ಕರ್ನಾಟಕ

karnataka

ETV Bharat / state

12ನೇ ಶತಮಾನದ ಬಸವಾದಿ ಶರಣರ ವಚನಗಳಿಗೆ ಪುನರ್ಜನ್ಮ ಕೊಟ್ಟಿದ್ದು ವಚನ ಗುಮ್ಮಟ ಹಳಕಟ್ಟಿಯವರು: ಡಾ ಸಿ ಕೆ ನಾವಲಗಿ - ಖ್ಯಾತ ಸಾಹಿತಿ ಡಾ ಸಿ ಕೆ ನಾವಲಗಿ

ವಚನ ಪಿತಾಮಹ ಡಾ ಫ ಗು ಹಳಕಟ್ಟಿ ಅವರು ಬರುವವರೆಗೂ ನಮಗೆ ವಚನಗಳ ಬಗ್ಗೆ ತಿಳಿದೇ ಇರಲಿಲ್ಲ ಎಂದು ಖ್ಯಾತ ಸಾಹಿತಿ ಡಾ ಸಿ ಕೆ ನಾವಲಗಿ ಅವರು ತಿಳಿಸಿದ್ದಾರೆ.

ಖ್ಯಾತ ಸಾಹಿತಿ ಡಾ ಸಿ ಕೆ ನಾವಲಗಿ
ಖ್ಯಾತ ಸಾಹಿತಿ ಡಾ ಸಿ ಕೆ ನಾವಲಗಿ

By

Published : Jul 2, 2023, 7:58 PM IST

ವಚನ ಪಿತಾಮಹ ಡಾ ಫ ಗು ಹಳಕಟ್ಟಿ ಅವರ ಕುರಿತು ಖ್ಯಾತ ಸಾಹಿತಿ ಡಾ ಸಿ ಕೆ ನಾವಲಗಿ ಅವರು ಮಾತನಾಡಿದ್ದಾರೆ

ಬೆಳಗಾವಿ : 12ನೇ ಶತಮಾನದ ಕಲ್ಯಾಣ ಕ್ರಾಂತಿಯ ನಂತರ ಚದುರಿ ಹೋಗಿದ್ದ ವಚನಗಳನ್ನು ಸಂಗ್ರಹಿಸಿ, ವಚನಗಳಿಗೆ ಪುನರ್ಜನ್ಮ ಕೊಟ್ಟಿದ್ದು ವಚನ ಪಿತಾಮಹ ಡಾ ಫ ಗು ಹಳಕಟ್ಟಿಯವರು. ಇವರು 20ನೇ ಶತಮಾನದ ವಚನ ಸಾಹಿತ್ಯದ ಶಿಖರ ಸೂರ್ಯ ಎಂದು ಖ್ಯಾತ ಸಾಹಿತಿ ಡಾ ಸಿ ಕೆ ನಾವಲಗಿ ಅವರು ಅಭಿಪ್ರಾಯಪಟ್ಟರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್​, ಕನ್ನಡ ಮತ್ತು ಸಂಸ್ಕೃತಿ‌ ಇಲಾಖೆ ಹಾಗೂ ಮಹಾನಗರ ಪಾಲಿಕೆಯ ಸಂಯುಕ್ತ ಆಶ್ರಯದಲ್ಲಿ ನಗರದ ಕುಮಾರ ಗಂಧರ್ವ ರಂಗ ಮಂದಿರದಲ್ಲಿ ಇಂದು ವಚನ ಪಿತಾಮಹ ಡಾ ಫ ಗು ಹಳಕಟ್ಟಿಯವರ ಜನ್ಮದಿನ ಹಾಗೂ ವಚನ ಸಾಹಿತ್ಯ ಸಂರಕ್ಷಣಾ ದಿನಾಚರಣೆ ಕಾರ್ಯಕ್ರಮದಲ್ಲಿ ಉಪನ್ಯಾಸಕರಾಗಿ ಆಗಮಿಸಿ ಮಾತನಾಡಿದ ಅವರು, ನೂರಾರು ಶಾಸನಗಳನ್ನು ಹಳಕಟ್ಟಿಯವರು ಓದುತ್ತಾರೆ. 165 ಪುಸ್ತಕಗಳನ್ನು ಹೊರತರುತ್ತಾರೆ. ಸ್ವಂತ ಮನೆಯನ್ನು ಮಾರಿ ವಚನಗಳನ್ನು ಉಳಿಸುವ‌ ಕೆಲಸ ಮಾಡುತ್ತಾರೆ ಎಂದರು.

ಹಳಕಟ್ಟಿ ಅವರ ವ್ಯಕ್ತಿತ್ವ ಬಹಳ ದೊಡ್ಡದು:ಒಮ್ಮೆ ನಾಡಿನ ಹಿರಿಯ ಸಾಹಿತಿ ಬಿ ಎಂ ಶ್ರೀಕಂಠಯ್ಯನವರು ವಿಜಯಪುರಕ್ಕೆ ಬಂದಾಗ ಇಲ್ಲಿ ಒಂದೇ ಗುಮ್ಮಟ ಇಲ್ಲ. ಮತ್ತೊಂದು ಗುಮ್ಮಟವಿದೆ. ಅದುವೇ ವಚನ ಗುಮ್ಮಟ ಡಾ. ಫ. ಗು ಹಳಕಟ್ಟಿ ಅವರು. ನಾನು ಮೊದಲು ಆ ಗುಮ್ಮಟ ನೋಡಬೇಕು ಎಂದು ಹೇಳಿದ್ದರಂತೆ ಎಂದು ಸ್ಮರಿಸಿದ ಡಾ. ಸಿ. ಕೆ ನಾವಲಗಿ ಅವರು, ಹಳಕಟ್ಟಿ ಅವರು ಬರೋವರೆಗೂ ವಚನಗಳ ಬಗ್ಗೆ ನಮಗೆ ಗೊತ್ತೆ ಇರಲಿಲ್ಲ. ಏಕಾಂಗಿಯಾಗಿ ವಚನಗಳನ್ನು ಸಂಗ್ರಹಿಸಿ, ವಿಶ್ಲೇಷಿಸಿ ಪ್ರಕಟಿಸಿದ್ದರು. ಈ ಮೂಲಕ ಕನ್ನಡಿಗರ ಕಣ್ಣು ವಚನಗಳತ್ತ ಅರಳುವಂತೆ ಮಾಡಿದ್ದರು. ವಿಶ್ವ ಸಾಹಿತ್ಯಕ್ಕೆ ಕನ್ನಡದ ಕೊಡುಗೆ ಏನು? ಎಂದರೆ ಅದು ವಚನ ಸಾಹಿತ್ಯ. ಕುವೆಂಪು, ಬೇಂದ್ರೆ ಸೇರಿದಂತೆ ಅನೇಕ ಶ್ರೇಷ್ಠ ಸಾಹಿತಿಗಳು ಕೂಡ ವಚನಗಳಿಂದ ಪ್ರೇರಣೆಗೊಂಡಿದ್ದರು. ಅಂತಹ ವಚನಗಳಿಗೆ ಪುನರ್ಜನ್ಮ ಕೊಟ್ಟಿದ್ದ ಹಳಕಟ್ಟಿ ಅವರ ವ್ಯಕ್ತಿತ್ವ ಬಹಳ ದೊಡ್ಡದು ಎಂದು ಬಣ್ಣಿಸಿದರು.

ವಚನ ಸಾಹಿತ್ಯ ಸಂರಕ್ಷಣಾ ದಿನಾಚರಣೆ ಕಾರ್ಯಕ್ರಮ

ವಚನಧರ್ಮಸಾರ ಪ್ರಕಟಣೆ ಮಾಡುತ್ತಾರೆ: ಹರಿದ ಅಂಗಿ, ಒಡೆದ ಚಾಳೀಸು, ಮುರಕಲು ಸೈಕಲ್, ಬಾಡಿಗೆ ಮನೆಯಲ್ಲಿ ಬಡತನದಲ್ಲೇ ಜೀವನ ಸವೆಸಿದ ಹಳಕಟ್ಟಿಯವರು, ಹಳ್ಳಿ ಹಳ್ಳಿಗಳಿಗೆ ತೆರಳಿ ಲಿಂಗಾಯತರ ಮನೆಯ ಜಗಲಿ ಮೇಲಿದ್ದ ತಾಡೋಲೆಗಳನ್ನು ಸಂಗ್ರಹಿಸಿ ವಚನಸಾರ, ವಚನಶಾಸ್ತ್ರ ಸಾರ, ವಚನಧರ್ಮಸಾರ ಪ್ರಕಟಣೆ ಮಾಡುತ್ತಾರೆ. ಆಗ ಎಂ. ಆರ್ ಶ್ರೀನಿವಾಸಮೂರ್ತಿ, ಆರ್. ನರಸಿಂಹಾಚಾರ್ಯ, ಬೆಳಗಲ್ ರಾಮರಾಯರು, ಉತ್ತಂಗಿ ಚನ್ನಪ್ಪ, ಬಿ. ಎಂ ಶ್ರೀಕಂಠಯ್ಯ ಅವರಂತ ದಕ್ಷಿಣ ಕರ್ನಾಟಕದ ಲಿಂಗಾಯತೇತರ ದಿಗ್ಗಜರೇ ಮೊದಲು ಗುರುತಿಸಿದ್ದು ಎಂದು ನೆನಪಿಸಿಕೊಂಡರು.

ಹಳಕಟ್ಟಿಯವರ ಸಾಮಾಜಿಕ, ಧಾರ್ಮಿಕ, ಶೈಕ್ಷಣಿಕ, ಸಹಕಾರಿ ಸೇವೆ ಗುರುತಿಸಿ ರಾವ್​ ಬಹದ್ದೂರ್ ಎಂದು ಬ್ರಿಟಿಷರು ಬಿರುದು‌ ಕೊಟ್ಟಿದ್ದರು. ವಿಜಯಪುರ ಜನ ವಚನ ಗುಮ್ಮಟ ಎಂದು ಕರೆದು, ಹೂವಿನ ಮಳೆಗೈದಿದ್ದರು. ಆದರೆ ಇದೆಲ್ಲಕ್ಕಿಂತ ಹೆಚ್ಚಾಗಿ ತನು, ಮನ, ಧನದಿಂದ ಸಹಾಯ ಮಾಡಬೇಕಿತ್ತು. ಆದರೆ ಅದ್ಯಾವುದನ್ನು ಮಾಡದಿರುವುದು ಅತ್ಯಂತ ವಿಷಾಧನೀಯ ಸಂಗತಿ ಎಂದು ಡಾ. ಸಿ ಕೆ ನಾವಲಗಿ ಹೇಳಿದರು.

ವಚನಶಾಸ್ತ್ರಸಾರ ಪ್ರಕಟವಾಗಿದ್ದು ನಮ್ಮ ಬೆಳಗಾವಿಯಲ್ಲೆ: ಬಳಿಕ ಜಾಗತಿಕ ಲಿಂಗಾಯತ ಮಹಾಸಭಾ ಜಿಲ್ಲಾಧ್ಯಕ್ಷ ಬಸವರಾಜ ರೊಟ್ಟಿ ಮಾತನಾಡಿ, ವಚನಶಾಸ್ತ್ರಸಾರ ಪ್ರಕಟವಾಗಿ ನೂರು ವರ್ಷವಾಗಿದೆ‌. ಅದರಲ್ಲೂ‌ ಈ ವಚನಶಾಸ್ತ್ರಸಾರ ಪ್ರಕಟವಾಗಿದ್ದು ನಮ್ಮ ಬೆಳಗಾವಿಯಲ್ಲೆ ಎನ್ನುವುದು ಅತ್ಯಂತ ಹೆಮ್ಮೆಯ ಸಂಗತಿ. ವರ್ಷವಿಡೀ ಫ. ಗು ಹಳಕಟ್ಟಿಯವರ ವಚನ ಸಾಹಿತ್ಯ ಸಂರಕ್ಷಣಾ ದಿನ ಆಚರಿಸಲು ಜಾಗತಿಕ ಲಿಂಗಾಯತ ಮಹಾಸಭೆ ನಿರ್ಧರಿಸಿದೆ ಎಂದರು.

ಮಹಾನಗರ ಪಾಲಿಕೆ ಆಯುಕ್ತ ಅಶೋಕ ದುಡಗುಂಟಿ‌ ಕಾರ್ಯಕ್ರಮ‌ ಉದ್ಘಾಟಿಸಿದರು. ಉಪವಿಭಾಗಾಧಿಕಾರಿ ಬಲರಾಮ ಚವ್ಹಾಣ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಉಪ ನಿರ್ದೇಶಕಿ ವಿದ್ಯಾವತಿ ಭಜಂತ್ರಿ, ಪ್ರಧಾನ ಕಾರ್ಯದರ್ಶಿ ಅಶೋಕ ಮಳಗಲಿ, ಮೋಹನ ಗುಂಡ್ಲೂರ ಸೇರಿ ಮತ್ತಿತರರು ಉಪಸ್ಥಿತರಿದ್ದರು. ಸುನಿತಾ ದೇಸಾಯಿ ನಿರೂಪಿಸಿದರು.

ಇದನ್ನೂ ಓದಿ:ಪ್ರತಿ ಕಂಬದಲ್ಲೂ ಕವಿ, ಸಾಹಿತಿಗಳ ಚಿತ್ರಣ.. 86ನೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಮುನ್ನುಡಿ ಬರೆದ ಹುಕ್ಕೇರಿಮಠ

ABOUT THE AUTHOR

...view details