ಅಥಣಿ: 2ಎ ಮೀಸಲಾತಿಗೆ ಆಗ್ರಹಿಸಿ ಪಂಚಮಸಾಲಿ ಜಗದ್ಗುರು ಬಸವ ಜಯಮೃತ್ಯುಂಜಯ ಸ್ವಾಮೀಜಿ ಅವರ ನೇತೃತ್ವದಲ್ಲಿ ನಡೆಯುತ್ತಿರುವ ಬೆಂಗಳೂರು ಚಲೋ ಪಾದಯಾತ್ರೆ ಯಶಸ್ವಿಯಾಗಲಿದೆ ಎಂದು ಅಥಣಿ ಶಾಸಕ ಮಹೇಶ್ ಕುಮಟಳ್ಳಿ ಹೇಳಿದರು.
ಅಥಣಿ ತಾಲೂಕಿನ ಶಿನಾಳ, ತೇಲಸಂಗ, ಕೋಹಳ್ಳಿ, ಹೊಸಟ್ಟಿ, ಅಡಹಳಟ್ಟಿ, ವಿವಿಧ ಗ್ರಾಮಗಳಲ್ಲಿ ಅಂದಾಜು 30 ಕೋಟಿ ರೂ. ಅಧಿಕ ವಿವಿಧ ಕಾಮಗಾರಿ ಭೂಮಿ ಪೂಜೆ ನೆರವೇರಿಸಿ ಅವರು ಮಾತನಾಡಿದರು. ಪಂಚಮಸಾಲಿ ಸಮಾಜದ ಕೂಡಲಸಂಗಮ ಶ್ರೀಗಳು ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿ ನೀಡಬೇಕು ಎಂದು ಆಗ್ರಹಿಸಿ ಪಾದಯಾತ್ರೆ ನಡೆಸುತ್ತಿದ್ದಾರೆ.
ಪಾದಯಾತ್ರೆಗೆ ನಾನು ಎರಡು ದಿನದಲ್ಲಿ ಭಾಗವಹಿಸಿ ಬೆಂಬಲ ನೀಡುತ್ತೇನೆ. ಮತ್ತೊಂದು ಕಡೆ ಹಾಲುಮತ ಸಮಾಜದ ಶ್ರೀ ಕಾಗಿನೆಲೆ ಗುರುಗಳು ಮತ್ತು ಗಂಗಾಮತ ಸಮಾಜದವರು ಎಸ್ಟಿಯಲ್ಲಿ ಮೀಸಲಾತಿ ನೀಡಬೇಕೆಂದು ಒತ್ತಾಯಿಸುತ್ತಿದ್ದಾರೆ. ಹಾಗಾಗಿ, ನಿಯಮಾನುಸಾರ ಬೇಡಿಕೆಯನ್ನು ಈಡೇರಿಸಲು ಸಿಎಂ ಯಡಿಯೂರಪ್ಪ ಶಿಫಾರಸು ಮಾಡುತ್ತಾರೆ ಎಂದು ಭರವಸೆ ನೀಡಿದರು.