ಬೆಳಗಾವಿ:ಭಾರತದ ಭವಿಷ್ಯ ಮುಸ್ಲಿಂರ ಮೇಲೆ ಅವಲಂಬನೆಯಾಗಿದೆ ಎಂದು ಮಾಜಿ ಪ್ರಧಾನಿ ದೇವೇಗೌಡ ಹೇಳಿಕೆ ನೀಡುವ ಮೂಲಕ ಹಿಂದೂಗಳಿಗೆ ಅಪಮಾನ ಮಾಡುವುದರೊಂದಿಗೆ ದೇಶದ ವಿಭಜನೆಗೆ ಮುಂದಾಗಿದ್ದಾರೆಂದು ಬಿಜೆಪಿ ಜಿಲ್ಲಾ ವಕ್ತಾರ ಎಂ.ಬಿ ಜಿರ್ಲಿ ಆರೋಪಿಸಿದ್ದಾರೆ.
ಸುದ್ಧಿಗೋಷ್ಠಿಯಲ್ಲಿ ಮಾತನಾಡಿದ ಅವರು, ದೇಶದ ಭವಿಷ್ಯ 30 ಕೋಟಿ ಮುಸ್ಲಿಂರ ಮೇಲೆ ಅವಲಂಬನೆಯಾಗಿದೆ ಎಂಬ ದೇವೇಗೌಡರ ಹೇಳಿಕೆಯನ್ನು ನೋಡಿದರೆ ದೇಶದಲ್ಲಿ ಕೋಮುವಾದ ಸೃಷ್ಟಿಸಿ ರಾಷ್ಟ್ರ ವಿಭಜನೆಗೆ ಗೌಡರು ಮುಂದಾಗಿದ್ದಾರೆ ಎಂದು ಗಂಭೀರ ಆರೋಪ ಮಾಡಿದರು.
ಈ ರೀತಿ ಅಸಂವಿಧಾನಿಕ ಹೇಳಿಕೆಯನ್ನು ನೀಡುವುದರ ಮೂಲಕ ಹಿಂದೂಗಳಿಗೆ ಅಪಮಾನ ಮಾಡಿದ್ದಾರೆ. ಈ ಮಾತನ್ನು ಹಿಂದಕ್ಕೆ ತೆಗೆದುಕೊಳ್ಳಬೇಕೆಂದು ಆಗ್ರಹಿಸಿದರು.
ಕಾಂಗ್ರೆಸ್ ಆಡಳಿತದಲ್ಲಿ ಜಾರಿಗೊಳಿಸಿದ್ದ ಸುಮಾರು 1200 ಅಭಿವೃದ್ಧಿ ವಿರೋಧಿ ಕಾನೂನುಗಳನ್ನು ಬಿಜೆಪಿ ಸರ್ಕಾರ ರದ್ದು ಮಾಡಿದ್ದು, ಇನ್ನೂ1824 ಕಾನೂನುಗಳನ್ನು ಗುರುತಿಸಿ ರದ್ದುಗೊಳಿಸಲು ಯೋಜನೆ ಮಾಡಲಾಗಿದೆ ಎಂದರು.
ದೇಶದಾದ್ಯಂತ 40 ಸಾವಿರ ಜಡ್ಜ್ಗಳ ನೇಮಕಕ್ಕೆ ಕೇಂದ್ರ ಸರ್ಕಾರ ಚಾಲನೆ ನೀಡಿದೆ. ಮೊದಲ ಬಾರಿಗೆ ಬಾಂಗ್ಲಾ ಮತ್ತು ಭಾರತದ ನಡುವಿನ ಗಡಿಯನ್ನು ಗುರುತಿಸಿ ನುಸುಳುಕೋರರನ್ನು ತಡೆಗಟ್ಟಲಾಗಿದೆ. ನರೇಂದ್ರ ಮೋದಿ ಆಡಳಿತದಲ್ಲಿ ದೇಶ ಸುಭದ್ರವಾಗಿದೆ ಎಂದರು.