ಬೆಳಗಾವಿ : ಕಾಂಗ್ರೆಸ್ ಅಂದ್ರೆ ಭ್ರಷ್ಟಾಚಾರ, ಭ್ರಷ್ಟಾಚಾರ ಅಂದ್ರೆ ಕಾಂಗ್ರೆಸ್. ಭ್ರಷ್ಟಾಚಾರ ಕಾಂಗ್ರೆಸ್ ಪಕ್ಷದ ಅವಿಭಾಜ್ಯ ಅಂಗ. ಹೀಗಿರುವಾಗ ಅವರು ಭ್ರಷ್ಟಾಚಾರದ ಬಗ್ಗೆ ಮಾತನಾಡುವ ಅವಶ್ಯಕತೆ ಇಲ್ಲ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕೈ ನಾಯಕರಿಗೆ ತಿರುಗೇಟು ಕೊಟ್ಟರು. ಬೆಳಗಾವಿಯ ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಕಾಂಗ್ರೆಸ್ನವರು ಸಿಎಂ ಟಾರ್ಗೆಟ್ ಮಾಡಿ ಬಿಜೆಪಿ ಇಮೇಜ್ ಕೆಡಿಸಬೇಕು ಅಂತಿದ್ದಾರೆ. ಆದರೆ ಸಾಧ್ಯವಾಗುತ್ತಿಲ್ಲ. ಇವತ್ತಿಂದ ಅಲ್ಲ ಒಂದೂವರೆ ವರ್ಷದಿಂದ ಸಿದ್ದರಾಮಯ್ಯ ಪ್ರಯತ್ನ ಮಾಡುತ್ತಿದ್ದಾರೆ. ಆದರೆ ಜನ ನಂಬುತ್ತಿಲ್ಲ, ಏಕೆಂದರೆ ಅವರೇ ದೊಡ್ಡ ಭ್ರಷ್ಟಾಚಾರಿಗಳು ಎಂದು ಆರೋಪಿಸಿದರು.
ನಿಮ್ಮ ಹಾಗೂ ಸಿದ್ದರಾಮಯ್ಯ ಮಧ್ಯೆ ಲಿಂಗಾಯತ ಲಡಾಯಿ ಜೋರಾಗಿದೆ ಎಂಬ ಮಾಧ್ಯಮಗಳ ಪ್ರಶ್ನೆಗೆ ಪ್ರತಿಕ್ರಿಯಿಸಿದ ಬೊಮ್ಮಾಯಿ, ಆ ಲಡಾಯಿ ಏನಿಲ್ಲ, ಅವರೇ ಮಾಡಿಕೊಂಡು ಬೇರೆ ಬೇರೆ ಸ್ಪಷ್ಟೀಕರಣ ಕೊಡುತ್ತ ತಿರುಗುತ್ತಿದ್ದಾರೆ. ಗ್ರೌಂಡ್‌ನಲ್ಲಿ ಲಿಂಗಾಯತರು ಇದ್ಯಾವುದನ್ನು ತಲೆಕೆಡಿಸಿಕೊಳ್ಳಲ್ಲ. ಬಹಳ ಪ್ರಬುದ್ಧವಾಗಿದ್ದಾರೆ, ಯಾರಿಗೆ ಯಾವಾಗ ಹೇಗೆ ಸಪೋರ್ಟ್ ಮಾಡಬೇಕೆಂದು ಲಿಂಗಾಯತರಿಗೆ ಗೊತ್ತು ಎಂದು ಸಿಎಂ ಬೊಮ್ಮಾಯಿ ತಿರುಗೇಟು ಕೊಟ್ಟರು.
ಇಂದು ಚಿಕ್ಕೋಡಿ ಲೋಕಸಭಾ ವ್ಯಾಪ್ತಿಯಲ್ಲಿ ಪ್ರಚಾರ ಮಾಡುತ್ತಿರುವೆ. ಎಲ್ಲ ಕಡೆ ರೋಡ್ ಶೋ, ಸಭೆಗಳಲ್ಲಿ ಜನರ ಉತ್ಸಾಹ ದೊಡ್ಡ ಪ್ರಮಾಣದಲ್ಲಿದೆ. ಬೆಳಗಾವಿ ಜಿಲ್ಲೆಯಲ್ಲಿ ಕನಿಷ್ಠ 15 ಸ್ಥಾನ ಗೆಲ್ಲುವ ವಿಶ್ವಾಸವಿದೆ. ಕೆಲವು ಬದಲಾವಣೆ ಮಾಡಿದ್ದಕ್ಕೂ ಜನ ಸ್ಪಂದಿಸಿದ್ದಾರೆ. ನಾನು ರಾಜ್ಯದ ಉದ್ದಗಲಕ್ಕೂ ಸುತ್ತುತ್ತಿದ್ದೇನೆ. ನಾಮಪತ್ರ ವಾಪಸ್ ಪ್ರಕ್ರಿಯೆ ಆದಮೇಲೆ ಬಿಜೆಪಿ ಸುನಾಮಿ ಇಡೀ ರಾಜ್ಯದಲ್ಲಿದೆ. ಬಿಜೆಪಿ ಸ್ಪಷ್ಟ ಬಹುಮತದಿಂದ ಬರಲಿದೆ ಎಂದು ಸಿಎಂ ಬೊಮ್ಮಾಯಿ ವಿಶ್ವಾಸ ವ್ಯಕ್ತಪಡಿಸಿದರು.