ಶಿವಮೊಗ್ಗ: 'ಈ ಬಾರಿಯ ವಿಧಾನಸಭೆ ಚುನಾವಣೆಯಲ್ಲಿ ಸ್ಪಷ್ಟ ಬಹುಮತದೊಂದಿಗೆ ಬಿಜೆಪಿ ಪಕ್ಷವು ರಾಜ್ಯದಲ್ಲಿ ಮತ್ತೆ ಅಧಿಕಾರಕ್ಕೆ ಬರಲಿದೆ'' ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಹೇಳಿದರು. ಶಿವಮೊಗ್ಗ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ''ಈ ಬಾರಿ ಭಾರತೀಯ ಜನತಾ ಪಾರ್ಟಿ ಪೂರ್ಣ ಬಹುಮತದ ಸರ್ಕಾರವನ್ನು ರಚನೆ ಮಾಡಬೇಕು ಅನ್ನುವ ನಿಟ್ಟಿನಲ್ಲಿ ಕಾರ್ಯಗಳು ಪ್ರಾರಂಭವಾಗಿದೆ. ಕೇಂದ್ರದ ನಮ್ಮ ನಾಯಕರು ರಾಜ್ಯದ ಎಲ್ಲಾ ನಾಯಕರು ಕೂಡ ರಾಜ್ಯಾದ್ಯಂತ ಪ್ರವಾಸ ಕೈಗೊಂಡಿದ್ದಾರೆ'' ಎಂದರು.
''ನಮ್ಮ ಸರ್ಕಾರವು ರಾಜ್ಯದ ಜನರಿಗೆ ಕೊಟ್ಟ ಭರವಸೆಗಳು ಈಡೇರಿಸಿದೆ. ನಮ್ಮ ನಾಯಕರು ಮಾಡಿರುವ ಶಿಲಾನ್ಯಾಸವನ್ನು ಕಾಮಗಾರಿ ಮೂಲಕ ಪೂರ್ಣಗೊಳಿಸುವುದು ಸರ್ಕಾರದ ಗುರಿ ಆಗಿದೆ. ಹಿಂದಿನ ಸರ್ಕಾರ ಹಾಗೂ ಇಂದಿನ ಸರ್ಕಾರಕ್ಕೆ ಬಹಳ ವ್ಯತ್ಯಾಸವಿದೆ'' ಎಂದು ತಿಳಿಸಿದರು.
ಯಡಿಯೂರಪ್ಪ, ಬೊಮ್ಮಯಿ ನೇತೃತ್ವದಲ್ಲಿ ಅಭಿವೃದ್ಧಿಗೆ ವೇಗ:''ನಮ್ಮ ಸರ್ಕಾರದ ಅವಧಿಯಲ್ಲಿ ಅಭಿವೃದ್ಧಿ ಕೆಲಸಕ್ಕೆ ವೇಗ ಸಿಕ್ಕಿದೆ. ಹಿಂದೆ ಯಾವುದೇ ಯೋಜನೆ ಮಾಡಬೇಕೆಂದರೆ ದಶಕಗಳ ಕಾಲ ಕಾಯಬೇಕಿತ್ತು. ಆದರೆ ಈಗ ಹಾಗಿಲ್ಲ, ಆಧುನಿಕ ತಂತ್ರಜ್ಞಾನ ಬಳಸಿ ಯೋಜನೆಗಳನ್ನು ಪೂರ್ಣಗೊಳಿಸಲಾಗುತ್ತದೆ. ಕರ್ನಾಟಕವನ್ನು ಅಭಿವೃದ್ಧಿಯತ್ತ ತೆಗೆದುಕೊಂಡು ಹೋಗಬೇಕು ಎನ್ನುವುದೇ ನಮ್ಮ ಗುರಿ. ನಮ್ಮ ಸರ್ಕಾರ ಇಲ್ಲದ ಕಡೆ ಕೇಂದ್ರ ಸರ್ಕಾರವು ನೀಡಿದ ಯೋಜನೆಗಳನ್ನು ಪೂರ್ಣಗೊಳಿಸಲು ಆಗುತ್ತಿಲ್ಲ. ರಾಜ್ಯದಲ್ಲಿ ಯಡಿಯೂರಪ್ಪ ಹಾಗೂ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ವೇಗವಾಗಿ ಅಭಿವೃದ್ಧಿ ಆಗಿದೆ'' ಎಂದು ಹೇಳಿದರು.
54 ಲಕ್ಷ ರೈತರಿಗೆ ಕಿಸಾನ್ ಸನ್ಮಾನ್ ಯೋಜನೆ ಲಾಭ:''ಕರ್ನಾಟಕದಲ್ಲಿ ಪಿಎಂ ಕಿಸಾನ್ ಸನ್ಮಾನ್ ಯೋಜನೆಯ ಲಾಭವನ್ನು 54 ಲಕ್ಷ ರೈತರು ಪಡೆಯುತ್ತಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಹಾಗೂ ಗೃಹ ಸಚಿವ ಅಮಿತ್ ಶಾ ಅವರು ದೇಶದ ಎಲ್ಲ ರಾಜ್ಯದಲ್ಲಿ ನಡೆಯುವ ಚುನಾವಣೆಗಳ ನೇತೃತ್ವ ವಹಿಸುತ್ತಾರೆ. ಯಾಕೆಂದರೆ, ದೇಶದ ರಕ್ಷಣೆ ಹಾಗೂ ಅಭಿವೃದ್ದಿಗಾಗಿ ಎಲ್ಲ ಕಡೆಗಳಲ್ಲೂ ಬೆಂಬಲ ಸಿಗುತ್ತಿದೆ. ಕರ್ನಾಟಕ ಹಾಗೂ ದೇಶದ ಮುಖಂಡರು ರಾಜ್ಯದ ಬೇರೆ ಬೇರೆ ಜಿಲ್ಲೆಯಲ್ಲಿ ಪ್ರಚಾರ ಮಾಡುತ್ತಿದ್ದಾರೆ. ಈ ಸಲ ಸ್ಪಷ್ಟ ಬಹುಮತದೊಂದಿಗೆ ಅಧಿಕಾರಕ್ಕೆ ಬರುತ್ತೇವೆ'' ಎಂದು ಶೋಭಾ ಕರಂದ್ಲಾಜೆ ವಿಶ್ವಾಸ ವ್ಯಕ್ತಪಡಿಸಿದರು.