ಬಾಗಲಕೋಟೆ:ಕೊರೊನಾ ಸೋಂಕು ತಡೆಗಟ್ಟುವಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರ ಸಂಪೂರ್ಣ ವಿಫಲವಾಗಿದೆ. ಕೊರೊನಾ ಸಂಬಂಧ ಸಾಮಗ್ರಿ ಖರೀದಿಯಲ್ಲಿ ಸರ್ಕಾರ ಭಾರಿ ಪ್ರಮಾಣದಲ್ಲಿ ಭ್ರಷ್ಟಾಚಾರ ನಡೆಸಿದ್ದು, ಜಂಬಲರಾಣಿ ಡಕಾಯಿತಿ ಪ್ರಕರಣ ನೆನಪಿಗೆ ಬರುತ್ತಿದೆ. ಈ ಬಗ್ಗೆ ಸದನ ಸಮಿತಿ ರಚಿಸಿ ತನಿಖೆ ನಡೆಸಬೇಕು ಎಂದು ವಿಧಾನ ಪರಿಷತ್ತಿನ ವಿರೋಧ ಪಕ್ಷದ ನಾಯಕ ಎಸ್. ಆರ್. ಪಾಟೀಲ ಆಗ್ರಹಿಸಿದ್ದಾರೆ.
ನವನಗರದ ಪ್ರೆಸ್ ಕ್ಲಬ್‌ನಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಸರ್ಕಾರ ಕೋವಿಡ್-19ಗೆ ಸಂಬಂಧಿಸಿದಂತೆ ಸಾಮಗ್ರಿ ಖರೀದಿಯಲ್ಲಿ ನಡೆಸಿದ ಭ್ರಷ್ಟಾಚಾರದ ಬಗ್ಗೆ ಸಾಕ್ಷಿ ಸಮೇತ ಬಹಿರಂಗಪಡಿಸುತ್ತೇವೆ. ಎಲ್ಲಾ ದಾಖಲೆಯನ್ನು ಪಡೆದುಕೊಂಡು ಆ ಮೂಲಕ ಹೋರಾಟ ಮಾಡುತ್ತೇವೆ ಎಂದ ಅವರು ಸರ್ಕಾರ ಇಲ್ಲಿಯವರೆಗೂ ಎಷ್ಟು ವೆಚ್ಚ ಮಾಡಿದೆ? ಲೆಕ್ಕ ಕೂಡಲಿ, ಇಲ್ಲವೇ ಸಾರ್ವಜನಿಕವಾಗಿ ಲೆಕ್ಕವನ್ನು ತನಿಖೆ ಮಾಡುವುದಕ್ಕೆ ಸದನ ಸಮಿತಿ ರಚನೆ ಮಾಡಲಿ ಎಂದು ಆಗ್ರಹಿಸಿದರು.