ಕರ್ನಾಟಕ

karnataka

ETV Bharat / state

ಅರಣ್ಯದಲ್ಲಿ ಶೇ.40ರಷ್ಟು ಕಳೆ, ವನ್ಯಜೀವಿಗಳಿಗೆ ಸಮಸ್ಯೆಯಾಗುತ್ತಿರುವುದು ನಿಜ : ಅರಣ್ಯ ಸಚಿವ ಈಶ್ವರ ಖಂಡ್ರೆ - Minister Eshwar Khandre statement

ವನ್ಯಜೀವಿಗಳ ಸಂಚಾರ ಮತ್ತು ಆಹಾರ ಲಭ್ಯತೆ ಹಾಗೂ ಆನೆ ಹಾವಳಿ ತಡೆಗೆ ಸೂಕ್ತ ಕ್ರಮ ವಹಿಸಲಾಗುವುದು ಎಂದು ಅರಣ್ಯ ಸಚಿವ ಈಶ್ವರ್​ ಖಂಡ್ರೆ ಹೇಳಿದ್ದಾರೆ.

forest-minister-eshwar-khandre  Spoke at  winter session
ಅರಣ್ಯದಲ್ಲಿ ಶೇ.40ರಷ್ಟು ಕಳೆ, ವನ್ಯಜೀವಿಗಳಿಗೆ ಸಮಸ್ಯೆಯಾಗುತ್ತಿರುವುದು ನಿಜ : ಅರಣ್ಯ ಸಚಿವ ಈಶ್ವರ ಖಂಡ್ರೆ

By ETV Bharat Karnataka Team

Published : Dec 4, 2023, 5:57 PM IST

Updated : Dec 5, 2023, 6:33 AM IST

ಅರಣ್ಯ ಸಚಿವ ಈಶ್ವರ ಖಂಡ್ರೆ ಹೇಳಿಕೆ

ಬೆಳಗಾವಿ/ಬೆಂಗಳೂರು: ರಾಜ್ಯದ ಅರಣ್ಯ ಪ್ರದೇಶಗಳಲ್ಲಿ ಕಳೆ ಹೆಚ್ಚಾಗುತ್ತಿರುವುದರಿಂದ ವನ್ಯಜೀವಿಗಳಿಗೆ ಸಮಸ್ಯೆಯಾಗುತ್ತಿದ್ದು, ಕಳೆ ತೆರವು ಮಾಡಿ ವನ್ಯಜೀವಿಗಳ ಸಂಚಾರ ಮತ್ತು ಆಹಾರ ಲಭ್ಯತೆ ಹೆಚ್ಚಿಸಲು ಬೇಕಾದ ಎಲ್ಲ ಕ್ರಮವನ್ನು ಸರ್ಕಾರ ಕೈಗೊಳ್ಳಲಿದೆ. ಅದೇ ರೀತಿ ಆನೆ ಹಾವಳಿ ತಡೆಗೆ ರೈಲ್ವೆ ಬ್ಯಾರಿಕೇಡ್ ಶಾಶ್ವತ ಪರಿಹಾರವಾಗಿದ್ದು, ಅಗತ್ಯವಿರುವ ಕಡೆ ರೈಲ್ವೆ ಬ್ಯಾರಿಕೇಡ್ ಅಳವಡಿಸಲು ಕ್ರಮವಹಿಸಲಾಗುತ್ತದೆ ಎಂದು ಅರಣ್ಯ ಸಚಿವ ಈಶ್ವರ ಖಂಡ್ರೆ ತಿಳಿಸಿದ್ದಾರೆ.

ವಿಧಾನ ಪರಿಷತ್ ಪ್ರಶ್ನೋತ್ತರ ಕಲಾಪದಲ್ಲಿ ಬಿಜೆಪಿ ಸದಸ್ಯೆ ತೇಜಸ್ವಿನಿಗೌಡ ಪ್ರಶ್ನೆಗೆ ಉತ್ತರಿಸಿದ ಅವರು, ಬಂಡೀಪುರ, ನಾಗರಹೋಳೆ, ಬನ್ನೇರುಘಟ್ಟ ಅರಣ್ಯದಲ್ಲಿ ಕಳೆಯದ್ದು ದೊಡ್ಡ ಸಮಸ್ಯೆ ಇದೆ. ಲಂಟಾನ ನಮ್ಮ ಕಳೆಯಲ್ಲ. ವಿದೇಶದಿಂದ ಬಂದಿದೆ. ಇದನ್ನು ಸುಟ್ಟರೂ ಮತ್ತೆ ಬೆಳೆಯುತ್ತಿದೆ. ಈ ಬಗ್ಗೆ ಸಂಶೋಧನೆ ಆಗಿದೆ. ಭೂಮಿಯ ಕೆಳಗೆ ನಾಲ್ಕು ಇಂಚು ಒಳಗಿನಿಂದ ಇದನ್ನು ತೆಗೆದುಹಾಕಬೇಕು ಎಂದು ವರದಿ ಕೊಟ್ಟಿದ್ದಾರೆ. ಅರಣ್ಯದಲ್ಲಿ ಶೇ.40-50 ರಷ್ಟು ಕಳೆ ಇರುವ ಕಾರಣ ವನ್ಯಜೀವಿಗಳ ಸಂಚಾರಕ್ಕೆ ಸಮಸ್ಯೆಯಾಗುತ್ತಿದೆ. ಇದರ ನಿವಾರಣೆಗೆ ಕ್ರಮ ವಹಿಸಲಾಗುತ್ತಿದೆ ಎಂದು ತಿಳಿಸಿದರು.

5 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ವನ್ಯಜೀವಿಗಳ ಆಹಾರಕ್ಕೆ ಬೇಕಾದ ಗಿಡ ಬೆಳೆಯಲಾಗುತ್ತಿದೆ. 1 ಹೆಕ್ಟೇರ್ ಕಳೆ ತೆರವು ಮಾಡಲು 87 ಸಾವಿರ ರೂ. ಖರ್ಚಾಗಲಿದೆ. ಕಳೆ ತೆಗೆಯಲು ಅನುದಾನ ಕಡಿಮೆ. ಒಟ್ಟಾರೆಯಾಗಿ ಕಳೆ ತೆರವು ಮಾಡಲು 1200 ಕೋಟಿ ರೂ. ಅನುದಾನದ ಅವಶ್ಯಕತೆ ಇದೆ. ಸಿಎಂ ಹಾಗು ಆರ್ಥಿಕ ಇಲಾಖೆ ಜೊತೆ ಚರ್ಚಿಸಿ ಅನುದಾನ ಹೆಚ್ಚಿಸಲು ಕ್ರಮ ವಹಿಸಲಾಗುತ್ತದೆ. ಆದ್ಯತೆ ಮೇರೆಗೆ ಕಳೆ ತೆಗೆಯಲು ಕ್ರಮ ವಹಿಸಿ ವನ್ಯಜೀವಿಗಳ ಮೇವಿಗೆ ಬೇಕಾದ ಕ್ರಮ ಕೈಗೊಳ್ಳಲಾಗುತ್ತದೆ ಎಂದರು.

ಸದ್ಯ 7 ಆನೆ ಕಾರ್ಯಪಡೆ ರಚಿಸಿದ್ದೇವೆ. ಹೊರಗುತ್ತಿಗೆ ಆಧಾರದಲ್ಲಿ ಮತ್ತು ನಮ್ಮ ಸಿಬ್ಬಂದಿ ಸೇರಿ ಕೆಲಸ ಮಾಡುತ್ತಿದ್ದಾರೆ. ಕಾರ್ಯಪಡೆಯಲ್ಲಿ ಕೆಲಸ ಮಾಡುವ ವ್ಯಕ್ತಿ ಆನೆ ತುಳಿತದಿಂದ ಮೃತಪಟ್ಟ ಘಟನೆ ನಡೆದಿದೆ. ಹಾಗಾಗಿ ಹೆಚ್ಚಿನ ತರಬೇತಿಗೆ ಕ್ರಮ ವಹಿಸಲಾಗಿದೆ. ಆನೆ ಹಾವಳಿ ತಡೆಗೆ ರೈಲ್ವೆ ಬ್ಯಾರಿಕೇಡ್, ಆನೆ ಕಂದಕ ನಿರ್ಮಾಣ ಮಾಡುತ್ತಿದ್ದೇವೆ. ಸೌರಶಕ್ತಿ ಬೇಲಿ ನಿರ್ಮಿಸಲಾಗುತ್ತಿದೆ. ಆದರೂ ರೈಲ್ವೆ ಬ್ಯಾರಿಕೇಡ್ ಶಾಶ್ವತ ಪರಿಹಾರವಾಗಿದೆ. ಇದಕ್ಕೆ ಹೆಚ್ಚಿನ ಅನುದಾನ ಬೇಕಿದೆ. ಒಂದು ಕಿಲೋಮೀಟರ್​ಗೆ 1.5 ಕೋಟಿ ಅನುದಾನ ಬೇಕಿದೆ. ಎಲ್ಲೆಲ್ಲಿ ರೈಲ್ವೆ ಬ್ಯಾರಿಕೇಡ್ ಪ್ರಸ್ತಾವನೆ ಬರುತ್ತದೆಯೋ ಆದ್ಯತೆ ಮೇರೆಗೆ ಕ್ರಮ ವಹಿಸಲಾಗುತ್ತದೆ ಎಂದು ಸಚಿವರು ಮಾಹಿತಿ ನೀಡಿದರು.

ಮೂರು ವರ್ಷದ ಅವಧಿಗೆ ಕಳೆ ನಿವಾರಣೆಗೆ ಬನ್ನೇರುಘಟ್ಟದಲ್ಲಿ 781 ಕೋಟಿ ಅನುದಾನ, ನಾಗರಹೊಳೆಯಲ್ಲಿ 200, ಬಂಡೀಪುರದಲ್ಲಿ 150ಕ್ಕೂ ಹೆಚ್ಚಿನ ಕೋಟಿ ಅನುದಾನ ಬೇಕಿದೆ. ಈ ಬಗ್ಗೆ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ ಮುಂದುವರೆಯುತ್ತೇವೆ. ಅರಣ್ಯದಲ್ಲಿ ವನ್ಯಜೀವಿಗಳಿಗೆ ನೀರಿನ ಕೊರತೆ ಇಲ್ಲ. ಲಂಟೆನಾ ಅರಣ್ಯಕ್ಕೆ ವೈರಿ ಇದ್ದ ಹಾಗೆ. ದೀರ್ಘಾವಧಿ ಯೋಜನೆ ಹಾಕಿಕೊಂಡು ಹಂತ ಹಂತವಾಗಿ ಲಂಟಾನ ಶಾಶ್ವತವಾಗಿ ಬೆಳೆಯದಂತೆ ನೋಡಿಕೊಳ್ಳುವ ಯೋಜನೆಯನ್ನು ಅನುಷ್ಠಾನಕ್ಕೆ ತರಲಾಗುತ್ತದೆ ಎಂದು ಭರವಸೆ ನೀಡಿದರು.

ನಿರಾಶ್ರಿತ ಮಾನಸಿಕ ಅಸ್ವಸ್ಥರ ಚಿಕಿತ್ಸೆಗೆ ಕ್ರಮ: ಸ್ವಯಂ ಸೇವಾ ಸಂಸ್ಥೆಗಳು ಮತ್ತು ಪೊಲೀಸ್ ಇಲಾಖೆಯ ಸಹಕಾರ ಪಡೆದುಕೊಂಡು ನಿರಾಶ್ರಿತ ಮಾನಸಿಕ ಅಸ್ವಸ್ಥರಿಗೆ ಸೂಕ್ತ ಚಿಕಿತ್ಸೆ ಕೊಡಿಸುವ ಹಾಗು ನಿರಾಶ್ರಿತರ ಕೇಂದ್ರಗಳಲ್ಲಿ ಅವರಿಗೆ ವಸತಿ ವ್ಯವಸ್ಥೆ ಕಲ್ಪಿಸುವ ವ್ಯವಸ್ಥೆಯನ್ನು ಆರೋಗ್ಯ ಇಲಾಖೆ ಮಾಡಲಿದೆ. ಈ ಸಂಬಂಧ ನ್ಯಾ. ಕುಮಾರ್ ನೇತೃತ್ವದ ಸಮಿತಿ ನೀಡಿರುವ ವರದಿಯನ್ನು ಅನುಷ್ಠಾನಕ್ಕೆ ತರಲಾಗುತ್ತದೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದರು.

ವಿಧಾನ ಪರಿಷತ್ ಪ್ರಶ್ನೋತ್ತರ ಕಲಾಪದಲ್ಲಿ ಕಾಂಗ್ರೆಸ್ ಸದಸ್ಯ ಅಬ್ದಲ್ ಜಬ್ಬಾರ್ ಪ್ರಶ್ನೆಗೆ ಉತ್ತರಿಸಿದ ಅವರು, ನಿರಾಶ್ರಿತ ಮಾನಸಿಕ ಅಸ್ವಸ್ಥರ ಬಗ್ಗೆ ಗಮನ ಹರಿಸಿ ಚಿಕಿತ್ಸೆ ಕೊಡಿಸುವ ವ್ಯವಸ್ಥೆಯಾಗಬೇಕು ಎನ್ನುವ ಪ್ರಸ್ತಾಪ ಸದಸ್ಯರು ಮಾಡಿದ್ದಾರೆ. ಈ ವಿಚಾರದಲ್ಲಿ ಮಾರ್ಗಸೂಚಿ ರಚಿಸಲು ನ್ಯಾ.ಕುಮಾರ್ ನೇತೃತ್ವದಲ್ಲಿ ಸಮಿತಿ ರಚಿಸಿದ್ದು, ಅವರು ಕೆಲ ಮಾರ್ಗದರ್ಶನ ನೀಡಿದ್ದಾರೆ. ಅದರಂತೆ ಪ್ರತಿ ಜಿಲ್ಲಾಸ್ಪತ್ರೆಯಲ್ಲಿ 5 ಹಾಸಿಗೆ ಅಂತವರಿಗೆ ಮೀಸಲಿಡಲು ಸಲಹೆ ನೀಡಿದ್ದಾರೆ. ಅದರಂತೆ ಕ್ರಮ ವಹಿಸಲಾಗುತ್ತದೆ. ಬಸ್ ನಿಲ್ದಾಣ, ರೈಲ್ವೆ ನಿಲ್ದಾಣ ಇತ್ಯಾದಿಗಳಲ್ಲಿ ಇಂತಹ ಮಾನಸಿಕ ಅಸ್ವಸ್ಥರು ಇರುತ್ತಾರೆ. ಎನ್.ಜಿ.ಒಗಳ ಸಹಕಾರ, ಪೊಲೀಸರ ಸಹಕಾರ ಪಡೆದು ಕ್ರಮ ವಹಿಸಲಾಗುತ್ತದೆ. ನ್ಯಾ. ಕುಮಾರ್ ಸಮಿತಿ ಶಿಫಾರಸ್ಸು ಅನುಷ್ಠಾನಕ್ಕೆ ತರಲಾಗುತ್ತದೆ. ಪೊಲೀಸ್ ತರಬೇತಿ ವೇಳೆಯಲ್ಲಿಯೇ ಈ ಬಗ್ಗೆ ತರಬೇತಿ ನೀಡಲು ಸೂಚಿಸಲಾಗುತ್ತದೆ. ನಿರಾಶ್ರಿತರಾದವರನ್ನು ನಿರಾಶ್ರಿತ ಕೇಂದ್ರಕ್ಕೆ ಸೇರಿಸುವ, ಚಿಕಿತ್ಸೆಗೆ ದಾಖಲಿಸುವ ಕೆಲಸ ಮಾಡುವ ತರಬೇತಿ ನೀಡಲಾಗುತ್ತದೆ ಎಂದರು.

ಕೋಲಾರದಲ್ಲಿ ಮೆಡಿಕಲ್ ಕಾಲೇಜು ಪ್ರಸ್ತಾಪ ಇಲ್ಲ: ಕೋಲಾರದಲ್ಲಿ ಮೆಡಿಕಲ್ ಕಾಲೇಜು ತೆರೆಯುವ ಪ್ರಸ್ತಾಪ ಸರ್ಕಾರದ ಮುಂದಿಲ್ಲ. ಮುಂದೆ ಸರ್ಕಾರ ಹಣಕಾಸಿನ ಲಭ್ಯತೆ ಆಧರಿಸಿ ವಿಚಾರ ಮಾಡಲಾಗುತ್ತದೆ ಎಂದು ವೈದ್ಯಕೀಯ ಶಿಕ್ಷಣ ಸಚಿವರ ಪರವಾಗಿ ಸಭಾ ನಾಯಕ ಬೋಸರಾಜು ಭರವಸೆ ನೀಡಿದರು.

ವಿಧಾನ ಪರಿಷತ್ ಪ್ರಶ್ನೋತ್ತರ ಕಲಾಪದಲ್ಲಿ ಸದಸ್ಯ ಎಂ.ಎಸ್ ಅನಿಲ್ ಕುಮಾರ್ ಕೋಲಾರದಲ್ಲಿ ಸರ್ಕಾರಿ ವೈದ್ಯಕೀಯ ಕಾಲೇಜು ಮಂಜೂರು ಮಾಡಿಲ್ಲ. ಕೋಲಾರಕ್ಕೆ ಸರ್ಕಾರಿ ಮೆಡಿಕಲ್ ಕಾಲೇಜು ನೀಡಬೇಕು. ಈ ಹಿಂದೆ ಇದೇ ಅಧಿವೇಶನದಲ್ಲಿ ಪ್ರಶ್ನೆ ಮಾಡಿದಾಗ ಪ್ರಸ್ತಾಪ ಇದೆ ಎಂದು ಉತ್ತರ ಕೊಟ್ಟಿದ್ರು. ರಾಮನಗರ, ಚಿಕ್ಕಬಳ್ಳಾಪುರ ಜಿಲ್ಲೆಗೆ ಮೆಡಿಕಲ್ ಕಾಲೇಜು ಕೊಟ್ಟಿದ್ದೀರಿ. ನಮ್ಮ ಕೋಲಾರಕ್ಕೆ ಯಾಕಿಲ್ಲ? ಎಂದು ಪ್ರಶ್ನಿಸಿದರು. ಇದಕ್ಕೆ ಉತ್ತರಿಸಿದ ಸಭಾನಾಯಕ ಬೋಸರಾಜು, ಕೋಲಾರ ಜಿಲ್ಲೆಯಲ್ಲಿ ವೈದ್ಯಕೀಯ ಕಾಲೇಜು ಸ್ಥಾಪನೆ ಕುರಿತ ಪ್ರಸ್ತಾಪ ಸರ್ಕಾರದ ಮುಂದಿಲ್ಲ, ಅನುದಾನ ಲಭ್ಯತೆ ಆಧಾರದಲ್ಲಿ ಮುಂದೆ ಪರಿಗಣಿಸಲಾಗುತ್ತದೆ ಎಂದು ಸ್ಪಷ್ಟಪಡಿಸಿದರು.

ಇದನ್ನೂ ಓದಿ :ಗ್ಯಾರೆಂಟಿ ವರ್ಕೌಟ್ ಆಗದೇ ತೆಲಂಗಾಣದಲ್ಲಿ ಗೆದ್ದೆವಾ?: ಸಿಎಂ ಸಿದ್ದರಾಮಯ್ಯ

Last Updated : Dec 5, 2023, 6:33 AM IST

ABOUT THE AUTHOR

...view details