ಬೆಳಗಾವಿ:ಯುದ್ಧಪೀಡಿತ ಉಕ್ರೇನ್‌ನಿಂದ ಬೆಳಗಾವಿಯ ಎಂಬಿಬಿಎಸ್ ವಿದ್ಯಾರ್ಥಿನಿ ಸುರಕ್ಷಿತವಾಗಿ ಮನೆಗೆ ಆಗಮಿಸಿದ್ದು, ಕುಟುಂಬಸ್ಥರಲ್ಲಿ ಸಂಭ್ರಮ ಮನೆ ಮಾಡಿದೆ.
ಉಕ್ರೇನ್‌ನಿಂದ ಬೆಳಗಾವಿಗೆ ಬಂದ ವಿದ್ಯಾರ್ಥಿನಿ ತಾಲೂಕಿನ ಸಂತಿಬಸ್ತವಾಡ ಗ್ರಾಮದ ಫೈಜಾ ಸುಬೇದಾರ್ ಎಂಬ ವಿದ್ಯಾರ್ಥಿನಿಯನ್ನು ಅಂಬೇಡ್ಕರ್ ಜನಜಾಗೃತಿ ವೇದಿಕೆಯಿಂದ ಸ್ವಾಗತಿಸಲಾಯಿತು. ಮಗಳು ಸುರಕ್ಷಿತವಾಗಿ ಮರಳಿದ ಬಂದಿದ್ದಕ್ಕೆ ಕುಟುಂಬದಲ್ಲಿ ಸಂಭ್ರಮ ವಾತಾವರಣ ನಿರ್ಮಾಣವಾಗಿದೆ.
ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿ ವಿದ್ಯಾರ್ಥಿನಿ ಫೈಜಾ, ನಾವು ರೊಮೇನಿಯಾ ಗಡಿಗೆ ಬಂದು ಅಲ್ಲಿಂದ 12 ಗಂಟೆ ಪ್ರಯಾಣ ಮಾಡಿ ಏರ್‌ಪೋರ್ಟ್ ತಲುಪಿದೆವು. ನಾವು ಉಕ್ರೇನ್ ಪಶ್ಚಿಮ ಭಾಗದಲ್ಲಿದೆವು. ಅಲ್ಲಿ ಅಷ್ಟೊಂದು ತೊಂದರೆ ಇರಲಿಲ್ಲ. ನಮ್ಮ ಭಾರತ ಸರ್ಕಾರದ ಬಗ್ಗೆ ನನಗೆ ಹೆಮ್ಮೆ ಇದೆ. ನಾವು ವಾಪಸ್ ಆಗಿರುವುದು ಬಹಳ ಸಂತೋಷ ಆಗುತ್ತಿದೆ. ಇದಕ್ಕೆ ಕಾರಣವಾದ ಪ್ರಧಾನಿ ಮೋದಿ ಅವರಿಗೂ ಧನ್ಯವಾದ ತಿಳಿಸುತ್ತೇನೆ. ಯುದ್ದ ಆರಂಭವಾದಾಗ ನಮಗೆ ಬಹಳ ಭಯ ಅನಿಸಿತ್ತು ಎಂದರು.
ಏಕಾಏಕಿ ಯುದ್ಧ ಆರಂಭವಾಗಿದ್ದನ್ನು ಕೇಳಿ ಶಾಕ್ ಆಯ್ತು. ಬೆಳ್ಳಂಬೆಳಗ್ಗೆ ಐದು ಗಂಟೆಗೆ ಯುದ್ಧ ಆರಂಭವಾದ ಸುದ್ದಿ ತಿಳಿಯಿತು. ಯಾರು ಕೂಡ ರಷ್ಯಾ ಯುದ್ಧ ಮಾಡುತ್ತೆ ಎಂದು ಊಹಿಸಿರಲಿಲ್ಲ. ಮೊದಲ ವಿಮಾನದಲ್ಲಿ ನಾನು ವಾಪಸ್ ಬಂದಿದ್ದಕ್ಕೆ ಬಹಳ ಖುಷಿಯಾಗುತ್ತಿದೆ. ನಮ್ಮ ವಿಮಾನದಲ್ಲಿ 15 ಜನ ವಿದ್ಯಾರ್ಥಿಗಳು ವಾಪಸ್ ಬಂದಿದ್ದಾರೆ. ಮುಂಬೈನಲ್ಲಿ ಕೇಂದ್ರ ಸಚಿವ ಪಿಯೂಷ್ ಗೋಯಲ್ ನಮ್ಮನ್ನು ಸ್ವಾಗತಿಸಿದರು. ಖಾರ್ಕೀವ್‌ನಲ್ಲಿ ಪರಿಸ್ಥಿತಿ ಬಹಳ ಗಂಭೀರವಾಗಿದೆ. ಖಾರ್ಕೀವ್, ಕೀವ್‌ನಲ್ಲಿದ್ದ ವಿದ್ಯಾರ್ಥಿಗಳನ್ನು ಆದಷ್ಟು ಬೇಗ ಕರೆಯಿಸಿಕೊಳ್ಳಬೇಕು. ಎಟಿಎಂಗಳಲ್ಲಿ ಹಣ ಸಿಗುತ್ತಿಲ್ಲ. ಊಟಕ್ಕೂ ಅವರಿಗೆ ತುಂಬಾ ತೊಂದರೆ ಆಗುತ್ತಿದೆ. ನನ್ನಂತೆ ಅವರೂ ಸುರಕ್ಷಿತವಾಗಿ ಮರಳಿ ದೇಶಕ್ಕೆ ಬರಬೇಕು ಎಂದರು.
ಇದನ್ನೂ ಓದಿ: ಉಕ್ರೇನ್‌ನಿಂದ ದೆಹಲಿಗೆ ಬಂದಿಳಿದ ದಾವಣಗೆರೆಯ ಇಬ್ಬರು ವಿದ್ಯಾರ್ಥಿಗಳು