ಚಿಕ್ಕೋಡಿ : ಕೃಷಿ ಪತ್ತಿನ ದಶಮಾನೋತ್ಸವ ಕಾರ್ಯಕ್ರಮದಲ್ಲಿ ಬಹಿರಂಗವಾಗಿ ಡಿಸಿಎಂ ಲಕ್ಷ್ಮಣ ಸವದಿ ತಮ್ಮ ಪಕ್ಷ ತೊರೆದಿರುವ ರಾಜು ಕಾಗೆಗೆ ಟಾಂಗ್ ಕೊಟ್ಟಿದ್ದಾರೆ.
ಕಾರ್ಯಕ್ರಮದಲ್ಲಿ ಮಾತನಾಡಿದ ಡಿಸಿಎಂ ಲಕ್ಷ್ಮಣ ಸವದಿ ಕಾಗವಾಡ ಮತಕ್ಷೇತ್ರದಲ್ಲಿಕಾಂಗ್ರೆಸ್ ಪಕ್ಷದಿಂದ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವ ರಾಜು ಕಾಗೆಗೆ ಬಿಜೆಪಿಗೆ ಬರುವಂತೆ ಆಹ್ವಾನ ನೀಡಿದ ಡಿಸಿಎಂ ಲಕ್ಷ್ಮಣ ಸವದಿ ಮಾತು ಸದ್ಯ ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ.
ಬೆಳಗಾವಿ ಜಿಲ್ಲೆಯ ಕಾಗವಾಡ ಪಟ್ಟಣದಲ್ಲಿ ನಡೆದ ಘಟನೆ ಇದಾಗಿದ್ದು ಪ್ರಾಥಮಿಕ ಕೃಷಿ ಸಹಕಾರಿ ಸಂಘದ ದಶಮಾನೋತ್ಸವ ಕಾರ್ಯಕ್ರಮದಲ್ಲಿ ಮಾತನಾಡುವ ವೇಳೆ ರಾಜು ಕಾಗೆಗೆ ನೀನು ಸಹಕಾರಿ ರಂಗಕ್ಕೆ ಬರಬೇಕಿದ್ದರೆ ಮೂರು ವರ್ಷದ ಬಳಿಕ ಬಾ, ಇತ್ತ ಮಹೇಶ ಕುಮಟಳ್ಳಿ ಅತ್ತ ಶ್ರೀಮಂತ ಪಾಟೀಲ ಇಬ್ಬರೂ ಇರ್ತಾರೆ ಅವರ ಜೊತೆ ನಿನಗೂ ಒಂದು ಹುದ್ದೆ ತೆಗೆದಿರಿಸುತ್ತೇನೆ ಬಂದು ಬಿಡು ಎಂದು ಡಿಸಿಎಂ ಲಕ್ಷ್ಮಣ ಸವದಿ ಹೇಳುತ್ತಿದ್ದಂತೆಯೇ ಸಭೆಯಲ್ಲಿ ನಗೆಯ ಅಲೆ ಎದ್ದಿದೆ.
ಇದೇ ವೇಳೆ ರಾಜು ಕಾಗೆ ಆರಿಸಿ ಬರುವುದಿಲ್ಲ ಎಂದು ಮಾರ್ಮಿಕವಾಗಿ ಮಾತನಾಡಿದ ಲಕ್ಷ್ಮಣ ಸವದಿ ರಾಜಕಾರಣದಲ್ಲಿ ಯಾವುದು ಶಾಶ್ವತವಲ್ಲ ನಾವು ಒಂದೇ ಕುಟುಂಬದ ಸದಸ್ಯರಿದ್ದಂತೆ, ಮೂರು ವರ್ಷ ಮನೆಯಲ್ಲಿ ಇರು ನಂತರ ನಿನ್ನನ್ನು ಪಕ್ಷಕ್ಕೆ ಬರಮಾಡಿಕೊಂಡು ಒಂದು ಸ್ಥಾನ ಕೊಡ್ತಿನಿ ಎಂದು ಸಭೆಯಲ್ಲಿ ಹೇಳಿದ್ದಾರೆ.