ಬೆಳಗಾವಿ: ಅಕ್ಕಿ ಖರೀದಿ ವಿಚಾರದಲ್ಲಿ ಕೇಂದ್ರ ಸರ್ಕಾರದ ವಿರುದ್ಧ ಇಂದು ಬೆಳಗಾವಿ ಕಾಂಗ್ರೆಸ್ ವತಿಯಿಂದ ವಿನೂತನ ಪ್ರತಿಭಟನೆ ಹಮ್ಮಿಕೊಳ್ಳಲಾಯಿತು. ಅಕ್ಕಿ ತೂರಿ ಕೇಂದ್ರ ಸರ್ಕಾರದ ವಿರುದ್ಧ ಚೆನ್ನಮ್ಮ ವೃತ್ತದಲ್ಲಿ ಕಾಂಗ್ರೆಸ್ ಮಹಿಳಾ ಕಾರ್ಯಕರ್ತೆಯರು ಆಕ್ರೋಶ ವ್ಯಕ್ತಪಡಿಸಿದರು. ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ಲೋಕೋಪಯೋಗಿ ಇಲಾಖೆ ಸಚಿವ ಸತೀಶ್ ಜಾರಕಿಹೊಳಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ, ಕೇಂದ್ರದ ವಿರುದ್ಧ ಧಿಕ್ಕಾರದ ಘೋಷಣೆ ಮೊಳಗಿಸಿದ ಕೈ ಕಾರ್ಯಕರ್ತರು ಬೊಮ್ಮಾಯಿ ಸರ್ಕಾರ ಮನೆಗೆ ಕಳಿಸಿದಂತೆ ನರೇಂದ್ರ ಮೋದಿ ಅವರನ್ನೂ ಮನೆಗೆ ಕಳಿಸುತ್ತೇವೆ ಎಂದು ಎಚ್ಚರಿಸಿದರು.
ನಗರದ ಕಾಂಗ್ರೆಸ್ ಭವನದಿಂದ ಆರಂಭವಾದ ಪ್ರತಿಭಟನಾ ರ‍್ಯಾಲಿ ಕೋರ್ಟ್ ರಸ್ತೆ ಮೂಲಕ ಸಾಗಿ ಚನ್ನಮ್ಮ ವೃತ್ತ ತಲುಪಿತು. ರಸ್ತೆ ಮೇಲೆ ಕಂಬಳಿ ಹಾಸಿ, ಕಂಬಳಿ ಮೇಲೆ ಬುಟ್ಟಿಯಿಂದ ಅಕ್ಕಿಯನ್ನು ಸುರಿದು ಕಾಂಗ್ರೆಸ್ ಕಾರ್ಯಕರ್ತರು ಬಿಜೆಪಿ ವಿರುದ್ಧ ಪ್ರತಿಭಟಿಸಿದರು. ಇದಕ್ಕೂ ಮುನ್ನ ಮಾಧ್ಯಮದವರೊಂದಿಗೆ ಮಾತನಾಡಿದ ಲಕ್ಷ್ಮೀ ಹೆಬ್ಬಾಳ್ಕರ್, ಕೇಂದ್ರ ಸರ್ಕಾರಕ್ಕೆ ಕಣ್ಣು, ಕಿವಿ ಹಾಗೂ ಹೃದಯವಂತೂ ಮೊದಲೇ ಇಲ್ಲ. ಕೇಂದ್ರಕ್ಕೆ ಬಿಸಿ ಮುಟ್ಟುತ್ತೊ ಇಲ್ವೊ ಆಮೇಲೆ ನೋಡೋಣ. ಮೊದಲು 25 ಜನ ಸಂಸದರು ಕಣ್ಣು ತೆಗೆಯಲಿ ಎಂದು ವಾಗ್ದಾಳಿ ನಡೆಸಿದರು.
ಐದು ಗ್ಯಾರಂಟಿಗಳನ್ನು ಈಡೇರಿಸುವ ಗುರುತರ ಜವಾಬ್ದಾರಿ ರಾಜ್ಯ ಸರ್ಕಾರದ ಮೇಲಿದೆ. ಅದರಲ್ಲೂ ಅನ್ನಭಾಗ್ಯದಡಿ ಪ್ರತಿಯೊಬ್ಬರಿಗೂ 10 ಕೆಜಿ ಅಕ್ಕಿ ಕೊಡುವ ನಿರ್ಧಾರ ಮಾಡಿದ್ದೇವೆ. ಕೇಂದ್ರ ಸರ್ಕಾರ ಬಡವರ ರೈತರ ಪರವಾಗಿದೆ ಅಂತ ಹೇಳಿ ಬೊಂಬಡಾ ಹೊಡೆಯುತ್ತಿದೆ. ಜೂ.12 ಕ್ಕೆ ಎಫ್‌ಸಿಐನ ಎಂಡಿ ರಾಜ್ಯ ಸರ್ಕಾರಕ್ಕೆ ಪತ್ರ ಬರೆದಿದ್ದಾರೆ. ನಾವು ಅಕ್ಕಿಯನ್ನು ಒಂದು ಕ್ವಿಂಟಲ್ಗೆ 3400 ರೂಪಾಯಿಯಂತೆ ಕೊಡ್ತೀವಿ ಎಂದು ಹೇಳಿದ್ದಾರೆ. ಜೂನ್ 13ರಂದು ಆಹಾರ ಮತ್ತು ನಾಗರಿಕ ಪೂರೈಕೆ ಸಚಿವಾಲಯ 15 ಮೆಟ್ರಿಕ್ ಟನ್ ಅಕ್ಕಿ, ಗೋಧಿಯನ್ನು ತೆರೆದ ಮಾರುಕಟ್ಟೆಯಲ್ಲಿ ಮಾರಾಟ ಮಾಡಲು ಸೂಚನೆ ನೀಡಿದೆ. ಇದರ ಅರ್ಥ ಏನು ಎಂದು ಲಕ್ಷ್ಮೀ ಹೆಬ್ಬಾಳಕರ್ ಪ್ರಶ್ನಿಸಿದರು.