ಬೆಳಗಾವಿ :ನಗರದ ನಿವೃತ್ತ ಬಿಎಸ್‍ಎನ್‍ಎಲ್ ನೌಕರನ ಅಕೌಂಟ್ನಿಂದ 10 ಲಕ್ಷ ರೂಪಾಯಿಗಳನ್ನು ಎಗರಿಸಿದ್ದ ಸೈಬರ್ ಕ್ರೈಮ್ ಖದೀಮರನ್ನು ಬಂಧಿಸಿದ ಪೊಲೀಸರು ಅವರಿಂದ 12 ಲಕ್ಷ ರೂಪಾಯಿಗೂ ಹೆಚ್ಚು ನಗದನ್ನು ವಶಕ್ಕೆ ಪಡೆದಿದ್ದಾರೆ. ಬಿಎಸ್ಎನ್ಎಲ್ನ ನಿವೃತ್ತ ನೌಕರರಾಗಿ ಸೇವೆ ಸಲ್ಲಿಸಿದ್ದ ನಗರದ ಕಂಗ್ರಾಳಿ ಕೆಹೆಚ್‍ನ ಯಲ್ಲಪ್ಪ ನಾರಾಯಣ ಜಾಧವ್ ಎಂಬುವರು ಸೈಬರ್ ವಂಚಕರಿಗೆ 102 ಬಾರಿ ಓಟಿಪಿ ಕಳುಹಿಸಿ 10 ಲಕ್ಷ ಹಣವನ್ನು ಕಳೆದುಕೊಂಡು ಮೋಸ ಹೋಗಿದ್ದರು. ಈ ಬಗ್ಗೆ ಕಳೆದ ಜೂನ್ 10ರಂದು ಬೆಳಗಾವಿ ಸಿಇಎನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.
ದೂರಿನ ಮೇರೆಗೆ ತನಿಖೆ ಕೈಗೊಂಡ ಪೊಲೀಸರು ಜಾರ್ಖಂಡ್ ರಾಜ್ಯದ ಜಮತಾರಾ ಜಿಲ್ಲೆಯ ಓರ್ವ ವ್ಯಕ್ತಿ, ಓರ್ವ ಮಹಿಳೆ ಹಾಗೂ ಮಹಾರಾಷ್ಟ್ರದ ಓರ್ವ ಆರೋಪಿಯನ್ನು ಬಂಧಿಸಿ ತನಿಖೆ ಮುಂದುವರೆಸಿದ್ದಾರೆ. ಆರೋಪಿಗಳಿಂದ 5 ಮೊಬೈಲ್, 3 ಡೆಬಿಟ್ ಕಾರ್ಡ್ ಹಾಗೂ ಬೇರೆ ಬೇರೆ ಬ್ಯಾಂಕ್ ಖಾತೆಗಳ ಮೂಲಕ ಹಣವನ್ನು ವರ್ಗಾಯಿಸಿಕೊಂಡಿರುವ 50 ಬ್ಯಾಂಕ್ ಖಾತೆಗಳನ್ನು ಸ್ಥಗಿತಗೊಳಿಸಿ, ಒಟ್ಟು 12 ಲಕ್ಷ 56 ಸಾವಿರ ರೂ.ಗಳನ್ನು ವಶಕ್ಕೆ ಪಡೆದಿದ್ದಾರೆ.
ಪ್ರಕರಣದಲ್ಲಿ ಸೈಬರ್ ವಂಚಕರು 48 ಮೊಬೈಲ್ ಫೋನ್‌ಗಳನ್ನು, 304 ಸಿಮ್ ಕಾರ್ಡ್ಗಳನ್ನು ಬಳಸಿಕೊಂಡಿದ್ದಲ್ಲದೇ 50 ಬೇರೆ ಬೇರೆ ಖಾತೆಗಳ ಮೂಲಕ ವಂಚನೆ ಹಣವನ್ನು ವರ್ಗಾವಣೆ ಮಾಡಿಕೊಂಡಿರುವುದಾಗಿ ತಪ್ಪೊಪ್ಪಿಕೊಂಡಿದ್ದಾರೆ. ಇದಲ್ಲದೇ ಹೈದರಾಬಾದ್ ಸೇರಿ ಇತರ ರಾಜ್ಯಗಳಲ್ಲಿ ತಮ್ಮ ಕೈಚಳಕ ತೋರಿಸಿರುವ ಆರೋಪಿಗಳು ಕರ್ನಾಟಕದ ಕಲಬುರಗಿ, ಬೆಳಗಾವಿ ಹಾಗೂ ಬೆಂಗಳೂರು ಸೇರಿ ಇನ್ನೂ ಹಲವಾರು ಪ್ರಕರಣದಲ್ಲಿ ಭಾಗಿಯಾಗಿರುವುದು ಪ್ರಾಥಮಿಕ ತನಿಖೆಯಲ್ಲಿ ಗೊತ್ತಾಗಿದೆ.
ಬಂಧಿತರೆಲ್ಲರೂ ಎಸ್ಎಸ್ಎಲ್ಸಿ ಫೇಲ್!
ನಗರದಲ್ಲಿ 102 ಬಾರಿ ಓಟಿಪಿ ಪಡೆದು 10 ಲಕ್ಷ ಎಗರಿಸಿರುವ ಮೂವರು ಆರೋಪಿಗಳು ಯಾವುದೇ ರೀತಿಯ ಉನ್ನತ ಶಿಕ್ಷಣ ಪಡೆದುಕೊಂಡಿಲ್ಲ. ಕೇವಲ ಹತ್ತನೆ ತರಗತಿಯವರೆಗೆ ಶಿಕ್ಷಣ ಪಡೆದಿರುವ ಆರೋಪಿಗಳು ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಫೇಲ್ ಆಗಿದ್ದಾರೆ.