ಬೆಳಗಾವಿ: ಪ್ರೀತಿಸಿದ ಹುಡುಗಿಯೊಂದಿಗೆ ಮದುವೆ ಮಾಡಿಕೊಡಲು ನಿರಾಕರಣೆ ಮಾಡಿದ್ದಕ್ಕೆ ಬಾಲಕಿಯ ತಾಯಿ ಮೇಲೆ ಮಾರಣಾಂತಿಕ ಹಲ್ಲೆ ಮಾಡಿದ ಘಟನೆ ಖಾನಾಪೂರ ಗಾಂಧಿನಗರದಲ್ಲಿ ನಡೆದಿದೆ.
ಖಾನಾಪೂರ ಪಟ್ಟಣದ ಗಾಂಧಿನಗರದ ಸಂತೋಷ ರಾಮು ವಡ್ಡರ (22) ಎಂಬಾತ ಪ್ರೇಯಸಿಯ ತಾಯಿಯ ಮೇಲೆ ಹಲ್ಲೆ ಮಾಡಿದ ಆರೋಪಿ. (ಕವಿತಾ) ಹೆಸರು ಬದಲಾಯಿಸಲಾಗಿದ್ದು, ಈತ ಹಲವು ವರ್ಷಗಳಿಂದ ಅದೇ ಗ್ರಾಮದ ಬಾಲಕಿಯನ್ನು ಪ್ರೀತಿಸುತ್ತಿದ್ದ.
ಮಹಿಳೆ ಮೇಲೆ ಮಾರಣಾಂತಿಕ ಹಲ್ಲೆ ಕಳೆದ ಹಲವು ದಿನಗಳ ಹಿಂದೆ ಇಬ್ಬರ ಪ್ರೀತಿಯ ವಿಷಯ ಕುಟುಂಬಸ್ಥರಿಗೆ ತಿಳಿದು, ಬಾಲಕಿ ಇನ್ನೂ ಅಪ್ರಾಪ್ತೆ ಇರುವುದರಿಂದ ಆತನ ಕುಟುಂಬದವರು ಮದುವೆಗೆ ವಿರೋಧ ವ್ಯಕ್ತಪಡಿಸಿದ್ದರು. ಆದರೆ, ಇದಕ್ಕೆ ಒಪ್ಪದ ಆರೋಪಿ ಯುವಕ, ಮದುವೆಯಾಗುವುದಾಗಿ ಪದೇ ಪದೆ ತೊಂದರೆ ಕಿರುಕುಳ ನೀಡುತ್ತಿದ್ದನಂತೆ.
ಕಳೆದ ಹದಿನೈದು ದಿನಗಳ ಹಿಂದಷ್ಟೇ ಬಾಲಕಿ ಮನೆ ಮೇಲೆ ದಾಳಿ ನಡೆಸಿದ್ದಾನೆ ಎನ್ನಲಾಗಿದೆ. ಆಗ ಬಾಲಕಿ ಕುಟುಂಬಸ್ಥರು ಖಾನಾಪೂರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಇದರಿಂದ ರೊಚ್ಚಿಗೆದ್ದ ಆರೋಪಿ ಇಂದು ಮತ್ತೆ ಬಾಲಕಿ ತಾಯಿಯ ಮೇಲೆ ಮಾರಣಾಂತಿಕ ಹಲ್ಲೆ ಮಾಡಿದ್ದಾನೆ. ಘಟನೆ ಸಂಬಂಧ ಖಾನಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.