ಕರ್ನಾಟಕ

karnataka

ETV Bharat / state

ಪಾಕಿಸ್ತಾನ ಪರ ಘೋಷಣೆ ಕೂಗಿದವರಿಗೆ ಜೀವಾವಧಿ ಶಿಕ್ಷೆಯಾಗಲಿ: ಜಮೀರ್ ಅಹ್ಮದ್ ಖಾನ್

ಪಾಕಿಸ್ತಾನದ ಪರವಾಗಿ ಘೋಷಣೆ ಕೂಗಿದವರಿಗೆ ಜೀವಾವಧಿ ಶಿಕ್ಷೆಯಾಗಲಿ, ಉದ್ದೇಶಪೂರ್ವಕವಾಗಿ ಇಂತಹ ಘೋಷಣೆಗಳನ್ನು ಕೂಗುವವರಿಗೆ ಗಲ್ಲು ಶಿಕ್ಷೆ ವಿಧಿಸಬೇಕು ಎಂದು ಮಾಜಿ ಸಚಿವ ಜಮೀರ್ ಅಹ್ಮದ್ ಖಾನ್ ಹೇಳಿದ್ದಾರೆ.

zhaheer ahamad khan outrage against pak pro slogans
ಪಾಕಿಸ್ತಾನ ಪರ ಘೋಷಣೆ ಕೂಗಿದವರಿಗೆ ಜೀವಾವಧಿ ಶಿಕ್ಷೆಯಾಗಲಿ: ಜಮೀರ್ ಅಹ್ಮದ್ ಖಾನ್

By

Published : Feb 21, 2020, 11:04 PM IST

ಬೆಂಗಳೂರು:ಪಾಕಿಸ್ತಾನದ ಪರವಾಗಿ ಘೋಷಣೆ ಕೂಗಿದವರಿಗೆ ಜೀವಾವಧಿ ಶಿಕ್ಷೆಯಾಗಲಿ. ಉದ್ದೇಶಪೂರ್ವಕವಾಗಿ ಇಂತಹ ಘೋಷಣೆಗಳನ್ನು ಕೂಗುವವರಿಗೆ ಗಲ್ಲು ಶಿಕ್ಷೆ ವಿಧಿಸಬೇಕೆಂದು ಮಾಜಿ ಸಚಿವ ಜಮೀರ್ ಅಹ್ಮದ್ ಖಾನ್ ಒತ್ತಾಯಿಸಿದ್ದಾರೆ.

ನಗರದಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಫ್ರೀಡಂಪಾರ್ಕ್​ಲ್ಲಿ ಸಂಸದ ಅಸಾದುದ್ದೀನ್ ಓವೈಸಿ ಗುರುವಾರ ಸಿಎಎ, ಎನ್‌ಆರ್‌ಸಿ ವಿರುದ್ಧ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ವೇಳೆ ಯುವತಿ ಅಮೂಲ್ಯ ಪಾಕಿಸ್ತಾನದ ಪರವಾಗಿ ಘೋಷಣೆ ಕೂಗಿದ್ದನ್ನು ನಾನು ಮಾಧ್ಯಮಗಳಲ್ಲಿ ನೋಡಿದ್ದೇನೆ‌. ಏನೋ ಒಂದು ಬಾರಿ ಹೇಳಿದ್ದರೆ ಬಾಯಿ ತಪ್ಪಿ ಹೇಳಿರಬಹುದು ಎಂದು ಭಾವಿಸಬಹುದಿತ್ತು. ಆದರೆ, ಒಂದೇ ಘೋಷಣೆಯನ್ನು ಮೂರು ಬಾರಿ ಹೇಳಿದ್ದಾಳೆ. ವೇದಿಕೆ ಮೇಲೆ ಇದ್ದವರು ಘೋಷಣೆ ಕೂಗದಂತೆ ಆಕೆಯನ್ನು ತಡೆಯಲು ಪ್ರಯತ್ನಿಸಿದರೂ ಆಕೆ ಸುಮ್ಮನಾಗಲಿಲ್ಲ. ಈ ಘಟನೆಯನ್ನು ತೀವ್ರವಾಗಿ ಖಂಡಿಸುತ್ತೇನೆ ಎಂದರು.

ಪಾಕಿಸ್ತಾನದ ಪರವಾಗಿ ಆಕೆ ಘೋಷಣೆ ಕೂಗುತ್ತಾಳೆ ಎಂದು ಯಾರೂ ನಿರೀಕ್ಷಿಸಿರಲಿಲ್ಲ. ಆಕೆ ಭಾಷಣ ಮಾಡಿದ ಎರಡು, ಮೂರು ಕಾರ್ಯಕ್ರಮಗಳಲ್ಲಿ ನಾನು ಭಾಗವಹಿಸಿದ್ದೆ. ಆಗ ಆಕೆ ಈ ರೀತಿ ಮಾಡಿರಲಿಲ್ಲ. ನಾಯಂಡನಹಳ್ಳಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ನಾನು ಆಹ್ವಾನ ನೀಡದೆ ಇದ್ದರೂ ಸ್ವಯಂ ಪ್ರೇರಿತವಾಗಿ ಆ ಯುವತಿ ಬಂದಿದ್ದಳು ಎಂದು ತಿಳಿಸಿದರು. ಉದ್ದೇಶಪೂರ್ವಕವಾಗಿ ಪಾಕಿಸ್ತಾನದ ಪರವಾಗಿ ಘೋಷಣೆ ಕೂಗುವವರಿಗೆ ಗಲ್ಲು ಶಿಕ್ಷೆ ವಿಧಿಸಬೇಕು. ಅಮೂಲ್ಯ ಹಾಗೂ ಕಾಂಗ್ರೆಸ್ ನಡುವೆ ಯಾವುದೇ ಸಂಬಂಧವಿಲ್ಲ. ಆಕೆಯ ಹಿನ್ನೆಲೆ ಕುರಿತು ಪೊಲೀಸರು ತನಿಖೆ ನಡೆಸಿ, ಕಾನೂನು ಪ್ರಕಾರ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಜಮೀರ್​​ ಅಹ್ಮದ್​ ಖಾನ್​ ಒತ್ತಾಯಿಸಿದರು.

ABOUT THE AUTHOR

...view details