ಸಿಎಂ ಬೊಮ್ಮಾಯಿ ಪ್ರತಿಕ್ರಿಯೆ ಬೆಳಗಾವಿ: ಮಹದಾಯಿ ಯೋಜನೆ ಕುರಿತು ಈಗಾಗಲೇ ಡಿಪಿಆರ್ (ಯೋಜನಾ ಮಾಹಿತಿ ವರದಿ) ಬಂದಿದೆ. ಅರಣ್ಯ ಇಲಾಖೆ ಅನುಮತಿ ಕೊನೆಯ ಹಂತದಲ್ಲಿದ್ದು, ಅರಣ್ಯ ಇಲಾಖೆಯಿಂದ ಕ್ಲಿಯರೆನ್ಸ್ ಸಿಕ್ಕ ತಕ್ಷಣ ಟೆಂಡರ್ ಪ್ರಕ್ರಿಯೆ ಆರಂಭಿಸುತ್ತೇವೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು. ಅವರು ನಗರದ ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿ, ಗೋವಾ ಸರ್ಕಾರ ಡಿಪಿಆರ್ ತಡೆಯುವಂತೆ ನಿರ್ಣಯ ಪಾಸ್ ವಿಚಾರವಾಗಿ ಪ್ರತಿಕ್ರಿಯಿಸಿದರು.
ಗೋವಾ ಸರ್ಕಾರದ ನಿರ್ಧಾರಕ್ಕೆ ಯಾವುದೇ ಕವಡೆ ಕಾಸಿನ ಕಿಮ್ಮತ್ತಿಲ್ಲ. ಟ್ರಿಬುನಲ್ ಆಗಿ, ಹತ್ತು ವರ್ಷ ನಡೆಸಿ ಆದೇಶ ಕೊಟ್ಟಿದೆ. ಟ್ರಿಬುನಲ್ ಆದೇಶ ಅಂದ್ರೆ ಸುಪ್ರೀಂ ಕೋರ್ಟ್ ಜಡ್ಜ್ ಮೆಂಟ್ ಇದ್ದಂಗೆ. ಇದರ ಆಧಾರದ ಮೇಲೆ ನಾವು ಕಾನೂನಿಗೆ ಬದ್ಧವಾಗಿ ಕೆಲಸ ಮಾಡುತ್ತಿದ್ದೇವೆ. ಈ ತರ ನಿರ್ಣಯ ಯಾವುದು ಕೂಡ ಪರಿಣಾಮ ಬೀರುವುದಿಲ್ಲ ಎಂದು ಹೇಳಿದರು.
ಭ್ರಷ್ಟಾಚಾರ ಮತ್ತು ಕಾಂಗ್ರೆಸ್ ಅವಿಭಾಜ್ಯ ಅಂಗ : ಬಳಿಕ ರಾಜಧಾನಿ ಬೆಂಗಳೂರಿನಲ್ಲಿ ಕಾಂಗ್ರೆಸ್ ಪಕ್ಷದವರು 300 ಕಡೆ ಪ್ರತಿಭಟನೆ ಮಾಡುತ್ತಾರೆ ಎಂಬ ವಿಚಾರಕ್ಕೆ ಪ್ರತಿಕ್ರಿಯಿಸಿ, 10 ರಿಂದ 15 ಜನ ಸೇರಿ ಮಾಡುತ್ತಿದ್ದಾರೆ. ಅಲ್ಲದೇ ಬೆಂಗಳೂರು ನಗರವನ್ನು ಹಾಳು ಮಾಡಿದವರೇ ಅವರು. ನಗರದಲ್ಲಿ ಒತ್ತುವರಿ ಮತ್ತು ರಾಜಕಾಲುವೆ ಮುಚ್ಚಲು, ಹಾಗೂ ರಾಜ ಕಾಲುವೆ ಹೆಸರಲ್ಲಿ ಭ್ರಷ್ಟಾಚಾರ ಸೇರಿದಂತೆ ಹಲವಾರು ಹಗರಣಗಳು ಅವರ ಕಾಲದಲ್ಲೇ ಆಗಿವೆ. ಅದನ್ನು ಮುಚ್ಚಿಹಾಕಲು ಈ ತರ ಮಾಡುತ್ತಿದ್ದಾರೆ. ಭ್ರಷ್ಟಾಚಾರ ಮತ್ತು ಕಾಂಗ್ರೆಸ್ ಅವಿಭಾಜ್ಯ ಅಂಗ.
ಅಲ್ಲದೇ ಕಾಂಗ್ರೆಸ್ ನಾಯಕರ ಭ್ರಷ್ಟಾಚಾರದಲ್ಲಿ ಪಿಹೆಚ್ಡಿ ಪಡೆದಿದ್ದಾರೆ. ಸಂವಿಧಾನದ ಪ್ರಕಾರ ರಚನೆಯಾಗಿ ಸ್ವತಂತ್ರ ಅಂಗವಾಗಿದ್ದ ಲೋಕಾಯುಕ್ತವನ್ನು ಮುಚ್ಚಿಹಾಕಿ ಭ್ರಷ್ಟಾಚಾರಕ್ಕೆ ಕುಮ್ಮಕ್ಕು ಕೊಟ್ಟರು. ಭ್ರಷ್ಟಾಚಾರಿಗಳಿಗೆ ರಕ್ಷಣೆಕೊಟ್ಟರು. ಅಲ್ಲದೇ ತಾವೇ ಸ್ವತಃ ಭ್ರಷ್ಟಾಚಾರವೆಸಗಿ ಮುಚ್ಚಿ ಹಾಕಿದರು. ಅವರ ವಿರುದ್ಧ ಇದ್ದಂತಹ ಎಲ್ಲ ಪ್ರಕರಣಗಳನ್ನು ಎಸಿಬಿಗೆ ಹಸ್ತಾಂತರಿಸಿ ಮುಚ್ಚಿಹಾಕಿದ್ದಾರೆ ಎಂದು ಸಿಎಂ ಆರೋಪಿಸಿದರು. ಅಲ್ಲದೇ ಈ ಬಗ್ಗೆ ಲೋಕಾಯುಕ್ತ ಸಂಸ್ಥೆ ಮತ್ತೆ ತನಿಖೆ ಆರಂಭಿಸಿದೆ ಎಂದು ತಿಳಿಸಿದರು.
ಸಿದ್ದರಾಮಯ್ಯಗೆ ಟಾಂಗ್ : ಇನ್ನು ಸಿದ್ದರಾಮಯ್ಯ ಅವರು ಬಿಜೆಪಿಯ ಭ್ರಷ್ಟಾಚಾರದ ಬಗ್ಗೆ ಬಹಿರಂಗವಾಗಿ ಚೆರ್ಚೆ ಮಾಡಲು ಸವಾಲು ಹಾಕಿರುವ ವಿಚಾರಕ್ಕೆ ಪ್ರತಿಕ್ರಿಯಿಸಿ, ಇದೊಂದು ಹಾಸ್ಯಸ್ಪದವಾಗಿದೆ. ಮೊದಲಿಗೆ ವಿಧಾನಸಭೆಯಲ್ಲಿ ಭ್ರಷ್ಟಾಚಾರದ ಬಗ್ಗೆ ಮಾತನಾಡುವುದಾಗಿ ಬೆಂಗಳೂರಿನಲ್ಲಿ ಹೇಳಿದ್ದರು. ಆದರೇ ಅಲ್ಲಿಂದ ಓಡಿಹೋದರು. ಇನ್ನು, ಬೇಳಗಾವಿಯಲ್ಲಿ ನಡೆದ ಅಧಿವೇಶನದಲ್ಲೂ ಈ ಬಗ್ಗೆ ಮಾತನಾಡುವುದಾಗಿ ನೋಟಿಸ್ ನೀಡದರು. ಕೊನೆಯವರೆಗೂ ಈ ವಿಷಯದ ಬಗ್ಗೆ ಪ್ರತಿಕ್ರಿಯೆ ನೀಡಲಿಲ್ಲ. ಇಡೀ ರಾಜ್ಯದ ಜನರೇ ವೀಕ್ಷಿಸುತ್ತಿದ್ದರು. ಅದಕ್ಕಿಂತ ಬಹಿರಂಗ ಸಭೆ ಮತ್ತೊಂದು ಬೇಕಾಗಿತ್ತಾ ಎಂದು ಸಿಎಂ ಪ್ರಶ್ನಿಸಿದರು. ಅಲ್ಲದೇ ಭಾಷಣಕ್ಕಾಗಿ ಈ ರೀತಿ ಮಾತನಾಡುವುದರಿಂದ ಏನು ಪ್ರಯೋಜನವಿಲ್ಲ. ಅವರನ್ನು ಎದುರಿಸುವ ಶಕ್ತಿ ನಮ್ಮ ಬಳಿ ಇದೆ. ಅವರು ಹತಾಶರಾಗಿ ಹೀಗೆ ಮಾತನಾಡುತ್ತಿದ್ದಾರೆ ಎಂದು ಸಿದ್ದರಾಮಯ್ಯ ಹೇಳಿಕೆಗೆ ಸಿಎಂ ಬೊಮ್ಮಾಯಿ ಟಾಂಗ್ ಕೊಟ್ಟರು.
ಜ.28ರಂದು ಬೆಳಗಾವಿಗೆ ಅಮಿತ್ ಶಾ ಭೇಟಿ ವಿಚಾರ: ಹುಬ್ಬಳ್ಳಿ ಮತ್ತು ಬೆಳಗಾವಿಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಬರ್ತಿದ್ದಾರೆ. ಬೆಳಗಾವಿಯಲ್ಲಿ ಒಂದು ಸಾರ್ವಜನಿಕ ಸಭೆ ಆಯೋಜಿಸಲಾಗಿದ್ದು, ಇನ್ನೊಂದು ಪದಾಧಿಕಾರಿಗಳ ಸಭೆ ಕೂಡ ಇದ್ದು ಅದರಲ್ಲಿ ಭಾಗಿಯಾಗಲಿದ್ದಾರೆ ಎಂದು ಹೇಳಿದರು. ಕಾಂಗ್ರೆಸ್ ವಿರುದ್ಧ ಬಿಜೆಪಿಯವರು ಅಗ್ರೆಸಿವ್ ಆಗಿ ಮಾತನಾಡುತ್ತಿಲ್ಲ ಎಂಬ ಸಚಿವ ಮಾಧುಸ್ವಾಮಿ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿ, ಅವರು ವಿಧಾನಸಭೆಯಲ್ಲಿ ಅಗ್ರೆಸ್ಸಿವ್ ಆಗಿ ಮಾತನಾಡಿದ್ದಾರೆ. ಅದೇ ರೀತಿ ಬಹಿರಂಗವಾಗಿ ಸ್ಟಾರ್ಟ್ ಮಾಡಲಿ. ಅಲ್ಲದೇ ಈಗಾಗಲೇ ಬಹಳಷ್ಟು ಜನ ಸಚಿವರು ಸ್ಟಾರ್ಟ್ ಮಾಡಿದ್ದಾರೆ. ಪ್ರಶ್ನೆ ಅದಲ್ಲ, ಸುಳ್ಳನ್ನು ಹೇಳುವ ಕಾಂಗ್ರೆಸ್ ಮತ್ತು ಕೀಳುಮಟ್ಟದ ಮಾತುಗಳನ್ನು ಆಡುವ ಕಾಂಗ್ರೆಸ್, ಆ ಕೀಳುಮಟ್ಟದ ರಾಜಕಾರಣ ನಮ್ಮ ಕರ್ನಾಟಕದ ಸಂಸ್ಕೃತಿ ಅಲ್ಲಾ. ನಮ್ಮ ಕರ್ನಾಟಕ ರಾಜ್ಯದ ಸಂಸ್ಕೃತಿಯ ಚೌಕಟ್ಟಿನಲ್ಲೇ ನಾವು ಇರಬೇಕು ಎಂದು ಹೇಳಿದರು.
ಇದನ್ನೂ ಓದಿ:ಆಪರೇಷನ್ ಕಮಲವೆಂಬ ಕೊಳಕು ರಾಜಕೀಯಕ್ಕೆ 'ಸಿದ್ದಪುರುಷ'ರು ಸಿದ್ದರಾಮಯ್ಯ: ಹೆಚ್‌ಡಿಕೆ