ಕರ್ನಾಟಕ

karnataka

ETV Bharat / state

ಬೆಳಗಾವಿ ಬೈ ಎಲೆಕ್ಷನ್: ಲಿಂಗಾಯತ ಮತಗಳೇ ನಿರ್ಣಾಯಕ: ಕುರುಬ, ಮುಸ್ಲಿಂ, ಮರಾಠಾರನ್ನ ಕಡೆಗಣನೆ ಮಾಡುವಂತಿಲ್ಲ - ಬೆಳಗಾವಿ ಬೈ ಎಲೆಕ್ಷನ್

ಬಿಜೆಪಿ ಅಭ್ಯರ್ಥಿ ಮಂಗಳಾ ಅಂಗಡಿ ಲಿಂಗಾಯತ ಸಮುದಾಯಕ್ಕೆ ಸೇರಿದವರಾಗಿದ್ದು, ಒಂದು ವೇಳೆ ಲಿಂಗಾಯತ ಮತಗಳು ಬಿಜೆಪಿಗೆ ಬಂದರೆ ಸತೀಶ ಜಾರಕಿಹೊಳಿಗೆ ತುಸು ಕಷ್ಟವಾಗಲಿದೆ. ಇನ್ನು ಸತೀಶ ಜಾರಕಿಹೊಳಿ ಎಸ್‍ಟಿ ಸಮುದಾಯಕ್ಕೆ ಸೇರಿದವರಾಗಿದ್ದು, ಎಲ್ಲ ವರ್ಗಗಳ ಜೊತೆಗೆ ಉತ್ತಮ ಬಾಂಧವ್ಯ ಹೊಂದಿದ್ದಾರೆ. ಆದರೆ, ಇವು ಮತಗಳಾಗಿ ಪರಿವರ್ತನೆ ಆಗುತ್ತವಾ ಎಂಬುದು ಫಲಿತಾಂಶದ ಬಳಿಕವೇ ಗೊತ್ತಾಗಲಿದೆ.

ಬೈ ಎಲೆಕ್ಷನ್
ಬೈ ಎಲೆಕ್ಷನ್

By

Published : Apr 12, 2021, 3:54 PM IST

ಬೆಳಗಾವಿ: ಲೋಕಸಭೆ ಉಪಚುನಾವಣೆಗೆ ದಿನಗಣನೆ ಆರಂಭವಾಗಿದ್ದು, ಈ ಕ್ಷೇತ್ರದಲ್ಲಿ ಲಿಂಗಾಯತ ಮತಗಳೇ ನಿರ್ಣಾಯಕವಾಗಿವೆ. ಬಿಜೆಪಿ ಅಭ್ಯರ್ಥಿ ಮಂಗಳಾ ಅಂಗಡಿ ಹಾಗೂ ಕಾಂಗ್ರೆಸ್ ಅಭ್ಯರ್ಥಿ ಸತೀಶ ಜಾರಕಿಹೊಳಿ ಲಿಂಗಾಯತ ಮತಗಳ ಮೇಲೆ ಕಣ್ಣಿಟ್ಟಿದ್ದಾರೆ. ಲಿಂಗಾಯತ ಸಮುದಾಯ ಯಾರ ಬೆನ್ನಿಗೆ ನಿಲ್ಲುತ್ತೋ ಆ ಅಭ್ಯರ್ಥಿ ಗೆಲುವು ಸುಲಭವಾಗಲಿದೆ ಎಂದು ಹೇಳಲಾಗುತ್ತಿದೆ.

ಕಳೆದ 40 ವರ್ಷಗಳಿಂದ ಇಲ್ಲಿ ಲಿಂಗಾಯತ ಸಮುದಾಯದ ಮುಖಂಡರೇ ಸಂಸದರಾಗಿದ್ದಾರೆ. ಬೆಳಗಾವಿ ಲೋಕಸಭೆ ಕ್ಷೇತ್ರದಿಂದ ನಾಲ್ಕು ಬಾರಿ ಆಯ್ಕೆಯಾಗಿದ್ದ ಸುರೇಶ ಅಂಗಡಿ ಅವರ ಗೆಲುವಿನಲ್ಲಿ ಲಿಂಗಾಯತ ಮತಗಳ ಪಾತ್ರ ಪ್ರಮುಖವಾಗಿದೆ. ಇದಕ್ಕೂ ಮುನ್ನ ಕಾಂಗ್ರೆಸ್​ನಿಂದ ಸ್ಪರ್ಧಿಸಿದ್ದ ಎಸ್.ಬಿ. ಸಿದ್ನಾಳ್ ನಾಲ್ಕು ಬಾರಿ ಸಂಸದರಾಗಲು ಲಿಂಗಾಯತ ಮತಗಳೇ ಪ್ರಮುಖ ಪಾತ್ರ ನಿರ್ವಹಿಸಿದ್ದವು. ಹೀಗಾಗಿ ಈ ಉಪಚುನಾವಣೆಯಲ್ಲಿ ಲಿಂಗಾಯತ ಮತಗಳೇ ನಿರ್ಣಾಯಕ ಪಾತ್ರ ವಹಿಸಲಿದ್ದು, ಲಿಂಗಾಯತ ಸಮುದಾಯದ ಒಲೈಕೆಗೆ ಉಭಯ ಪಕ್ಷಗಳ ಅಭ್ಯರ್ಥಿಗಳು ಮುಂದಾಗಿದ್ದಾರೆ.

ಯಾವ ಸಮುದಾಯದಿಂದ ಎಷ್ಟು ಮತಗಳು!
ಎಂಟು ವಿಧಾನಸಭೆ ಕ್ಷೇತ್ರ ವ್ಯಾಪ್ತಿ ಹೊಂದಿರುವ ಬೆಳಗಾವಿ ಕ್ಷೇತ್ರದಲ್ಲಿ ಒಟ್ಟು 18,56,372 ಮತಗಳಿವೆ. ಇದರಲ್ಲಿ ಲಿಂಗಾಯತ 8,60,000 ಮತಗಳಿವೆ( ಇದರಲ್ಲಿ ಲಿಂಗಾಯತ ಪಂಚಮಸಾಲಿ ಸಮಾಜದವರ ಮತಗಳೇ ಸುಮಾರು 6,90,000) ಮರಾಠಾ ಸಮುದಾಯದ 1,95,000, ಜೈನ ಸಮಾಜದ 42,000, ಮುಸ್ಲಿಂ ಸಮಾಜದ 2,75,000, ಕುರುಬ ಸಮುದಾಯ 2,45,000, ಎಸ್‍ಸಿ ಸಮುದಾಯ 1,47,000, ಎಸ್‍ಟಿ ಸಮುದಾಯದ 46,500 ಹಾಗೂ ಇತರ ಹಿಂದುಳಿದ ವರ್ಗದವರ ಸುಮಾರು 45,872 ವೋಟ್​ಗಳಿವೆ. ಇದರಲ್ಲಿ ಲಿಂಗಾಯತ ಮತಗಳು ಅಭ್ಯರ್ಥಿ ಗೆಲುವಿನಲ್ಲಿ ಮಹತ್ವದ ಪಾತ್ರ ನಿರ್ವಹಿಸಿದರೆ, ಮರಾಠ, ಕುರುಬ ಹಾಗೂ ಮುಸ್ಲಿಂ ಮತಗಳು ಯಾವುದೇ ಅಭ್ಯರ್ಥಿಯ ಗೆಲುವಿಗೆ ಕಾರಣವಾಗಬಹುದು.

ಬಿಜೆಪಿ ಅಭ್ಯರ್ಥಿ ಮಂಗಳಾ ಅಂಗಡಿ ಲಿಂಗಾಯತ ಸಮುದಾಯಕ್ಕೆ ಸೇರಿದವರಾಗಿದ್ದು, ಒಂದು ವೇಳೆ ಲಿಂಗಾಯತ ಮತಗಳು ಬಿಜೆಪಿಗೆ ಬಂದರೆ ಸತೀಶ ಜಾರಕಿಹೊಳಿಗೆ ತುಸು ಕಷ್ಟವಾಗಲಿದೆ. ಇನ್ನು ಸತೀಶ ಜಾರಕಿಹೊಳಿ ಎಸ್‍ಟಿ ಸಮುದಾಯಕ್ಕೆ ಸೇರಿದವರಾಗಿದ್ದು, ಎಲ್ಲ ವರ್ಗಗಳ ಜೊತೆಗೆ ಉತ್ತಮ ಬಾಂಧವ್ಯ ಹೊಂದಿದ್ದಾರೆ. ಆದರೆ ಇವು ಮತಗಳಾಗಿ ಪರಿವರ್ತನೆ ಆಗುತ್ತವಾ ಎಂಬುದು ಫಲಿತಾಂಶದ ಬಳಿಕವೇ ಗೊತ್ತಾಗಲಿದೆ.

ಮರಾಠ ಮತಗಳ ಮೇಲೆ ಬಿಜೆಪಿ ಕಣ್ಣು:
ಲೋಕಸಭೆ ಉಪಚುನಾವಣೆ ಘೋಷಣೆಗೂ ಮುನ್ನವೇ ರಾಜ್ಯ ಸರ್ಕಾರ ಮರಾಠಾ ಅಭಿವೃದ್ಧಿ ನಿಗಮ ಸ್ಥಾಪಿಸಿ 50 ಕೋಟಿ ರೂ. ಹಣ ಮೀಸಲಿರಿಸಿತ್ತು. ಅಲ್ಲದೇ ಇದಕ್ಕೂ ಮುನ್ನ ದಿ. ಸುರೇಶ ಅಂಗಡಿ ಅವರು ಮರಾಠಾ ಭಾಷಿಕರ ಜೊತೆಗೆ ಒಳ್ಳೆಯ ಸಂಬಂಧ ಹೊಂದಿದ್ದರು. ಈ ಹಿಂದಿನ ಚುನಾವಣೆಗಳಲ್ಲಿ ಮರಾಠಾ ಸಮುದಾಯದ ಮತಗಳು ಸುರೇಶ ಅಂಗಡಿ ಅವರಿಗೆ ಹೆಚ್ಚಿನ ಪ್ರಮಾಣದಲ್ಲಿ ಬೀಳುತ್ತಿದ್ದವು. ಇದೀಗ ಅವರ ಪತ್ನಿ ಕಣದಲ್ಲಿದ್ದು, ಮರಾಠಾ ಸಮುದಾಯ ಬಿಜೆಪಿ ಕೈಹಿಡಿಯುವುದೇ ಎಂಬುದು ಕುತೂಹಲ ಮೂಡಿಸಿದೆ.

ಮತ್ತೊಂದೆಡೆ ಎಂಇಎಸ್ ಕೂಡ ತನ್ನ ಅಭ್ಯರ್ಥಿಯನ್ನು ಕಣಕ್ಕಿಳಿಸಿದ್ದು, ಕನಿಷ್ಠ 15,000 ಮತಗಳಾದರೂ ಎಂಇಎಸ್ ಅಭ್ಯರ್ಥಿಗೆ ಬೀಳುವ ಸಾಧ್ಯತೆ ಇದೆ. ಉಳಿದ ಮತಗಳು ಯಾರ ಪಾಲಾಗ್ತಾವೆಯೋ ಆ ಅಭ್ಯರ್ಥಿಗೆ ಹೆಚ್ಚಿನ ಲಾಭವಾಗಲಿದೆ. ಇನ್ನು ಮುಸ್ಲಿಂ, ಎಸ್‍ಸಿ, ಎಸ್‍ಟಿ ಸಮುದಾಯ ಕಾಂಗ್ರೆಸ್ ಜೊತೆಗೆ ಇದೆ. ಇನ್ನು ಕುರುಬ ಸಮುದಾಯದ ಒಲೈಕೆಗಾಗಿ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಎರಡು ದಿನ ಪ್ರಚಾರ ನಡೆಸಿ, ಹಾಲುಮತ ಮುಖಂಡರ ಸಭೆ ನಡೆಸಿದ್ದಾರೆ. ಇದರಿಂದ ಎಚ್ಚೆತ್ತ ಬಿಜೆಪಿ ಇದೀಗ ಕುರುಬ ಮತ ಬೇಟೆಗಾಗಿ ಸಚಿವ ಈಶ್ವರಪ್ಪರನ್ನು ಕ್ಷೇತ್ರಕ್ಕೆ ಆಹ್ವಾನಿಸಿ, ಪ್ರಚಾರದಲ್ಲಿ ತೊಡಗಿಸಿದೆ.

ಕ್ಷೇತ್ರದಲ್ಲಿ ಡಿಸಿಎಂ ಗೋವಿಂದ ಕಾರಜೋಳ ಕೂಡ ನಾಲ್ಕು ದಿನ ಪ್ರಚಾರ ನಡೆಸಿ ಹೋಗಿದ್ದು, ದಲಿತ ಮತಗಳ ನಿರೀಕ್ಷೆಯಲ್ಲಿ ಬಿಜೆಪಿ ಇದೆ. ಕ್ಷೇತ್ರದಲ್ಲಿ ಅಭಿವೃದ್ಧಿ ವಿಷಯಗಳಿಗಿಂತ ಜಾತಿಯ ಲೆಕ್ಕಾಚಾರವೇ ಹೆಚ್ಚಾಗಿ ಚರ್ಚೆಯಾಗುತ್ತಿದ್ದು, ಜಾತಿಯ ಮತ ಸೆಳೆಯಲು ಉಭಯ ಪಕ್ಷಗಳು ಆಯಾ ಸಮುದಾಯದ ನಾಯಕರನ್ನು ಕ್ಷೇತ್ರಕ್ಕೆ ಆಹ್ವಾನಿಸುತ್ತಿರುವುದು ಮಾತ್ರ ಸುಳ್ಳಲ್ಲ.

ಇದನ್ನೂ ಓದಿ..ಪ್ರಧಾನಿ ಲಕ್ಷಗಟ್ಟಲೆ ಜನ ಸೇರಿಸಿ ಭಾಷಣ ಮಾಡುವಾಗ ಕೊರೊನಾ ಹರಡಲ್ವಾ: ರಾಮಲಿಂಗಾರೆಡ್ಡಿ ಪ್ರಶ್ನೆ

ABOUT THE AUTHOR

...view details