ಬೆಳಗಾವಿ: "ರಮೇಶ್ ಜಾರಕಿಹೊಳಿ ಅವರು ಪ್ರತಿ ಚುನಾವಣೆಯಲ್ಲೂ ದುಡ್ಡು ಹಂಚಿಯೇ ಗೆಲುವು ಸಾಧಿಸಿದ್ದಾರೆ. ಈ ಕುರಿತು ಗೋಕಾಕ್ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ 2018ರಲ್ಲಿ ಪ್ರಕರಣ ದಾಖಲಾಗಿದೆ" ಎಂದು ಕಾಂಗ್ರೆಸ್ ಮುಖಂಡ ಅಶೋಕ್ ಪೂಜಾರಿ ದಾಖಲಾತಿ ಬಿಡುಗಡೆ ಮಾಡಿದ್ದಾರೆ. ಬೆಳಗಾವಿ ನಗರದಲ್ಲಿ ಮಾಧ್ಯಮಗಳೊಂದಿಗೆ ಅವರು ಮಾತನಾಡಿದರು.
"ಬೆಳಗಾವಿ ಗ್ರಾಮೀಣ ಭಾಗದ ಸೂಳೇಭಾವಿ ಗ್ರಾಮದಲ್ಲಿ ನಡೆದ ಸಭೆಯಲ್ಲಿ ಚುನಾವಣೆ ವೇಳೆ ರಮೇಶ್ ಜಾರಕಿಹೊಳಿ ಹಣ ಹಂಚುವುದಿಲ್ಲ ಎಂದು ಹೇಳಿಕೆ ನೀಡಿದ್ದಾರೆ. ಆದ್ರೆ, ಇವರ ಹೇಳಿಕೆ ಸತ್ಯಕ್ಕೆ ದೂರವಾಗಿದೆ. ಗೋಕಾಕ್ ಮತಕ್ಷೇತ್ರದ ಚುನಾವಣೆ ಸಮಯದಲ್ಲಿ ಮತದಾರರಿಗೆ ಹಣ ಹಂಚಿಯೇ ಅವರು ಗೆಲುವು ಸಾಧಿಸಿದ್ದಾರೆ. ಈ ಕುರಿತು ನಮ್ಮ ಬಳಿ ದಾಖಲಾತಿ ಇದೆ" ಎಂದು ಹೇಳಿದರು.
"ಕಳೆದ 2018 ರ ಸಾರ್ವತ್ರಿಕ ಚುನಾವಣೆ ವೇಳೆ ಕೊಣ್ಣೂರ ದುರ್ಗಾದೇವಿ ದೇವಸ್ಥಾನದಲ್ಲಿ ಪ್ರತಿ ಒಬ್ಬರಿಗೆ ಎರಡು ಸಾವಿರ ರೂಪಾಯಿ ಹಣ ಹಂಚಿಕೆ ಮಾಡಿದ ಫೋಟೋಗಳು ಲಭ್ಯವಾಗಿದ್ದವು. ಇದನ್ನು ತಹಶೀಲ್ದಾರ್ ಹಾಗೂ ಪೊಲೀಸ್ ಅಧಿಕಾರಿಗಳ ಗಮನಕ್ಕೆ ತಂದರೂ ಪ್ರಕರಣದ ದಾಖಲು ಮಾಡದಿದ್ದಾಗ, ನಾವು ತಹಶೀಲ್ದಾರ್ ಕಚೇರಿಗೆ ಮುಂದೆ ಧರಣಿ ನಡೆಸಿದೆವು. ಆ ಬಳಿಕ ಗೋಕಾಕ್ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕೇಸ್ ನಂಬರ್ 138/2018" ಎಂದು ಇದೇ ವೇಳೆ ದಾಖಲಾತಿ ಬಿಡುಗಡೆ ಮಾಡಿದರು. "ಪ್ರಜಾಪ್ರಭುತ್ವ ಉಳಿವಿಗಾಗಿ ಚುನಾವಣಾ ಅಧಿಕಾರಿಗಳು ಗೋಕಾಕ್ ಮತಕ್ಷೇತ್ರಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು" ಎಂದು ಕೇಂದ್ರ ಚುನಾವಣಾ ಆಯೋಗಕ್ಕೆ ಇದೇ ಸಂದರ್ಭದಲ್ಲಿ ಮನವಿ ಮಾಡಿದರು.