ಕರ್ನಾಟಕ

karnataka

ETV Bharat / state

ಮಹಿಳೆಯನ್ನು ವಿವಸ್ತ್ರಗೊಳಿಸಿ ದೌರ್ಜನ್ಯ ನಡೆಸಿದ ಪ್ರಕರಣ ಸಿಐಡಿಗೆ ಹಸ್ತಾಂತರ - ಸಿಐಡಿ ಅಧಿಕಾರಿಗಳು

ಬೆಳಗಾವಿಯ ವಂಟಮೂರಿ ಎಂಬಲ್ಲಿ ಮಹಿಳೆಯನ್ನು ವಿವಸ್ತ್ರಗೊಳಿಸಿ ಅಮಾನವೀಯವಾಗಿ ದೌರ್ಜನ್ಯ ನಡೆಸಿದ ಪ್ರಕರಣದ ತನಿಖೆಯನ್ನು ರಾಜ್ಯ ಸರ್ಕಾರ ಸಿಐಡಿಗೆ ಹಸ್ತಾಂತರಿಸಿದೆ.

ಸಿಐಡಿ
ಸಿಐಡಿ

By ETV Bharat Karnataka Team

Published : Dec 17, 2023, 8:14 PM IST

ಬೆಳಗಾವಿ:ತಾಲೂಕಿನ ವಂಟಮೂರಿಯಲ್ಲಿ ಮಹಿಳೆಯನ್ನು ಬೆತ್ತಲೆಗೊಳಿಸಿ, ಮೆರವಣಿಗೆ ಮಾಡಿ, ಹಲ್ಲೆಗೈದ ಅಮಾನವೀಯ ಪ್ರಕರಣವನ್ನು ರಾಜ್ಯ ಸರ್ಕಾರ ಸಿಐಡಿಗೆ ಹಸ್ತಾಂತರಿಸಿ ಆದೇಶಿಸಿದೆ. ಈ ಬಗ್ಗೆ ಕಾನೂನು ಸುವ್ಯವಸ್ಥೆ ಎಡಿಜಿಪಿ ಆರ್.ಹಿತೇಂದ್ರ ಸಿಐಡಿ ಡಿಜಿಪಿ ಅವರಿಗೆ ಪತ್ರ ಬರೆದಿದ್ದು, ಸಿಐಡಿ ಅಧಿಕಾರಿಗಳು ಕೈಗೊಳ್ಳುವ ತನಿಖೆಗೆ ಬೆಳಗಾವಿ ನಗರ ಪೊಲೀಸ್‌ ಆಯುಕ್ತರು ಮಾಹಿತಿ ನೀಡುವಂತೆ ನಿರ್ದೇಶನ ನೀಡಿದ್ದಾರೆ.

ಮಹಿಳೆಯ ಮೇಲಿನ ಅಮಾನವೀಯ ಕೃತ್ಯಕ್ಕೆ ಇಡೀ ದೇಶಾದ್ಯಂತ ತೀವ್ರ ಆಕ್ರೋಶ ವ್ಯಕ್ತವಾಗಿದ್ದು, ಹೈಕೋರ್ಟ್‌ ಕೂಡ ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಂಡಿದೆ. ಬಿಜೆಪಿ ರಾಜ್ಯದ ವಿವಿಧೆಡೆ ಪ್ರತಿಭಟನೆ ನಡೆಸುತ್ತಿದೆ. ರಾಷ್ಟ್ರೀಯ ಮಹಿಳಾ ಆಯೋಗ, ರಾಷ್ಟ್ರೀಯ ಪರಿಶಿಷ್ಟ ಪಂಗಡಗಳ ಆಯೋಗ ಹಾಗೂ ಬಿಜೆಪಿಯ ಸತ್ಯಶೋಧನಾ ಸಮಿತಿ ತಂಡದ ಸದಸ್ಯರು ಶನಿವಾರ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗದ ಸಿಬ್ಬಂದಿ ಭಾನುವಾರ ಬೆಳಗಾವಿಗೆ ಬಂದು ತನಿಖಾಧಿಕಾರಿಗಳಿಂದ ಮಾಹಿತಿ ಪಡೆದಿದ್ದಾರೆ. ಆಯೋಗವು ಡಿ.18 ಅಥವಾ 19ರಂದು ಬೆಳಗಾವಿಗೆ ಭೇಟಿ ನೀಡಲಿದೆ ಎಂದು ಉನ್ನತ ಮೂಲಗಳಿಂದ ತಿಳಿದು ಬಂದಿದೆ.

ಈ ಎಲ್ಲ ಬೆಳವಣಿಗೆಗಳು ಮತ್ತು ಪ್ರಕರಣ ಗಂಭೀರವಾಗಿರುವ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ತನಿಖೆಯನ್ನು ಸಿಐಡಿಗೆ ವಹಿಸಲು ಮುಂದಾಗಿದೆ. ಸೋಮವಾರ ಸಿಐಡಿ ಅಧಿಕಾರಿಗಳು ಪರಿಶೀಲನೆಗೆ ಆಗಮಿಸುವ ಸಾಧ್ಯತೆ ಇದೆ.

ಕೇಂದ್ರ ಬಿಜೆಪಿ ಸತ್ಯಶೋಧನಾ ಸಮಿತಿ: ಮಹಿಳೆಯ ಮೇಲೆ ನಡೆದ ದೌರ್ಜನ್ಯ ಘಟನೆಯನ್ನು ಇಡೀ ಭಾರತ ದೇಶ ಗಮನಿಸುತ್ತಿದೆ. ಘಟನಾ ಸ್ಥಳಕ್ಕೆ ಭೇಟಿ ನೀಡದೇ ಸಂತ್ರಸ್ತ ಮಹಿಳೆಗೆ ಸಾಂತ್ವನ ಹೇಳದ ಸಿಎಂ ಸಿದ್ದರಾಮಯ್ಯ ದೇಶದ ಮಹಿಳೆಯರ ಕ್ಷಮೆ ಕೇಳಬೇಕು ಎಂದು‌ ಬಿಜೆಪಿ ಸಂಸದೆ ಸುನಿತಾ ದುಗ್ಗಲ್ (16-12-23) ಅವರು ಆಗ್ರಹಿಸಿದ್ದರು.

ಬೆಳಗಾವಿ ಜಿಲ್ಲಾಸ್ಪತ್ರೆಯಲ್ಲಿ ನೊಂದ ಮಹಿಳೆಯ ಆರೋಗ್ಯ ವಿಚಾರಿಸಿ, ವಂಟಮೂರಿಗೆ ತೆರಳಿ ಮಾಹಿತಿ ಪಡೆದ ಬಳಿಕ ಬೆಳಗಾವಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ್ದ ಅವರು, ಕರ್ನಾಟಕದಲ್ಲಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಆರು ತಿಂಗಳಲ್ಲಿ ಈ ರೀತಿ ಕೃತ್ಯ ನಡೆದಿರುವುದು ನಿಜಕ್ಕೂ ದುರ್ದೈವದ ಸಂಗತಿ. ಘಟನೆ ಮಾಹಿತಿ ತಿಳಿದರೂ ಕೂಡ ಪೊಲೀಸರು ಯಾಕೆ ತಡವಾಗಿ ಬಂದರು? ಬೀಟ್ ಪೊಲೀಸರು ಎಲ್ಲಿದ್ದರು? ಎಂಬುದಕ್ಕೆ ಸರ್ಕಾರ ಉತ್ತರಿಸಬೇಕು. ಮುಖ್ಯಮಂತ್ರಿ ಮತ್ತು ಗೃಹ ಸಚಿವರು ಬಹಿರಂಗವಾಗಿ ಮಹಿಳಾ ಸಮುದಾಯದ ಕ್ಷಮೆ ಕೇಳಬೇಕು. ಶೀಘ್ರವೇ ಎಲ್ಲ ಆರೋಪಿಗಳನ್ನು ಬಂಧಿಸಿ, ಕಠಿಣ ಶಿಕ್ಷೆ ವಿಧಿಸಬೇಕು. ನೊಂದ ಮಹಿಳೆಯ ಕುಟುಂಬಸ್ಥರು ಸರ್ಕಾರದಿಂದ ನಮಗೆ ಯಾವುದೇ ರೀತಿ ದುಡ್ಡು ಬೇಡ. ಆರೋಪಿಗಳಿಗೆ ಗಲ್ಲು ಶಿಕ್ಷೆ ವಿಧಿಸಬೇಕು ಎಂದಿದ್ದಾರೆ. ಭವಿಷ್ಯದಲ್ಲಿ ಈ ರೀತಿಯ ಘಟನೆಗಳು ಮರುಕಳಿಸದಂತೆ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದರು.

ಇದನ್ನೂ ಓದಿ:ಬೆಳಗಾವಿ ಮಹಿಳೆ ಹಲ್ಲೆ ಪ್ರಕರಣ: ಸಿಎಂ ಇಡೀ ದೇಶದ ಮಹಿಳೆಯರ ಕ್ಷಮೆ ಕೇಳಬೇಕು: ಕೇಂದ್ರ ಬಿಜೆಪಿ ಸತ್ಯಶೋಧನಾ ಸಮಿತಿ ಆಗ್ರಹ

ABOUT THE AUTHOR

...view details