ಬೆಳಗಾವಿ : ಸುವರ್ಣಸೌಧದಲ್ಲಿ ಕ್ಯಾಬಿನೆಟ್ ಸಭೆ ನಡೆಸುವ ಬೇಡಿಕೆಯ ಬಗ್ಗೆ ಪರಿಶೀಲನೆ ನಡೆಸಲಾಗುವುದು ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದರು. ಇಲ್ಲಿ ಕ್ಯಾಬಿನೆಟ್ ಸಭೆಗಳನ್ನು ನಡೆಸಬೇಕು ಎನ್ನುವುದೂ ಸೇರಿ ಬಿ.ಎಲ್.ಶಂಕರ್ ಅವರು ನೀಡಿದ ಸಲಹೆಗಳನ್ನು ಗಂಭೀರವಾಗಿ ಪರಿಗಣಿಸಿದ್ದು, ಆ ಬಗ್ಗೆ ಪರಿಶೀಲಿಸಲಾಗುವುದು ಎಂದು ಭರವಸೆ ನೀಡಿದರು.
ಸುವರ್ಣ ಸೌಧದ ವೈಭವದ ಹೊರ ಆವರಣದಲ್ಲಿ ನಡೆದ "ಕರ್ನಾಟಕ" ನಾಮಕರಣ ಸುವರ್ಣ ಮಹೋತ್ಸವದಲ್ಲಿ ಮಾತನಾಡಿದ ಸಿಎಂ, ತ್ಯಾಗ ಮತ್ತು ಬಲಿದಾನದ ಮೂಲಕ ನಾಡು ಏಕೀಕರಣಗೊಂಡು ಕನ್ನಡ ನಾಡು ಉದಯವಾಯಿತು. ಕನ್ನಡ ನೆಲ-ಜಲ-ಭಾಷೆ-ಗಡಿ ರಕ್ಷಣೆಗೆ ನಾವು ಬದ್ಧರಾಗಿರುವುದೇ, ಕನ್ನಡ ವಾತಾವರಣ ನಿರ್ಮಾಣ ಮಾಡಿ ಇದನ್ನು ವಿಸ್ತರಿಸುವುದೇ ತ್ಯಾಗ ಬಲಿದಾನ ಮಾಡಿದ ಎಲ್ಲರಿಗೂ ನಾವು ಕೊಡುವ ಗೌರವ ಎಂದರು.
ಅಭಿವೃದ್ಧಿಯಲ್ಲಿ ದಾಪುಗಾಲು ಹಾಕುತ್ತಿದೆ :ಸುವರ್ಣ ಸಂಭ್ರಮಾಚರಣೆ ಹಾಗೂ ಕರ್ನಾಟಕ ವಿಧಾನ ಮಂಡಲದ ಮಾಜಿ ಸಭಾಪತಿ ಅವರು ಹಾಗೂ ಸಭಾಧ್ಯಕ್ಷರುಗಳ ಸನ್ಮಾನ ಸಮಾರಂಭ ಉದ್ಘಾಟಿಸಿ ಮಾತನಾಡಿದ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್, ಕಳೆದ ಐವತ್ತು ವರ್ಷಗಳ ಅವಧಿಯಲ್ಲಿ ರಾಜ್ಯವು ಪ್ರತಿಯೊಂದು ಕ್ಷೇತ್ರದಲ್ಲಿ ಅಭಿವೃದ್ಧಿಯ ದಾಪುಗಾಲು ಹಾಕುತ್ತಿದೆ. ಪ್ರಾಚೀನ ಹಾಗೂ ಮಧ್ಯಕಾಲೀನ ಇತಿಹಾಸದ ಪುಟಗಳನ್ನು ತಿರುವಿದಾಗ ಈ ನಾಡು ಭವ್ಯ ಪರಂಪರೆ, ಭೌಗೋಳಿಕ ವ್ಯಾಪ್ತಿ ಹೊಂದಿತ್ತು ಎಂದು ತಿಳಿಯುತ್ತದೆ. ಸಂಗೀತ, ಕಲೆ, ಸಾಂಸ್ಕೃತಿಕ ಕ್ಷೇತ್ರಕ್ಕೆ ನಾಡಿನ ಕೊಡುಗೆ ದೊಡ್ಡದು. ಶಿಕ್ಷಣ, ಔದ್ಯೋಗೀಕರಣದಲ್ಲಿಯೂ ರಾಜ್ಯ ಪ್ರಗತಿ ಸಾಧಿಸಿದೆ. ಕನ್ನಡ ಎಂಟು ಸಾಹಿತಿಗಳು ಜ್ಞಾನಪೀಠ ಪ್ರಶಸ್ತಿಗೆ ಭಾಜನರಾಗಿರುವುದು ಹೆಮ್ಮೆಯ ಸಂಗತಿಯಾಗಿದೆ.
ದೇಶದಲ್ಲಿಯೇ ಅತಿಹೆಚ್ಚು ತೆರಿಗೆ ಪಾವತಿಸುವ ಎರಡನೇ ರಾಜ್ಯ ಕರ್ನಾಟಕವಾಗಿರುವುದು ಇಲ್ಲಿನ ಉದ್ಯೋಗಶೀಲತೆಗೆ ಸಾಕ್ಷಿಯಾಗಿದೆ. ಉತ್ತರದ ಬೆಳಗಾವಿಯಿಂದ ದಕ್ಷಿಣದ ಬೆಂಗಳೂರಿನವರೆಗೆ ನಾಡು ವೈವಿಧ್ಯಮಯ ಐತಿಹಾಸಿಕ, ನೈಸರ್ಗಿಕ ತಾಣಗಳನ್ನು ಹೊಂದಿದೆ. ಮುಂಬರುವ 25 ವರ್ಷಗಳ ಅವಧಿಯಲ್ಲಿ ರಾಜ್ಯದ ಸರ್ವಾಂಗೀಣ ಪ್ರಗತಿಗೆ ಸ್ಪಷ್ಟ ದಿಕ್ಸೂಚಿಯನ್ನು ರಾಜ್ಯ ಹಾಕಿಕೊಂಡು ಮಹಾನ್ ಕರ್ನಾಟಕ,ಮಹಾನ್ ಭಾರತ ನಿರ್ಮಿಸಬೇಕು ಎಂದು ನುಡಿದರು.
ಪ್ರೀತಿ ಪೂರ್ವಕ ದ್ವೇಷ ರಹಿತ ರಾಜ್ಯ ನಮ್ಮದು :ವಿಧಾನಸಭಾಧ್ಯಕ್ಷ ಯು.ಟಿ.ಖಾದರ್ ಮಾತನಾಡಿ, ರಾಜ್ಯಕ್ಕೆ ಕರ್ನಾಟಕ ಎಂದು ನಾಮಕರಣಗೊಂಡ ನಂತರ ಆಗಿರುವ ಸರ್ವಾಂಗೀಣ ವಿಕಾಸಕ್ಕೆ ಕೊಡುಗೆ ನೀಡಿರುವ ಹಿರಿಯರನ್ನು ಸ್ಮರಿಸುವುದು ನಮ್ಮೆಲ್ಲರ ಜವಾಬ್ದಾರಿ ಮತ್ತು ಕರ್ತವ್ಯವಾಗಿದೆ. ಮುಂದಿನ ಪೀಳಿಗೆಗೆ ಒಂದು ಮಾದರಿಯಾದ ರಾಜ್ಯ ಮತ್ತು ಪರಂಪರೆಯನ್ನು ನಾವು ನೀಡುವ ಕೆಲಸ ಕಾರ್ಯಗಳನ್ನು ನಾವು ಮಾಡಬೇಕು.ಪ್ರೀತಿ ಪೂರ್ವಕ ದ್ವೇಷ ರಹಿತ ರಾಜ್ಯ ನಮ್ಮದು ಆ ಹಿರಿಮೆ ಗರಿಮೆ ಎತ್ತಿ ಹಿಡಿಯಬೇಕು ಎಂದು ಹೇಳಿದರು.