ಬೆಳಗಾವಿ:ಪ್ರವಾಹದಿಂದ ಮನೆಗಳನ್ನು ಕಳೆದುಕೊಂಡಿರುವ ಸಂತ್ರಸ್ತರಿಗೆ ತಕ್ಷಣ ತಾತ್ಕಾಲಿಕ ಶೆಡ್ ನಿರ್ಮಾಣ ಮಾಡುವಂತೆ ಅಧಿಕಾರಿಗಳಿಗೆ ಸಚಿವ ಲಕ್ಷ್ಮಣ ಸವದಿ ಸೂಚಿಸಿದರು.
ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ಬುಧವಾರ ನಡೆದ ಅಧಿಕಾರಿಗಳ ಸಭೆ.. ಪ್ರವಾಹ ನಿರ್ವಹಣೆ ಮತ್ತು ಸಂತ್ರಸ್ತರಿಗೆ ಪುನರ್ವಸತಿ ಕಲ್ಲಿಸುವ ಕುರಿತಂತೆ ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ನಡೆದ ಅಧಿಕಾರಿಗಳ ಸಭೆಯ ಅಧ್ಯಕ್ಷತೆವಹಿಸಿ ಅವರು ಮಾತನಾಡಿದರು.ಪ್ರವಾಹ ಬಾಧಿತ ಗ್ರಾಮದಲ್ಲಿ ಸರ್ಕಾರಿ ಜಮೀನು ಲಭ್ಯವಿರುವ ಕಡೆ ಅಥವಾ ಜಮೀನು ಇಲ್ಲದಿದ್ದರೆ ಬಾಡಿಗೆ ಜಮೀನು ಪಡೆದುಕೊಂಡು ಸಂತ್ರಸ್ತರಿಗೆ ತಾತ್ಕಾಲಿಕ ವಸತಿ ಸೌಲಭ್ಯ ಒದಗಿಸಬೇಕು. ಸ್ವಂತ ಶೆಡ್ ನಿರ್ಮಾಣಕ್ಕೆ ಮುಂದಾದರೆ ಸರ್ಕಾರದಿಂದ ತಕ್ಷಣ ₹ 50 ಸಾವಿರ ನೀಡಬಹುದು ಎಂದರು.
ತಕ್ಷಣ ಪರಿಹಾರ ನೀಡಲು ಸೂಚನೆ: ಸರ್ಕಾರ ಈಗಾಗಲೇ ಬಿಡುಗಡೆ ಮಾಡಿರುವ ಪರಿಹಾರದ ಹಣವನ್ನು ತಕ್ಷಣವೇ ಸಂತ್ರಸ್ತರಿಗೆ ತಲುಪಿಸಬೇಕು. ಜಿಲ್ಲೆಯಲ್ಲಿ ಪ್ರವಾಹದಿಂದ ಅಪಾರ ಪ್ರಮಾಣದ ಬೆಳೆಹಾನಿ ಆಗಿರುವುದರಿಂದ ಕೂಡಲೇ ಬೆಳೆ ಹಾನಿ ಬಗ್ಗೆ ಜಂಟಿ ಸಮೀಕ್ಷೆ ಕೈಗೊಳ್ಳಬೇಕು. ಬಿತ್ತನೆ ಮತ್ತು ಬೆಳೆಯ ಬೆಳವಣಿಗೆಯನ್ನು ಗಮನದಲ್ಲಿಟ್ಟುಕೊಂಡು ಸಮೀಕ್ಷೆ ನಡೆಸಿ. ಇಲ್ಲಿಯೂ ಕೂಡ ಯಾವುದೇ ರೀತಿಯ ತಾರತಮ್ಯಗಳಾಗದಂತೆ ಅಧಿಕಾರಿಗಳು ಕಾರ್ಯನಿರ್ವಹಿಸಿ ಎಂದರು.
ಸಂತ್ರಸ್ತರ ಪುನರ್ವಸತಿ ಈಗ ನಮ್ಮ ಆದ್ಯತೆ. ಮುಳುಗಡೆಯಾಗಿರುವ ಗ್ರಾಮಗಳಲ್ಲಿ ಜನರು ಸಂಪೂರ್ಣ ಸ್ಥಳಾಂತರಗೊಳ್ಳಲು ಸಮಯಬೇಕು. ಪುನರ್ವಸತಿ ಕಲ್ಪಿಸುವುದೇ ಸರ್ಕಾರಕ್ಕೆ ದೊಡ್ಡ ಸವಾಲಿನ ಕೆಲಸ. ಆದ್ದರಿಂದ ಪ್ರಾಮಾಣಿಕತೆ ಹಾಗೂ ನಿಷ್ಠೆಯಿಂದ ಅಧಿಕಾರಿಗಳು ಕೆಲಸ ಮಾಡಬೇಕಿದೆ ಎಂದು ಹೇಳಿದರು.ಸಚಿವೆ ಶಶಿಕಲಾ ಜೊಲ್ಲೆ, ಕಿತ್ತೂರು ಶಾಸಕ ಮಹಾಂತೇಶ ದೊಡ್ಡಗೌಡರ, ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ರಾಕೇಶ್ ಸಿಂಗ್, ಡಿಸಿ ಡಾ. ಎಸ್ ಬಿ ಬೊಮ್ಮನಹಳ್ಳಿ ಇದ್ದರು.