ಬೆಳಗಾವಿ:ಬೆಳಗಾವಿ ಲೋಕಸಭೆ ಉಪಚುನಾವಣೆಗೆ ನಾಮಪತ್ರ ಸಲ್ಲಿಸಿದ್ದ ನಾಲ್ವರು ಪಕ್ಷೇತರ ಅಭ್ಯರ್ಥಿಗಳು ಇಂದು ತಮ್ಮ ನಾಮಪತ್ರ ಹಿಂಪಡೆದು ಬಿಜೆಪಿ ಅಭ್ಯರ್ಥಿ ಮಂಗಳಾ ಅಂಗಡಿ ಅವರಿಗೆ ಬೆಂಬಲಿಸಲು ನಿರ್ಧರಿಸಿದ್ದಾರೆ.
ನಾಮಪತ್ರ ವಾಪಸ್ ಪಡೆದ ಬೆಳಗಾವಿಯ ನಾಲ್ವರು ಅಭ್ಯರ್ಥಿಗಳು ನಾಮಪತ್ರ ಹಿಂಪಡೆಯಲು ಇಂದು ಕೊನೆಯ ದಿನವಾಗಿತ್ತು. ಬಿಜೆಪಿ ಶಾಸಕ ಅನಿಲ್ ಬೆನಕೆ ಅವರ ಜೊತೆಗೆ ಜಿಲ್ಲಾಧಿಕಾರಿ ಕಚೇರಿಗೆ ಆಗಮಿಸಿದ ನಾಲ್ವರು ಪಕ್ಷೇತರ ಅಭ್ಯರ್ಥಿಗಳು ತಮ್ಮ ಉಮೇದುವಾರಿಕೆ ಹಿಂಪಡೆದರು. ಅಶೋಕ ಹನಜಿ, ಹನುಮಂತ ನಾಗನೂರ, ಬಸವರಾಜ ಹುದ್ದಾರ ಹಾಗೂ ಸುರೇಶ ಪರಗಣ್ಣನವರ ಎಂಬುವವರು ನಾಮಪತ್ರ ಹಿಂಪಡೆದಿದ್ದಾರೆ.
ಓದಿ: ಬೆಂಗಳೂರಲ್ಲಿ ಮತ್ತೆ 3 ಸಾವಿರ ಗಡಿ ದಾಟಿದ ಕೊರೊನಾ ವೈರಸ್ ಕೇಸ್
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅಭ್ಯರ್ಥಿಗಳು, ಸುರೇಶ್ ಅಂಗಡಿ ಅವರು ರೈಲ್ವೆ ಸಚಿವರಾದ ಬಳಿಕ ಸಾಕಷ್ಟು ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದರು. ರಾಜ್ಯ ಹಾಗೂ ಜಿಲ್ಲೆಯಲ್ಲಿ ರೈಲು ಯೋಜನೆ ಜಾರಿಗೆಗೆ ಚಾಲನೆ ನೀಡಿದ್ದರು. ಅವರ ಅಕಾಲಿಕ ನಿಧನ ಜಿಲ್ಲೆಗೆ ತುಂಬಲಾರದ ನಷ್ಟವಾಗಿದೆ. ಉಪಚುನಾವಣೆಯ ಬಿಜೆಪಿ ಅಭ್ಯರ್ಥಿಯಾಗಿ ಸುರೇಶ್ ಅಂಗಡಿ ಪತ್ನಿ ಮಂಗಳಾ ಅವರು ಕಣಕ್ಕಿಳಿದಿದ್ದಾರೆ. ನಾವು ಕಣದಿಂದ ಹಿಂದೆ ಸರಿದು, ಬಿಜೆಪಿ ಅಭ್ಯರ್ಥಿಗಳ ಗೆಲುವಿಗೆ ಶ್ರಮಿಸುತ್ತೇವೆ ಎಂದರು.