ಚಿಕ್ಕೋಡಿ(ಬೆಳಗಾವಿ): ಕರ್ನಾಟಕ ಗಡಿ ಹೊಂದಿರುವ ಮಹಾರಾಷ್ಟ್ರದ ಸಾಂಗ್ಲಿ ಜಿಲ್ಲೆಯ ಜತ್ತ್ ತಾಲೂಕಿನ ವಿವಿಧ ಗ್ರಾಮಗಳಿಗೆ ಕರ್ನಾಟಕದಿಂದ ನೀರು ಪೂರೈಕೆ ಮಾಡಲಾಗುವುದೆಂದು ಅಥಣಿ ಶಾಸಕ ಮಹೇಶ್ ಕುಮಠಳ್ಳಿ ಹೇಳಿದ್ದಾರೆ.
ಶಿರಹಟ್ಟಿಯಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಅಮ್ಮಜೇಶ್ವರಿ ಏತ ನೀರಾವರಿ ಯೋಜನೆಯು ಅಥಣಿ ತಾಲ್ಲೂಕಿನ ವಿವಿಧ ಹಳ್ಳಿಗಳ ಹಾಗೂ ಮಹಾರಾಷ್ಟ್ರದ ಜತ್ತ್ ತಾಲೂಕಿನ ವಿವಿಧ ಗ್ರಾಮಗಳಿಗೆ ನೀರು ಹರಿಸುವ ಬೃಹತ್ ಯೋಜನೆಯಾಗಿದೆ. ಈ ನೀರಾವರಿ ಯೋಜನೆ ಮುಖಾಂತರ ಮಹಾರಾಷ್ಟ್ರದ ಕನ್ನಡಿಗರಿಗೆ ನೀರು ಒದಗಿಸಲಾಗುವುದು ಎಂದು ಹೇಳಿದರು.
ಅಮ್ಮಜೇಶ್ವರಿ ಏತ ನೀರಾವರಿ ಯೋಜನೆ: ಅಮ್ಮಜೇಶ್ವರಿ ಏತ ನೀರಾವರಿ ಯೋಜನೆಗೆ ಕೆಎನ್ಎನ್ ನಿಂದ ಅನುಮೋದನೆ ನೀಡಲಾಗಿದೆ. ಹಣಕಾಸು ಇಲಾಖೆಯ ಅನುಮೋದನೆ ಬಾಕಿಯಿದೆ. ಆದಷ್ಟು ಬೇಗ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಅಥಣಿಯಲ್ಲಿ ಭೂಮಿ ಪೂಜೆ ನೆರವೇರಿಸುತ್ತಾರೆ ಎಂದು ಹೇಳಿದರು.
ಅಮ್ಮಜೇಶ್ವರಿ ಏತ ನೀರಾವರಿ ಯೋಜನೆಯು ಒಟ್ಟು 1450 ಕೋಟಿ ರೂ ಯೋಜನೆಯಾಗಿದೆ. ಇದರಲ್ಲಿ 1600 ಕೃಷಿ ಹೊಂಡ ನಿರ್ಮಾಣ,105 ಚೆಕ್ ಡ್ಯಾಮ್ ನಿರ್ಮಾಣ, 21 ಕೆರೆ ತುಂಬಿಸಲು ಈ ಬೃಹತ್ ಕಾಮಗಾರಿಯನ್ನು ಹೊಂದಿರುವ ಯೋಜನೆಯಾಗಿದೆ.