ಬೆಂಗಳೂರು:ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅವರು, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಬಗ್ಗೆ ನೀಡಿರುವ ಅವಹೇಳನಕಾರಿ ಹೇಳಿಕೆಯನ್ನು ಖಂಡಿಸಿ ಯುವ ಕಾಂಗ್ರೆಸ್ ಕಾರ್ಯಕರ್ತರು ರಾಜ್ಯಾಧ್ಯಕ್ಷ ಮೊಹಮ್ಮದ್ ನಲ್ಪಾಡ್ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದರು.
ಬೆಂಗಳೂರಿನ ಮೌರ್ಯ ಸರ್ಕಲ್ ಬಳಿ ಪ್ರತಿಭಟನೆ ನಡೆಸಿದ ಯುವ ಕಾಂಗ್ರೆಸ್ ಕಾರ್ಯಕರ್ತರು ಸಮೀಪದ ಕಾಂಗ್ರೆಸ್ ಭವನದವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿದರು. ಈ ಸಂದರ್ಭದಲ್ಲಿ ಅಸ್ಸಾಂ ಸಿಎಂ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಅಸ್ಸಾಂ ಸಿಎಂ ಹೇಳಿದ್ದೇನು?: ಸರ್ಜಿಕಲ್ ಸ್ಟ್ರೈಕ್ ಮತ್ತು ಕೋವಿಡ್ ಲಸಿಕೆ ಕುರಿತು ಅನುಮಾನ ವ್ಯಕ್ತಪಡಿಸಿದ್ದ ರಾಹುಲ್ ಗಾಂಧಿ ಬಗ್ಗೆ ಉತ್ತರಾಖಂಡ ವಿಧಾನಸಭಾ ಚುನಾವಣೆ ಬಿಜೆಪಿ ಪ್ರಚಾರದಲ್ಲಿ ಮಾತನಾಡಿದ್ದ ಶರ್ಮಾ, ರಾಹುಲ್ ಗಾಂಧಿ ಮಾಜಿ ಪ್ರಧಾನಿ ರಾಜೀವ್ ಗಾಂಧಿಯವರ ಮಗ ಎಂಬುದಕ್ಕೆ ಬಿಜೆಪಿ ಎಂದಾದರೂ ಯಾವುದೇ ಪುರಾವೆಯನ್ನು ಕೇಳಿದೆಯೇ? ಎಂದು ಪ್ರಶ್ನಿಸಿದ್ದರು.
ಪ್ರತಿಭಟನೆ ವೇಳೆ ಕಾಂಗ್ರೆಸ್ ಕಾರ್ಯಕರ್ತರು ಅಸ್ಸಾಂ ಸಿಎಂ ಮುಖವಾಡ ಧರಿಸಿದ್ದ ವ್ಯಕ್ತಿಯ ಕೇಶ ಮುಂಡನ ಮಾಡಿ, ಕತ್ತೆ ಮೇಲೆ ಕೂರಿಸಿ ಮೆರವಣಿಗೆ ಮಾಡಿ, ಮುಖ್ಯಮಂತ್ರಿಯ ಪ್ರತಿಕೃತಿಗೆ ಚಪ್ಪಲಿ ಹಾಕಿ ಆಕ್ರೋಶ ವ್ಯಕ್ತಪಡಿಸಿದರು.
ಎದ್ದು ಕಾಣುತ್ತಿದ್ದ ಹೊಂದಾಣಿಕೆ ಕೊರತೆ: ಯುವ ಕಾಂಗ್ರೆಸ್ ಪ್ರತಿಭಟನೆಯಲ್ಲಿ ಹೊಂದಾಣಿಕೆ ಕೊರತೆ ಎದ್ದು ಕಾಣುತ್ತಿತ್ತು. ಕಾರ್ಯಕರ್ತರು ಪ್ರತ್ಯೇಕವಾಗಿ ಒಂದೇ ಸ್ಥಳದಲ್ಲಿ ಎರಡು ಸಮಯದಲ್ಲಿ ಪ್ರತಿಭಟನೆ ನಡೆಸುವ ಮೂಲಕ ಗೊಂದಲ ಮೆರೆದರು. ಯುವ ಕಾಂಗ್ರೆಸ್ ಅಧ್ಯಕ್ಷ ಮೊಹಮ್ಮದ್ ನಲ್ಪಾಡ್ ಪ್ರತಿಭಟನೆ ನಡೆಸುವ ಮಾಹಿತಿ ಇದ್ದರೂ, ಕೆಲ ಸಮಯ ಮೊದಲು ಯುವ ಕಾಂಗ್ರೆಸ್ ನಾಯಕ ಎಸ್.ಮನೋಹರ್ ನೇತೃತ್ವದಲ್ಲಿ ಕಾಂಗ್ರೆಸ್ನ ಕೆಲ ಕಾರ್ಯಕರ್ತರು ಬೆಂಗಳೂರಿನ ರೇಸ್ ಕೋರ್ಸ್ ರಸ್ತೆಯ ಕಾಂಗ್ರೆಸ್ ಭವನದಲ್ಲಿ ಪ್ರತಿಭಟನೆ ನಡೆಸಿದರು.
ಇವರ ಪ್ರತಿಭಟನೆ ಮುಗಿದ ಕೆಲ ಸಮಯದಲ್ಲೇ ಮೌರ್ಯ ವೃತ್ತದಿಂದ ಮೆರವಣಿಗೆ ಮೂಲಕ ಆಗಮಿಸಿದ ಯುವ ಕಾಂಗ್ರೆಸ್ ಅಧ್ಯಕ್ಷ ಮೊಹಮ್ಮದ್ ನಲ್ಪಾಡ್ ನೇತೃತ್ವದ ತಂಡ ಕಾಂಗ್ರೆಸ್ ಭವನ ಮುಂಭಾಗ ಪ್ರತಿಭಟನೆ ನಡೆಸಿತು.
ಇದನ್ನೂ ಓದಿ:ಐದು ವರ್ಷವಾದ್ರೂ ತೆರಿಗೆ ಕೊರತೆ ನೀಗಿಸದ ಜಿಎಸ್ಟಿ; ರಾಜ್ಯದ ತೆರಿಗೆ ಸಂಗ್ರಹದ ಪ್ರಗತಿ ಹೇಗಿದೆ?