ವಿದ್ಯಾರ್ಥಿ ವೇತನ ಪಾವತಿಗೆ ಆಯವ್ಯಯದಲ್ಲಿ 105 ಕೋಟಿ ಅನುದಾನ ನಿಗದಿ: ಶಿವರಾಜ ತಂಗಡಗಿ ಬೆಂಗಳೂರು/ಬೆಳಗಾವಿ: 2023-24 ನೇ ಸಾಲಿಗೆ ಮೆಟ್ರಿಕ್ ಪೂರ್ವ ವಿದ್ಯಾರ್ಥಿ ವೇತನ ಕಾರ್ಯಕ್ರಮಕ್ಕೆ ಕೇಂದ್ರದ ಪಾಲು 40 ಕೋಟಿ ರೂ ಮತ್ತು ರಾಜ್ಯದ ಪಾಲು 65 ಕೋಟಿ ರೂ. ಸೇರಿ 105 ಕೋಟಿ ರೂ. ಅನುದಾನವನ್ನು ಆಯವ್ಯಯದಲ್ಲಿ ನಿಗದಿಪಡಿಸಲಾಗಿದೆ. ಮಾರ್ಗಸೂಚಿ ಅನುಸಾರ ಅರ್ಹ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ಪಾವತಿಸಲು ಕ್ರಮ ವಹಿಸಲಾಗುತ್ತಿದೆ ಎಂದು ಹಿಂದುಳಿದ ವರ್ಗಗಳ ಕಲ್ಯಾಣ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವ ಶಿವರಾಜ ತಂಗಡಗಿ ತಿಳಿಸಿದರು.
2023-24ನೇ ಸಾಲಿನಲ್ಲಿ ಲಭ್ಯವಿರುವ ಅನುದಾನಕ್ಕೆ ಅನುಗುಣವಾಗಿ ಅರ್ಹ 9 ಮತ್ತು 10 ನೇ ತರಗತಿಯ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ಪಾವತಿಸಲಾಗುತ್ತಿದೆ ಎಂದು ಸಚಿವ ಶಿವರಾಜ ತಂಗಡಗಿ, ಶಾಸಕ ತಮ್ಮಯ್ಯ ಹೆಚ್ ಡಿ ಅವರ ಪ್ರಶ್ನೆಗೆ ಪ್ರತಿಕ್ರಿಯಿಸಿದರು.
ಅನುದಾನ ಬಿಡುಗಡೆಗೆ ಕ್ರಮ: ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಅಡಿ ನಡೆಯುತ್ತಿರುವ ವಸತಿ ನಿಲಯಗಳ ಕಟ್ಟಡ ನಿರ್ವಹಣೆಗೆ ಅಗತ್ಯಕ್ಕೆ ತಕ್ಕಂತೆ ಅನುದಾನ ಬಿಡುಗಡೆ ಮಾಡಲಾಗುತ್ತಿದೆ. ಬೇರೆ ಬೇರೆ ಕಾಮಗಾರಿಗಳಿಗೆ ಅನುದಾನ ಬಿಡುಗಡೆ ಮಾಡುವ ಪ್ರಸ್ತಾವನೆಗಳ ಬಗ್ಗೆ ಪರಿಶೀಲಿಸಿ ಅನುದಾನ ಲಭ್ಯತೆ ಆಧಾರದ ಮೇಲೆ ಹಣ ಬಿಡುಗಡೆ ಕ್ರಮ ವಹಿಸಲಾಗುವುದು ಎಂದು ಸಚಿವರು ತಿಳಿಸಿದರು.
2023-24ನೇ ಸಾಲಿನಲ್ಲಿ ಇಲಾಖೆಯ ಒಟ್ಟು 1,203 ವಿದ್ಯಾರ್ಥಿ ನಿಲಯಗಳ ಕಟ್ಟಡ ದುರಸ್ತಿ ಕಾಮಗಾರಿಗಳನ್ನು 150 ಕೋಟಿ ರೂಪಾಯಿಗಳ ವೆಚ್ಚದಲ್ಲಿ ಕೈಗೊಳ್ಳಲು ಮಂಜೂರಾತಿ ನೀಡಿದ್ದು, ಇವುಗಳಲ್ಲಿ ಬಂಗಾರಪೇಟೆಯ 3 ವಿದ್ಯಾರ್ಥಿ ನಿಲಯ ಕಟ್ಟಡಗಳ ದುರಸ್ತಿ ಕಾಮಗಾರಿಗಳು ಒಳಗೊಂಡಿರುತ್ತವೆ ಎಂದು ಸಚಿವರು, ಶಾಸಕ ಎಸ್.ಎನ್.ನಾರಾಯಣಸ್ವಾಮಿ ಅವರು ಕೇಳಿದ ಪ್ರಶ್ನೆಗೆ ಉತ್ತರಿಸಿದರು.
ಹಿಂದಿನ ಸರ್ಕಾರದ ಅವಧಿಯಲ್ಲಿ ಒಂದು ರೂಪಾಯಿ ಅನುದಾನವನ್ನು ಬಂಗಾರಪೇಟೆಗೆ ಬಿಡುಗಡೆ ಮಾಡಿಲ್ಲ. 2020-21 ರ ಅವಧಿಯಲ್ಲಿ 2 ಕೋಟಿ 73 ಲಕ್ಷ ನೀಡಲಾಗಿದೆ. ಹಾಗೂ 2022-23ರಲ್ಲಿ 1 ಕೋಟಿ 64 ಲಕ್ಷ ಅದರ ಜೊತೆಗೆ ಈಗ ಅಲ್ಲಿರುವ ಹಾಸ್ಟೆಲ್ಗಳ ದುರಸ್ತಿಗೆ 45 ಲಕ್ಷ ರೂಪಾಯಿ ಅನುದಾನವನ್ನು ಕೊಟ್ಟಿದ್ದೇನೆ, ಕಾಮಗಾರಿಯನ್ನು ಪ್ರಾರಂಭ ಮಾಡಿಸ್ತಿದ್ದೇನೆ. ಅವರು ಕೊಡುವ ಪ್ರಸ್ತಾವನೆಯನ್ನು ಪರಿಗಣಿಸಿ, ನಮ್ಮ ಅನುದಾನದ ಇತಿಮಿತಿಯೊಳಗೆ ಎಷ್ಟು ಸಾಧ್ಯವಾಗುತ್ತದೋ ಅಷ್ಟು ನಮ್ಮ ಇಲಾಖೆಯಿಂದ ಕೊಡುವ ಕೆಲಸ ಮಾಡಲಾಗುವುದು ಎಂದು ಹೇಳಿದರು.
175 ಕೋಟಿ ಅನುದಾನ: ಸ್ವಂತ ಕಟ್ಟಡಗಳ ನಿರ್ಮಾಣವನ್ನು ಆಯವ್ಯಯದಲ್ಲಿ ಹಾಗೂ ವಿದ್ಯಾರ್ಥಿ ನಿಲಯಗಳ ಕಟ್ಟಡ ನಿರ್ಮಾಣ ಕಾರ್ಯಕ್ರಮದಡಿ ಒದಗಿಸಲಾಗುತ್ತಿರುವ ಅನುದಾನದಲ್ಲಿ ಕೈಗೊಳ್ಳಲಾಗುತ್ತಿದ್ದು, 2023-24ನೇ ಸಾಲಿನಲ್ಲಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಡಿಯ ವಿದ್ಯಾರ್ಥಿ ನಿಲಯಗಳ ಕಟ್ಡಡ ನಿರ್ಮಾಣ ಕಾರ್ಯಕ್ರಮದಡಿ 175 ಕೋಟಿ ರೂ. ಅನುದಾನ ಒದಗಿಸಲಾಗಿದೆ ಎಂದು ಸಚಿವರು, ಶಾಸಕರಾದ ಚಿಮ್ಮನಕಟ್ಟಿ ಬಿಬಿ ಅವರ ಪ್ರಶ್ನೆಗೆ ಲಿಖಿತ ಉತ್ತರ ನೀಡಿದ್ದಾರೆ.
ಇದನ್ನೂ ಓದಿ:ಹಳದಿ ಎಲೆ ಹಾಗೂ ಎಲೆ ಚುಕ್ಕೆ ರೋಗ ನಿವಾರಣೆಗೆ ಸೂಕ್ತ ಕ್ರಮ: ಕೃಷಿ ಸಚಿವ ಚಲುವರಾಯಸ್ವಾಮಿ