ಚಿಕ್ಕೋಡಿ:ಲಾಕ್‌ಡೌನ್ ಆದೇಶ ಉಲ್ಲಂಘಿಸಿ, ಪೊಲೀಸರ ಕಣ್ಣು ತಪ್ಪಿಸಿ ಓಡಾಡುವವರ ಮೇಲೆ ಹದ್ದಿನ ಕಣ್ಣಿಡಲು ಬೆಳಗಾವಿಯ ನಿಪ್ಪಾಣಿ ನಗರದ ಪೊಲೀಸರು ಡ್ರೋನ್ ಕ್ಯಾಮರಾದ ಮೊರೆ ಹೋಗಿದ್ದಾರೆ.
ಮಹಾಮಾರಿ ಕೊರೊನಾ ವೈರಸ್ ಸೋಂಕು ದೇಶಾದ್ಯಂತ ದಿನೇ ದಿನೆ ಹೆಚ್ಚಾಗುತ್ತಿದೆ. ದಯವಿಟ್ಟು ಮನೆಯಲ್ಲೇ ಇರಿ, ಯಾರೂ ಮನೆಯಿಂದ ಆಚೆ ಬರಬೇಡಿ. ಲಾಕ್‌ಡೌನ್ ಆದೇಶವನ್ನು ಕಟ್ಟುನಿಟ್ಟಾಗಿ ಪಾಲಿಸಿ ಎಂದು ಸರ್ಕಾರ, ಪೊಲೀಸರು ಮನವಿ ಮಾಡಿಕೊಳ್ಳುತ್ತಿದ್ದಾರೆ. ಆದರೆ ಜನ ಮಾತ್ರ ಕ್ಯಾರೆ ಎನ್ನದೆ ಓಡಾಡುತ್ತಿದ್ದಾರೆ. ಹಾಗಾಗಿ ಇಂತವರ ಮೇಲೆ ಹದ್ದಿನ ಕಣ್ಣಿಡಲು ಬೆಳಗಾವಿ ಜಿಲ್ಲೆಯ ನಿಪ್ಪಾಣಿ ನಗರದ ಪೊಲೀಸರು ಡ್ರೋನ್ ಕ್ಯಾಮರಾ ಮೊರೆ ಹೋಗಿದ್ದಾರೆ.
ಸದ್ಯ ಇರುವ ಎರಡು ಡ್ರೋನ್ ಕ್ಯಾಮರಾ ಮೂಲಕ ದಿನವಿಡೀ ನಗರದ ವಿವಿಧ ಪ್ರದೇಶ ಹಾಗೂ ಪ್ರಮುಖ ರಸ್ತೆಗಳು ಸೇರಿದಂತೆ ಅಕ್ಕಪಕ್ಕದ ಗ್ರಾಮಗಳ ಮೇಲೂ ನಿಗಾ ಇಡುತ್ತಿದ್ದಾರೆ. ಒಂದು ಕಿ.ಮೀ. ವ್ಯಾಪ್ತಿಯಲ್ಲಿ ಡ್ರೋನ್ ಹಾರಾಟ ನಡೆಸಲಿದ್ದು, ಜನಜಂಗುಳಿ ಪ್ರದೇಶಗಳನ್ನು ಸೆರೆ ಹಿಡಿದು ಪೊಲೀಸರಿಗೆ ರವಾನಿಸುತ್ತಿದೆ. ಇದಕ್ಕಾಗಿ ವಿಶೇಷ ತಂಡವನ್ನು ರಚಿಸಲಾಗಿದ್ದು, ಈ ತಂಡದ ಮಾಹಿತಿ ಆಧಾರದ ಮೇಲೆ ಲಾಕ್‌ಡೌನ್ ಉಲ್ಲಂಘಿಸಿದವರ ವಿರುದ್ಧ ತಕ್ಷಣದ ಕ್ರಮ ಕೈಗೊಳ್ಳಲಿದ್ದಾರೆ.
ನಗರದಲ್ಲಿ ಡ್ರೋನ್ ಕ್ಯಾಮರಾ ಕಾರ್ಯನಿರ್ವಹಿಸುತ್ತಿರುವುದರಿಂದ ಸಾರ್ವಜನಿಕರ ಅನಗತ್ಯ ಓಡಾಟ ಕೂಡ ಕಡಿಮೆಯಾಗಿದೆ. ಇದರಿಂದ ಎಚ್ಚರಿಕೆ ಸಂದೇಶ ರವಾನಿಸಲು ಅನುಕೂಲವಾಗಿದೆ ಅಂತಾರೆ ಪೊಲೀಸ್ ಸಿಬ್ಬಂದಿ.