ಬೆಳಗಾವಿ:ರಾಜ್ಯದ ಅತಿ ದೊಡ್ಡ ಜಿಲ್ಲೆ ಬೆಳಗಾವಿ ಮೂರು ಜಿಲ್ಲೆ ಆಗುವಷ್ಟು ವಿಶಾಲ ಪ್ರದೇಶ ಹೊಂದಿದೆ. ಆಡಳಿತಾತ್ಮಕ ದೃಷ್ಟಿಯಿಂದ ಜಿಲ್ಲಾ ವಿಭಜನೆ ಆಗಬೇಕು ಎನ್ನುವುದು ಮೂರು ದಶಕಗಳ ಬೇಡಿಕೆಯಾಗಿದೆ. ಆದರೆ, ರಾಜಕಾರಣಿಗಳ ಇಚ್ಛಾಶಕ್ತಿ ಕೊರತೆ ಮತ್ತು ಭಿನ್ನ ರಾಗದಿಂದಾಗಿ ಆ ಕನಸು ಕನಸಾಗಿಯೇ ಉಳಿದುಕೊಂಡಿದೆ. ಇದೀಗ ಶಾಸಕ ಲಕ್ಷ್ಮಣ ಸವದಿ ಹೇಳಿಕೆ ಮತ್ತೊಂದು ಚರ್ಚೆ ಹುಟ್ಟು ಹಾಕಿದೆ.
ಹೌದು.. ಬೆಳಗಾವಿ ಜಿಲ್ಲೆ 13,415 ಚದರ ಕಿ ಮೀ ವಿಸ್ತೀರ್ಣ, 50 ಲಕ್ಷಕ್ಕೂ ಹೆಚ್ಚು ಜನಸಂಖ್ಯೆ ಹೊಂದಿದ್ದು, 18 ವಿಧಾನಸಭೆ, 3 ಲೋಕಸಭೆ ಕ್ಷೇತ್ರದ ವ್ಯಾಪ್ತಿಯನ್ನು ಹೊಂದಿದೆ. 15 ತಾಲೂಕು, 6 ಆರ್ ಟಿ ಓ ಕಚೇರಿ, 506 ಗ್ರಾಪಂ, 345 ತಾಲೂಕು ಪಂಚಾಯಿತಿ ಸದಸ್ಯರು, 90 ಜಿಪಂ ಸದಸ್ಯರನ್ನು ಹೊಂದಿದೆ. ಇನ್ನು ಬೆಳಗಾವಿ, ಗೋಕಾಕ್, ಹುಕ್ಕೇರಿ, ಬೈಲಹೊಂಗಲ, ಸವದತ್ತಿ, ರಾಮದುರ್ಗ, ಅಥಣಿ, ಚಿಕ್ಕೋಡಿ, ರಾಯಬಾಗ, ಖಾನಾಪುರ, ಕಿತ್ತೂರು, ಕಾಗವಾಡ, ನಿಪ್ಪಾಣಿ ಹಾಗೂ ಮೂಡಲಗಿ ಜಿಲ್ಲೆಯ ತಾಲೂಕುಗಳಾಗಿವೆ.
ಬೆಳಗಾವಿ ಜಿಲ್ಲೆ ವಿಭಜನೆ ಮೂರು ದಶಕದ ಹೋರಾಟ:ಗಡಿ ಭಾಗದ ಚಿಕ್ಕೋಡಿ ಉಪವಿಭಾಗದ ಅನೇಕ ಹಳ್ಳಿಗಳ ಜನರು ತಮ್ಮ ಕೆಲಸಕ್ಕೆ ಬೆಳಗಾವಿಗೆ ಬರಬೇಕು ಎಂದರೆ 200 ಕಿ.ಮೀ ಕ್ಕಿಂತ ಹೆಚ್ಚು ದೂರ ಪ್ರಯಾಣ ಬೆಳೆಸಬೇಕು. ತಮ್ಮ ಕೆಲಸ ಬಿಟ್ಟು ದಿನಪೂರ್ತಿ ಒಂದು ದಿನ ಸಮಯ ವ್ಯಯಿಸುವ ಸ್ಥಿತಿಯಿದೆ. ಹಾಗಾಗಿ ಆಡಳಿತಾತ್ಮಕ ದೃಷ್ಟಿಯಿಂದ ಬೆಳಗಾವಿ ಜಿಲ್ಲೆ ವಿಭಜನೆ ಆಗಲೇಬೇಕು ಎಂದು ಕಳೆದ ಮೂರು ದಶಕಗಳಿಂದ ಹೋರಾಟ ನಡೆಯುತ್ತಿದೆ. ಆದರೆ, ಚುನಾವಣೆ ಮತ್ತು ಚಳಿಗಾಲ ಅಧಿವೇಶನ ಸಂದರ್ಭದಲ್ಲಿ ಮಾತ್ರ ಜಿಲ್ಲಾ ವಿಭಜನೆ ಚರ್ಚೆ ಮುನ್ನೆಲೆಗೆ ಬರುತ್ತದೆ. ಆ ಬಳಿಕ ಯಾವೊಬ್ಬ ರಾಜಕಾರಣಿಗಳು ಈ ಬಗ್ಗೆ ತುಟಿ ಪಿಟಕ್ ಎನ್ನುವುದಿಲ್ಲ.
ಜಿಲ್ಲೆ ವಿಭಜನೆ ಸಚಿವ ಸತೀಶ್ ಮಾತಿಗೆ ಪರ ವಿರೋಧ ಚರ್ಚೆ:ತಮ್ಮ ಪಕ್ಷ ಅಧಿಕಾರಕ್ಕೆ ಬರುತ್ತಿದ್ದಂತೆ ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಬೆಳಗಾವಿ ಜಿಲ್ಲೆ ವಿಭಜಿಸಿ ಚಿಕ್ಕೋಡಿ ಗೋಕಾಕ ಜಿಲ್ಲೆಗಳನ್ನಾಗಿ ಮಾಡುವ ಹೇಳಿಕೆ ಅನೇಕ ಬಾರಿ ನೀಡಿದ್ದರು. ಮುಖ್ಯಮಂತ್ರಿಗಳ ನೇತೃತ್ವದಲ್ಲಿ ಜಿಲ್ಲೆಯ ಶಾಸಕರ ಸಭೆ ಕೂಡ ನಡೆದಿದೆ ಎಂದು ಹೇಳಿದ್ದರು. ಜಿಲ್ಲಾ ಉಸ್ತುವಾರಿ ಸಚಿವರ ಮಾತಿಗೆ ಪರ ವಿರೋಧ ಚರ್ಚೆಗಳು ಕೇಳಿ ಬಂದಿದ್ದವು. ಬೈಲಹೊಂಗಲ ಶಾಸಕ ಮಹಾಂತೇಶ ಕೌಜಲಗಿ ಆ ಸಭೆಗೆ ನಾವು ಹೋಗಿಲ್ಲ. ಜಿಲ್ಲಾ ವಿಭಜನೆ ಆಗೋದಾದರೆ ನಮ್ಮ ಬೈಲಹೊಂಗಲ ಪರಿಗಣಿಸುವಂತೆ ಒತ್ತಾಯಿಸಿದ್ದರು.