ಬೆಂಗಳೂರು: ಕಬ್ಬನ್ ಪಾರ್ಕ್ ನಿರ್ಮಾಣವಾದ ದಿನದಿಂದಲೂ ಉದ್ಯಾನದ ಪ್ರವೇಶದ್ವಾರ ಮತ್ತು ನಾಮಫಲಕ ಇರಲಿಲ್ಲ. ಹೀಗಾಗಿ ತೋಟಗಾರಿಕೆ ಇಲಾಖೆ ಮತ್ತು ಲೋಕೋಪಯೋಗಿ ಇಲಾಖೆಯ ಸಹಯೋಗದೊಂದಿಗೆ ಹೊಸದಾಗಿ ನಿರ್ಮಿಸಲಾಗಿರುವ ಪ್ರವೇಶ ದ್ವಾರವನ್ನು ತೋಟಗಾರಿಕೆ ಇಲಾಖೆ ಸಚಿವ ಎಂ ಸಿ ಮನಗೂಳಿ ಉದ್ಘಾಟಿಸಿದರು.
ಕಬ್ಬನ್ ಪಾರ್ಕಿನ ದ್ವಾರಗಳಿಗೆ ನಾಮಕರಣ ಕಬ್ಬನ್‌ಪಾರ್ಕ್ ನಲ್ಲಿ ಒಟ್ಟು 7 ಪ್ರವೇಶ ದ್ವಾರಗಳಿದ್ದು, ಯಾವುದಕ್ಕೂ ಇದುವರೆಗೂ ಹೆಸರು ಇರಲಿಲ್ಲ. ಮೊದಲು ಮಿಡ್ಸ್ ಪಾರ್ಕ್ ಎಂದು ಕಡೆಯುತ್ತಿದ್ದು, ನಂತರ ಕಬ್ಬನ್ ಪಾರ್ಕ್ ಅಂತ ಕರೆಯಲಾಗುತ್ತಿತ್ತು. ಇದಾದ ಮೇಲೆ 1948 ರಲ್ಲಿ ರಾಜ್ಯ ಸರ್ಕಾರ ಚಾಮರಾಜೇಂದ್ರ ಉದ್ಯಾನವನವೆಂದು ಆದೇಶ ಹೊರಡಿಸಿತ್ತು. ಆದೇಶದ ನಂತರವೂ ಎಲ್ಲೂ ಹೆಸರಿಲ್ಲದ ಕಾರಣ ಕಳೆದೆರಡು ವರ್ಷಗಳ ಹಿಂದೆ ಪ್ರವೇಶ ದ್ವಾರ ನಿರ್ಮಾಣ ಕಾರ್ಯ ನಡೆಯಿತು. ಇನ್ನು ಹೈಕೋರ್ಟ್ ಬಳಿ ಇರುವ ಹಡ್ಸನ್ ಸರ್ಕಲ್ನ ಪ್ರವೇಶದ್ವಾರವನ್ನ ಸುಮಾರು 40 ಲಕ್ಷ ವೆಚ್ಚದಲ್ಲಿ ನಿರ್ಮಿಸಿ ಉದ್ಘಾಟಿಸಲಾಗಿದೆ.
ಉದ್ಯಾನದಲ್ಲಿ ಸೈಕಲ್ ಟೂರಿಸಂ
ಇನ್ನು ಉದ್ಯಾನದಲ್ಲಿ ಪರಿಸರ ಮಾಲಿನ್ಯವನ್ನು ತಡೆಯುವ ನಿಟ್ಟಿನಲ್ಲಿ ಪ್ರವಾಸೋದ್ಯಮ ಇಲಾಖೆಯು ಸೈಕಲ್ ಟೂರಿಸಂ ಆರಂಭಿಸಿದೆ. ಡಿಸ್ಕವರಿ ವಿಲೇಜ್ ಸಹಯೋಗದೊಂದಿಗೆ ಉದ್ಯಾನವನಕ್ಕೆ ಭೇಟಿ ನೀಡುವ ಪ್ರವಾಸಿಗರ ಅನುಕೂಲಕ್ಕಾಗಿ ನಿಗಧಿತ ದರದೊಂದಿಗೆ ಆ್ಯಪ್ ಮೂಲಕ ಸೈಕಲ್ ಸೇವೆಯನ್ನು ಒದಗಿಸುತ್ತಿದೆ. 500 ರೂಪಾಯಿ ಸೆಕ್ಯೂರಿಟಿ ಡೆಪಾಸಿಟ್ ಇಟ್ಟು, 3 ಗಂಟೆಗೆಯವೆಗೆ 50 ರೂಪಾಯಿ, 3-6 ಗಂಟೆಗೆ 100 ರೂಪಾಯಿ ದರ ನಿಗದಿ ಮಾಡಲಾಗಿದೆ. ಇನ್ನು ನೋಂದಾಯಿತ ಸೈಕಲ್ ಸವಾರರಿಗೆ 2 ಗಂಟೆವರೆಗೆ 25 ರೂ, 2-4 ಗಂಟೆಗೆ 50 ರೂ.ಗಳು, 4-6 ಗಂಟೆಗೆ 75 ರೂ.ಗಳು, 6 ಗಂಟೆಗಳಿಗೆ 100 ರೂಪಾಯಿ ನಿಗದಿ ಮಾಡಲಾಗಿದೆ. ಇದರಿಂದ ಪ್ರಾಸೋದ್ಯಮ ಇಲಾಖೆಗೆ ಶೇ. 20 ರಷ್ಟು ಆದಾಯ ಬರಲಿದೆಯಂತೆ.
ಪ್ರವೇಶದ್ವಾರ ಮತ್ತು ಸೈಕಲ್ ಸೇವೆ ಪರಿಚಯಿಸುವ ಜೊತೆಗೆ ಉದ್ಯಾನದಲ್ಲಿ ಸುಮಾರು 600 ಸಸಿ ನೆಡುವ ಕಾರ್ಯಕ್ರಮವನ್ನೂ ಉದ್ಘಾಟಿಸಲಾಯಿತು. ಈ ಕಾರ್ಯಕ್ರಮದಲ್ಲಿ ಸಚಿವ ಮನಗೂಳಿ, ಮೇಯರ್ ಗಂಗಾಂಬಿಕೆ, ತೋಟಗಾರಿಕೆ ಇಲಾಖೆ ಆಯುಕ್ತ ವೆಂಕಟೇಶ್ ಸೇರಿದಂತೆ ಇತರೆ ಅಧಿಕಾರಿಗಳು ಭಾಗಿಯಾಗಿದ್ದರು.