ಬೆಳಗಾವಿ: ವಂಟಮೂರಿ ಗ್ರಾಮದಲ್ಲಿ ಇತ್ತೀಚೆಗೆ ದೌರ್ಜನ್ಯಕ್ಕೆ ಒಳಗಾಗಿರುವ ಮಹಿಳೆಗೆ ಸರಕಾರವು 2.03 ಎಕರೆ ಜಮೀನು ಮಂಜೂರು ಮಾಡಿ ಆದೇಶಿಸಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ದೌರ್ಜನ್ಯಕ್ಕೆ ಒಳಗಾಗಿರುವ ಕಾಕತಿ ಪೊಲೀಸ್ ಠಾಣೆ ವ್ಯಾಪ್ತಿ ಹೊಸ ವಂಟಮೂರಿ ಗ್ರಾಮದ ಸಂತ್ರಸ್ತ ಮಹಿಳೆಗೆ ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದಿಂದ ಭೂ ಒಡೆತನ ಯೋಜನೆಯಡಿ ಜಮೀನು ಮಂಜೂರು ಮಾಡಿ ಆದೇಶಿಸಲಾಗಿರುತ್ತದೆ. ಪರಿಶಿಷ್ಟ ವರ್ಗಗಳ ಕಲ್ಯಾಣ, ಯುವ ಸಬಲೀಕರಣ ಹಾಗೂ ಕ್ರೀಡಾ ಇಲಾಖೆಯ ಸಚಿವ ಬಿ.ನಾಗೇಂದ್ರ ಅವರು ವಿಶೇಷ ಪ್ರಕರಣ ಎಂದು ಪರಿಗಣಿಸಿ ತಕ್ಷಣವೇ ಜಮೀನು ಮಂಜೂರಾತಿಗೆ ನಿರ್ದೇಶನ ನೀಡಿದ್ದರು.
ಈ ಹಿನ್ನೆಲೆಯಲ್ಲಿ ನೊಂದ ಮಹಿಳೆಗೆ ಆರ್ಥಿಕ ಸ್ಥಿರತೆ ಒದಗಿಸುವ ದೃಷ್ಟಿಯಿಂದ ವಿಶೇಷ ಪ್ರಕರಣವೆಂದು ಪರಿಗಣಿಸಿ ಜಮೀನು ಮಂಜೂರು ಮಾಡಿ ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮ ಅನುಮೋದನೆ ನೀಡಿರುತ್ತದೆ ಎಂದು ಸಚಿವ ಸತೀಶ್ ಜಾರಕಿಹೊಳಿ ತಿಳಿಸಿದ್ದಾರೆ. 2.03 ಎಕರೆ ಜಮೀನು ಮಂಜೂರಾತಿ ಜತೆಗೆ ಸರಕಾರವು ಈಗಾಗಲೇ ಐದು ಲಕ್ಷ ರೂಪಾಯಿ ಪರಿಹಾರವನ್ನು ಕೂಡ ಘೋಷಿಸಿದೆ.
ಸಂತ್ರಸ್ತ ಮಹಿಳೆ ಭೇಟಿಗೆ ಅನುಮತಿ ಅಗತ್ಯ: ಮಾನ್ಯ ಉಚ್ಛ ನ್ಯಾಯಾಲಯ ಬೆಂಗಳೂರು ರಿಟ್ ಅರ್ಜಿ ಸಂಖ್ಯೆ. 27927/2023 (SUO-MOTO) ದಲ್ಲಿ ದಿನಾಂಕ: 16/12/2023 ರಂದು ನೀಡಿರುವ ಆದೇಶದಲ್ಲಿ ಕಾಕತಿ ಪೊಲೀಸ್ ಠಾಣೆ ಮೊಕದ್ದಮೆ ಸಂಖ್ಯೆ, 260/2023 ರಲ್ಲಿಯ ಸಂತ್ರಸ್ತ ಮಹಿಳೆಯನ್ನು ಅವರ ಕುಟುಂಬದ ಸದಸ್ಯರು ಹಾಗೂ ರಾಷ್ಟ್ರೀಯ ಮಹಿಳಾ ಆಯೋಗದ ಸದಸ್ಯರು ಮಾತ್ರ ಭೇಟಿಯಾಗಬಹುದು.
ಬೇರೆ ಯಾವುದೇ ವ್ಯಕ್ತಿ ಅಥವಾ ಸಂಘಟನೆಯವರು ಸದರಿ ಮಹಿಳೆಯನ್ನು ಭೇಟಿಯಾಗಬೇಕಾದಲ್ಲಿ ನೋಂದ ಮಹಿಳೆ ಹಾಗೂ ವೈದ್ಯಾಧಿಕಾರಿಗಳ ಲಿಖಿತ ಅನುಮತಿಯೊಂದಿಗೆ ಮಾತ್ರ ಭೇಟಿಯಾಗಬಹುದಾಗಿದೆ ಎಂದು ಬೆಳಗಾವಿ ನಗರ ಪೊಲೀಸ್ ಆಯುಕ್ತ ಎಸ್.ಎನ್ ಸಿದ್ದರಾಮಪ್ಪ ತಿಳಿಸಿದ್ದಾರೆ.
ಸಂತ್ರಸ್ತ ಮಹಿಳೆ ಆರೋಗ್ಯ ವಿಚಾರಣೆ:ದುಷ್ಕರ್ಮಿಗಳಿಂದ ಅಮಾನವೀಯ ಕೃತ್ಯಕ್ಕೆ ಒಳಗಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಸಂತ್ರಸ್ತ ಮಹಿಳೆಯ ಆರೋಗ್ಯವನ್ನು ರಾಷ್ಟ್ರೀಯ ಮಹಿಳಾ ಆಯೋಗ ವಿಚಾರಿಸಿತು. ಇಂದು ಬೆಳಗ್ಗೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸಖಿ ಒನ್ ಸ್ಟಾಪ್ ಸೆಂಟರ್ಗೆ ಭೇಟಿ ನೀಡಿದ ರಾಷ್ಟ್ರೀಯ ಮಹಿಳಾ ಆಯೋಗದ ಸದಸ್ಯೆ ಡೆಲಿನಾ ಖೊಂಗಡುಪ್ ನೇತೃತ್ವದ ತಂಡವು ಸಂತ್ರಸ್ತ ಮಹಿಳೆಗೆ ಸಾಂತ್ವನ ಹೇಳಿ ಧೈರ್ಯ ತುಂಬಿತು.
ಇದನ್ನೂಓದಿ:ಬೆಳಗಾವಿ ಮಹಿಳೆ ಹಲ್ಲೆ ಪ್ರಕರಣ: ಸಿಎಂ ಇಡೀ ದೇಶದ ಮಹಿಳೆಯರ ಕ್ಷಮೆ ಕೇಳಬೇಕು: ಕೇಂದ್ರ ಬಿಜೆಪಿ ಸತ್ಯಶೋಧನಾ ಸಮಿತಿ ಆಗ್ರಹ