆ ಎಂದು ಹೇಳಿದರು.
10ರಿಂದ 15 ಮಂದಿ ಕಾಂಗ್ರೆಸ್ ಸೇರ್ಪಡೆಯಾಗಲಿದ್ದಾರೆ- ಚಲುವರಾಯ ಸ್ವಾಮಿ ಬಾಂಬ್:ಕಾಂಗ್ರೆಸ್ ಪಕ್ಷಕ್ಕೆ ಇತರ ಪಕ್ಷದಿಂದ ಶಾಸಕರು ಸೇರ್ಪಡೆ ವಿಚಾರ ರಾಜ್ಯ ರಾಜಕೀಯದಲ್ಲಿ ಸಂಚಲನ ಮೂಡಿಸುತ್ತಿದೆ. ಬಿಜೆಪಿಯವರು ಯಾವ ಶಾಸಕರು ಪಕ್ಷ ತೊರೆಯುವುದಿಲ್ಲ ಎಂದರೆ ಕಾಂಗ್ರೆಸ್ ಮಾತ್ರ ಬಿಜೆಪಿ, ಜೆಡಿಎಸ್ ಶಾಸಕರು ನಮ್ಮ ಪಾರ್ಟಿ ಸೇರಲಿದ್ದಾರೆ ಎಂದೆ ಹೇಳುತ್ತಿದೆ. ಇದೀಗ ಮೈಸೂರಿನಲ್ಲಿ ಸಚಿವ ಚಲುವರಾಯಸ್ವಾಮಿ ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳಿಂದ 10 ರಿಂದ 15 ಮಂದಿ ಹಾಲಿ ಮತ್ತು ಮಾಜಿ ಶಾಸಕರು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗಲಿದ್ದು, ಈ ಬಗ್ಗೆ ಮಾತುಕತೆ ನಡೆಯುತ್ತಿದೆ. ಕೆಲವೇ ದಿನಗಳಲ್ಲಿ ಎಲ್ಲವೂ ಅಂತಿಮವಾಗಲಿದೆ. ಸದ್ಯಕ್ಕೆ ಕಾಂಗ್ರೆಸ್ ಸೇರ್ಪಡೆಯಾಗುವವರ ಹೆಸರನ್ನು ಹೇಳಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.
ಪಕ್ಷ ಸೇರುವ ವಿಚಾರ ಕೇವಲ ವದಂತಿಯಷ್ಟೆ ಎಂದ ಬಿಜೆಪಿ ಶಾಸಕ ST ಸೋಮಶೇಖರ್: ಇದೇ ವಿಚಾರವಾಗಿ ನಿನ್ನೆ ಮಾಜಿ ಸಚಿವ ಹಾಗೂ ಯಶವಂತಪುರ ಬಿಜೆಪಿ ಶಾಸಕ ಎಸ್.ಟಿ.ಸೋಮಶೇಖರ್ ಪ್ರತಕ್ರಿಯಿಸಿದ್ದರು. ಕಾಂಗ್ರೆಸ್‌ನವರು ಬನ್ನಿ ಅಂತ ಕರೆದಿಲ್ಲ, ನಾನು ಹೋಗ್ತೀನಿ ಅಂತ ಅರ್ಜಿ ಹಾಕಿಲ್ಲ. ಈಗಲೂ ನನ್ನಲ್ಲಿ ಬಿಜೆಪಿ ತೊರೆಯುವ ಚಿಂತನೆ ಇಲ್ಲ. ಮುಂದೆಯೂ ಬಿಜೆಪಿ ಬಿಡುವ ಪ್ಲಾನ್ ಇಲ್ಲ. ಕಾಂಗ್ರೆಸ್ ಪಕ್ಷ ಸೇರುವ ವಿಚಾರ ಕೇವಲ ವದಂತಿಯಷ್ಟೇ ಎಂದಿದ್ದರು.
ಅಲ್ಲದೇ, "ಯಶವಂತಪುರ ಕ್ಷೇತ್ರದಲ್ಲಿ ಸ್ಥಳೀಯ ಮೂಲ ಬಿಜೆಪಿಗರು ನನ್ನ ವಿರುದ್ಧ ಕೆಲಸ ಮಾಡಿದ್ದರು. ನನ್ನನ್ನು ಸೋಲಿಸಬೇಕು ಅಂತ ಆಡಿಯೋ ವೈರಲ್ ಮಾಡಿದ್ದರು. ಬಿಜೆಪಿಯವರೇ ನನಗೆ ಕಾಂಗ್ರೆಸ್ಗೆ ಕಳುಹಿಸುವಂತಿದೆ. ಈ ನನ್ ಮಗನ್ನು ಸೋಲಿಸಬೇಕು ಅಂತ ಸ್ಥಳೀಯ ಬಿಜೆಪಿವರು ಆಡಿಯೋ ಮಾಡಿದ್ದರು. ನಾನು ಪಕ್ಷ ವಿರೋಧಿ ಚಟುವಟಿಕೆ ಮಾಡಿಲ್ಲ, ನಾನು ಬಿಜೆಪಿ ಬಿಟ್ಟು ಹೋಗಲ್ಲ, ಇದರಲ್ಲಿ ಅನುಮಾನ ಇಲ್ಲ" ಎಂದು ಸ್ಪಷ್ಟನೆ ನೀಡಿದ್ದರು.
ಇದನ್ನೂ ಓದಿ:ಬಿಜೆಪಿ ಸರ್ಕಾರದ ಅವಧಿಯ 40ರಷ್ಟು ಕಮಿಷನ್ ಪ್ರಕರಣ: ತನಿಖೆಗೆ ನಾಗಮೋಹನ್ ದಾಸ್ ನೇತೃತ್ವದ ಸಮಿತಿ ರಚನೆ